ಉಡುಪಿ : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ಸುವರ್ಣ ಪರ್ವ -8ರ ಸರಣಿಯಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ನೆರವಿನೊಂದಿಗೆ ‘ಮಕ್ಕಳ ಯಕ್ಷಗಾನ ರಂಗಭೂಮಿ’ ಒಂದು ದಿನದ ಯಕ್ಷಗಾನ ಗೋಷ್ಠಿಯನ್ನು ದಿನಾಂಕ 16 ಮಾರ್ಚ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಮಂಗಳೂರಿನ ಯಕ್ಷಗಾನ ವಿದ್ವಾಂಸರು ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಷಿ ಇವರು ಪ್ರಧಾನ ದಿಕ್ಸೂಚಿ ಭಾಷಣ ಮಾಡಲಿದ್ದು, ಮಕ್ಕಳ ಯಕ್ಷಗಾನ ಕ್ಷೇತ್ರದ ಸಾಧಕರಾದ ಬಿ. ಕೇಶವ ಬಡಾನಿಡಿಯೂರು ಇವರಿಗೆ ‘ಸುವರ್ಣಪರ್ವ ಗೌರವ ಪುರಸ್ಕಾರ’ ನೀಡಿ ಗೌರವಿಸಲಾಗುವುದು. 11-00 ಗಂಟೆಗೆ ನಡೆಯಲಿರುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಉಡುಪಿಯ ಯಕ್ಷಗಾನ ಗುರು ವಿದ್ವಾಂಸ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳ್ ಇವರು ವಹಿಸಲಿದ್ದು, ಯಕ್ಷಗಾನ ಗುರು ದೇವದಾಸ್ ರಾವ್ ಕೂಡ್ಲಿ ಮತ್ತು ಪತ್ರಕರ್ತರಾದ ರಾಜಲಕ್ಷ್ಮೀ ಕೋಡಿಬೆಟ್ಟು ಇವರು ಪ್ರತಿಸ್ಪಂದನೆ ನೀಡಲಿರುವರು. ‘ಮಕ್ಕಳ ಯಕ್ಷಗಾನ – ಪ್ರಸಂಗ ಸಾಹಿತ್ಯ’ ಎಂಬ ವಿಷಯದ ಬಗ್ಗೆ ಪ್ರಸಂಗ ಸಾಹಿತಿ ಪ್ರೊ. ಶ್ರೀಧರ ಡಿ.ಎಸ್., ‘ಮಕ್ಕಳ ಯಕ್ಷಗಾನ – ತರಬೇತಿಯ ಸವಾಲುಗಳು’ ಎಂಬ ವಿಷಯದ ಬಗ್ಗೆ ಪ್ರಸಂಗ ಸಾಹಿತಿ ಪ್ರಸಾದ ಕುಮಾರ್ ಮೊಗೆಬೆಟ್ಟು ಮತ್ತು ‘ಮಕ್ಕಳ ಯಕ್ಷಗಾನ – ರಂಗ ಪ್ರಸ್ತುತತೆ’ ಎಂಬ ವಿಷಯದ ಬಗ್ಗೆ ರಂಗಕರ್ಮಿಗಳಾದ ಅಭಿಲಾಷ ಎಸ್. ಇವರುಗಳು ವಿಷಯ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 2-30 ಗಂಟೆಗೆ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದವರಿಂದ ರಾಜೇಶ್ ಕಟೀಲು ಇವರ ನಿರ್ದೇಶನದಲ್ಲಿ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.