ಸಾಗರ : ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲೆ, ತಾಲೂಕು, ಹೋಬಳಿ ಸಮಿತಿ ಮತ್ತು ಚೆನ್ನಮ್ಮಾಜಿ ಜಾನಪದ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ 6ನೇ ಜಾನಪದ ಸಮ್ಮೇಳನ ದಿನಾಂಕ 09 ಮಾರ್ಚ್ 2025ರ ಭಾನುವಾರದಂದು ಸಾಗರ ತಾಲೂಕಿನ ಆನಂದಪುರ ಸಮೀಪದ ಚನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರಿನ ಜಾನಪದ ವಿದ್ವಾಂಸ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ “ಮಲೆನಾಡು ಜಾನಪದ ಕ್ಷೇತ್ರಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ್ದು ಅಂತಹ ಸೂಕ್ಷ್ಮ ಜಾನಪದ ಸಂಗತಿಗಳ ದಾಖಲೀಕರಣ ಆಗಬೇಕಿದೆ. ಮೌಖಿಕ ಪರಂಪರೆ ನಮಗೆ ಅಪಾರ ಕೊಡುಗೆ ನೀಡಿದೆ. ನೂರಾರು ವರ್ಷಗಳ ಜಾನಪದ, ಸಾಹಿತ್ಯ ಹಾಗೂ ಮೌಖಿಕ ಪರಂಪರೆಯನ್ನು ದಾಖಲಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಅಂತಹ ಅಮೂಲ್ಯ ಜಾನಪದ ಸಂಪತ್ತನ್ನು ಹೊಸ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಿಲ್ಲೆಯಲ್ಲಿ ನಡೆದಿರುವ ಜಾನಪದ ಸಾಹಿತ್ಯ ಪರಂಪರೆ, ಚಳವಳಿಗಳು, ಸಾಹಿತ್ಯ ಕೃಷಿ ಎಲ್ಲವೂ ಇಡೀ ರಾಜ್ಯಕ್ಕೆ ಹೊಸ ದಿಕ್ಕನ್ನು ತೋರಿಸಿವೆ” ಎಂದರು.
ಸಮ್ಮೇಳನಾಧ್ಯಕ್ಷ ಟಾಕಪ್ಪ ಬಿ. ಕಣ್ಣೂರು ಮಾತನಾಡಿ “ನಾನು ಬಾಳಿ ಬದುಕಿದ ನೆಲದಲ್ಲಿ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಅವಕಾಶ ಸಿಕ್ಕಿದ್ದು ಸಂತೋಷವಾಗಿದೆ. ಆಧುನಿಕತೆಯ ಅವಶ್ಯಕತೆಗಳಿಗೆ ತಕ್ಕಂತೆ ಜನಪದ ಸಾಹಿತ್ಯದೊಳಗೆ ಏನನ್ನೂ ಸೇರಿಸದೆ, ಮೂಲ ಸಾಹಿತ್ಯ ಉಳಿಸಿಕೊಂಡಾಗ ಮಾತ್ರ ನಿಜವಾದ ಮೌಲ್ಯ ನೀಡಿದಂತೆ ಆಗುತ್ತದೆ” ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ “ಸರಕಾರ ಸಾಹಿತ್ಯ ಸಮ್ಮೇಳನಗಳಿಗೆ ಅನುದಾನ ನೀಡಲು ಮುಂದಾಗಬೇಕು. ನಗರ ಕೇಂದ್ರಿತವಾಗಿ ಸಮ್ಮೇಳನಗಳನ್ನು ಆಯೋಜಿಸುವುದಕ್ಕಿಂತ ಗ್ರಾಮೀಣ ಆಯೋಜಿಸಿರುವುದು ಉತ್ತಮ” ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಮಾತನಾಡಿ “ಜಾಗತೀಕರಣದ ಜಾಡಿನಲ್ಲಿ ಎಲ್ಲವೂ ಜಾಳಾಗಿದೆ. ಗಟ್ಟಿತನದ ಸಾಹಿತ್ಯ ಉಳಿಸಿಕೊಳ್ಳಬೇಕಿದೆ. ವೃತ್ತಿ ನಿರತ ಮತ್ತು ಸಾಂಪ್ರದಾಯಿಕ ಕಲೆಗಳನ್ನು ಉಳಿಸುವ ಜೊತೆಗೆ ಕಲೆ ಮತ್ತು ಕಲಾವಿದರನ್ನು ಜೀವಂತವಾಗಿಡುವ ಪ್ರೇರಣೀಯ ಕಾರ್ಯ ಸಮ್ಮೇಳನಗಳಿಂದ ಸಾಧ್ಯ” ಎಂದರು.
ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ ಇವರನ್ನು ಸನ್ಮಾನಿಸಲಾಯಿತು. ಹಿಂದಿನ ಸಮ್ಮೇಳನದ ಸರ್ವಾಧ್ಯಕ್ಷ ಬೇಗೂರು ಶಿವಪ್ಪ, ಪ್ರಮುಖರಾದ ಗುಡ್ಡಪ್ಪ ಜೋಗಿ, ಸಾಗರದ ಚರಕ ಭಾಗೀರಥಿ, ಕಲಗೋಡು ರತ್ನಾಕರ್, ಬಿ. ಚಂದ್ರೇಗೌಡ, ಯು.ಮಧುಸೂದನ್ ಐತಾಳ್, ಸತ್ಯನಾರಾಯಣ ಸಿರಿವಂತೆ, ಗುಡುವಿ ಸ್ವಾಮಿ ಉಪಸ್ಥಿತರಿದ್ದರು.