ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಕನ್ನಡ ವೀರ ಸೇನಾನಿ ಮ. ರಾಮಮೂರ್ತಿಯವರು 1918 ಮಾರ್ಚ್ 11ರಂದು ನಂಜನಗೂಡಿನಲ್ಲಿ ಜನಿಸಿದರು. ತಂದೆ ವೀರಕೇಸರಿ ಸೀತಾರಾಮ ಶಾಸ್ತ್ರಿ ಮತ್ತು ತಾಯಿ ಸುಬ್ಬಮ್ಮ. ಶಾಲಾ ವಿದ್ಯಾರ್ಥಿಯಾಗಿರುವಾಗ ಇವರಿಗೆ ಕಾವ್ಯಗಳ ಬಗ್ಗೆ ಆಸಕ್ತಿ ಹುಟ್ಟಿಸಿದವರು ಆ ಶಾಲೆಯ ಅಧ್ಯಾಪಕರಾಗಿದ್ದ ಸುಬ್ರಹ್ಮಣ್ಯ ಅಯ್ಯರ್. ಮಾಧ್ಯಮಿಕ ಶಾಲೆಯ ನಂತರ ಮುಂದಿನ ವಿದ್ಯಾಭ್ಯಾಸ ಬೆಂಗಳೂರಿನ ಗಾಂಧಿನಗರದ ಆರ್ಯ ವಿದ್ಯಾಶಾಲೆಯಲ್ಲಿ. ಇಲ್ಲಿ ಇವರ ಸಾಹಿತ್ಯಾಸಕ್ತಿಯನ್ನು ಪೋಷಿಸಿದವರು ಮುಖ್ಯೋಪಾಧ್ಯಾಯರಾದ ಮಹಾನ್ ಸಾಹಿತಿ ದೇವುಡು. ಉತ್ತಮ ಸಾಹಿತ್ಯದ ವಾತಾವರಣ ದೊರೆತ ಕಾರಣದಿಂದಾಗಿ ಅವರಿಂದ ರಚನೆಗೊಂಡ ಮೊದಲ ಕಥೆ ‘ಗುರುದಕ್ಷಿಣೆ’. ಈ ಕಥೆಯನ್ನು ಅಶ್ವತ್ಥನಾರಾಯಣರು ತಾವು ಮಕ್ಕಳಿಗಾಗಿ ಪ್ರಕಟಿಸುತ್ತಿದ್ದ ‘ಮಕ್ಕಳ ಪುಸ್ತಕ’ದಲ್ಲಿ ಪ್ರಕಟಿಸಿದರು. ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಆರಂಭಿಸಿದ್ದ ರಾಮಮೂರ್ತಿಯವರು ಈ ಸಂದರ್ಭದಲ್ಲಿ ಅಶ್ವತ್ಥನಾರಾಯಣರ ಅನೇಕ ಪುಸ್ತಕಗಳನ್ನು ಪಡೆದುಕೊಂಡು ಓದಿದ್ದರು. ಇಲ್ಲಿಂದ ಮುಂದೆ ಇವರ ಸಾಹಿತ್ಯ ರಚನೆಗೆ ಮುನ್ನಡೆ ದೊರೆಯಿತು.
ಸ್ವಾತಂತ್ರ್ಯ ದೊರೆತ ಆರಂಭದಲ್ಲಿ ಜನರಲ್ಲಿ ಕನ್ನಡದ ಅರಿವನ್ನು ಮೂಡಿಸುವುದಕ್ಕಾಗಿ ಕನ್ನಡವನ್ನು ಎಲ್ಲರೂ ಓದಬೇಕೆಂಬು ಉದ್ದೇಶದಿಂದ ಕುತೂಹಲಭರಿತ ಪತ್ತೇದಾರಿ ಕಾದಂಬರಿಯ ರಚನೆಗೆ ರಾಮಮೂರ್ತಿಯವರು ಮುಂದಾದರು. ಹೀಗೆ ಬರೆದವರು ವಿಪ್ಲವ, ಚಿತ್ರಲೇಖ, ವಿಷಕನ್ಯೆ, ಮರೆಯಾಗಿದ್ದ ವಜ್ರಗಳು ಹೀಗೆ 150ಕ್ಕೂ ಹೆಚ್ಚು ಕಾದಂಬರಿಗಳ ರಚನೆಮಾಡಿದರು. ಇದರೊಂದಿಗೆ ‘ಇಬ್ಬರು ರಾಣಿಯರು’ ಚಾರಿತ್ರಿಕ ವರ್ಣನೆಗಳಿಂದ ಕೂಡಿದ ಕಾದಂಬರಿಯಾದರೆ, ‘ರಾಜದಂಡ’ ಅಪೂರ್ವವಾದ ಚಾರಿತ್ರಿಕ ಕಾದಂಬರಿ.
ರಾಜ್ಯೋತ್ಸವ ಸಂದರ್ಭದಲ್ಲಿ ಕರ್ನಾಟಕದ ಎಲ್ಲೆಡೆ ಕನ್ನಡ ಬಾವುಟವನ್ನು ಹಾರಿಸುವುದು ಕನ್ನಡದ ಮೇಲಿನ ಅಭಿಮಾನದ ಸಂಕೇತ. ಬಾವುಟದ ಮೇಲಿನ ಭಾಗ ಹಳದಿ ಕೆಳಗಿನ ಭಾಗವು ಕೆಂಪು ಬಣ್ಣವನ್ನು ಹೊಂದಿರುತ್ತದೆ. ಅಭಿವೃದ್ಧಿಯ ಸಂಕೇತವಾದ ಕೆಂಪುಬಣ್ಣ ಮತ್ತು ಆರೋಗ್ಯದಿಂದ ಕೂಡಿದ ಸಮಾಜದ ಸಂಕೇತವಾದ ಅರಶಿನ ಬಣ್ಣ ಇವೆರಡೂ ಮಂಗಲ ಮತ್ತು ಯೋಗಕ್ಷೇಮವನ್ನು ಸೂಚಿಸುತ್ತದೆ. ಇವುಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಬಾವುಟದ ರಚನೆ ಮಾಡಿದವರು ಮ. ರಾಮಮೂರ್ತಿಯವರೇ.
1960ರಲ್ಲಿ ಅನ್ಯ ಭಾಷೆಗಳ ಪ್ರಾಬಲ್ಯದಿಂದ ಬೆಂಗಳೂರು ನಗರದಲ್ಲಿ ಕನ್ನಡಕ್ಕೆ ಸ್ನಾನಮಾನ ಇಲ್ಲದೆ ಹೋಗಿ, ಹೀನಾಯ ಸ್ಥಿತಿ ತಲುಪಿದಾಗ ಕನ್ನಡಿಗರಲ್ಲಿ ಜಾಗೃತಿ ಮೂಡಿಸಲು ಚಳುವಳಿ ಹೊಟ್ಟಿಕೊಂಡಿತು. ಕೋಣಂದೂರು ಲಿಂಗಪ್ಪ, ನಾಡಿಗೆರ ಕೃಷ್ಣ ರಾವ್, ಕರ್ಲಮಂಗಲ ಶ್ರೀಕಂಠಯ್ಯ ಇವರೆಲ್ಲ ಇದರಲ್ಲಿ ದುಡಿದವರು. ಕಲಾವಿದರಿಗೆ ಗೌರವ, ಬಿಡುಗಡೆಯಾದ ಚಲನಚಿತ್ರಗಳಿಗೆ ಚಿತ್ರಮಂದಿರ ದೊರೆಯುವಂತೆ ಮಾಡುವುದು, ಚಲನಚಿತ್ರ ರಂಗದಲ್ಲಿ ಕನ್ನಡಿಗರಿಗೆ ಆದ್ಯತೆ, ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶದ ಉದ್ದೇಶವನ್ನು ಇಟ್ಟುಕೊಂಡು ‘ಕನ್ನಡ ಸಂಯುಕ್ತ ರಂಗ’ ಎಂಬ ಸಂಘಟನೆಯನ್ನು ಸ್ಥಾಪಿಸಿದರು.
ಸ್ವಾತಂತ್ರ್ಯ ದೊರೆತ ಆರಂಭದಲ್ಲಿ ಕನ್ನಡ ನಾಡಿನ ರಚನೆಯಾದ ಸ್ವಲ್ಪ ಕಾಲದ ನಂತರ ಎಲ್ಲಾ ಕಡೆಯೂ ಕನ್ನಡದ ಸ್ಥಾನಮಾನಕ್ಕೆ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬರುವ ಸಂದರ್ಭದಲ್ಲಿ ಅ. ನ. ಕೃ. ಮತ್ತು ಮ. ರಾಮ ಮೂರ್ತಿಯವರು ಚಳುವಳಿಗೆ ಪ್ರವೇಶ ಮಾಡಿದ ನಂತರ, 1962 ಫೆಬ್ರವರಿ 4 ರಂದು ‘ಬೆಂಗಳೂರು ಕನ್ನಡಿಗರ ಸಮಾವೇಶ ನಡೆಸಿ, ‘ಕನ್ನಡ ಯುವಜನ’ ಎಂಬ ಪಾಕ್ಷಿಕ ಪತ್ರಿಕೆಯನ್ನು ಹೊರಡಿಸಿರು. ಅದೇ ರೀತಿ ‘ಕರ್ನಾಟಕ ಸಯುಕ್ತರಂಗ’ ಎಂಬ ಸಂಸ್ಥೆಯ ಸಂಘಟನೆಯಲ್ಲಿ ಅ, ನ. ಕೃ. ಅಧ್ಯಕ್ಷರಾಗುವುದರೊಂದಿಗೆ ಮ. ರಾಮಮೂರ್ತಿಯವರು ಕಾರ್ಯದರ್ಶಿಯಾಗಿ ಬಹಳಷ್ಟು ಚಿಂತನೆಗಳೊಂದಿಗೆ ಕೆಲಸವನ್ನು ಮಾಡಿದರು.
ತಂದೆ ವೀರಕೇಸರಿ ಸೀತಾರಾಮಶಾಸ್ತ್ರಿಯವರು ತಾವು ನಡೆಸುತ್ತಿದ್ದ ‘ವೀರ ಕೇಸರಿ’ ಪತ್ರಿಕೆಯನ್ನು ಸಂಪೂರ್ಣವಾಗಿ ಸ್ವಾತಂತ್ರ್ಯಪರ ಕೆಲಸಗಳಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ರಾಮಮೂರ್ತಿಯವರು ತಂದೆಗೆ ಸಹಕರಿಸಿದರು. ಒಂದು ಸಂದರ್ಭದಲ್ಲಿ ‘ವೀರಕೇಸರಿ’ ಪತ್ರಿಕೆ ಸ್ಥಗಿತಗೊಂಡಾಗ ರಾಮಮೂರ್ತಿಯವರೇ ‘ಕಥವಾಣಿ’, ‘ವಿನೋದವಾಣಿ’ ಮತ್ತು ‘ವಿನೋದಿನಿ’ ಮುಂತಾದ ಪತ್ರಿಕೆಗಳನ್ನು ಆರಂಭಿಸಿದರು.
ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸುವಲ್ಲಿ ಅಪಾರವಾಗಿ ಶ್ರಮಿಸಿದವರು ರಾಮಮೂರ್ತಿಯವರು. ಇಂದು ಕನ್ನಡ ಭಾಷೆಗೆ ಗೌರವ ತಂದುಕೊಟ್ಟ ಅನೇಕ ಮಂದಿ ಮಹನೀಯರಲ್ಲಿ ರಾಮಮೂರ್ತಿಯವರೂ ಒಬ್ಬರು.
ಕನ್ನಡಕ್ಕಾಗಿ ಪ್ರಾಮಾಣಿಕ ಹೋರಾಟ ನಡೆಸಿದ ಮ. ರಾಮಮೂರ್ತಿಯವರು ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕೆಂಬ ಹಂಬಲದಿಂದ ಕನಕಪುರ ರಸ್ತೆಯ ತಲಘಟ್ಟಪುರದ ಜಮೀನಿನಲ್ಲಿ ನೀರಿಗಾಗಿ ಬಾವಿ ತೋಡಿದರು. ಬಾವಿಯಲ್ಲಿ ನೀರು ಬಂದ ಸಂತೋಷದಿಂದ ತಮ್ಮಿಬ್ಬರು ಗಂಡು ಮಕ್ಕಳೊಂದಿಗೆ ಬಾವಿಗಿಳಿದಾಗ ಮಣ್ಣು ಬಾವಿಯೊಳಗೆ ಕುಸಿದು ಬಿದ್ದು ತಮ್ಮಿಬ್ಬರು ಮಕ್ಕಳೊಂದಿಗೆ 25 ಡಿಸೆಂಬರ್ 1967ರಲ್ಲಿ ಇಹವನ್ನು ತ್ಯಜಿಸಿದರು. ಈ ಕನ್ನಡ ಸೇನಾನಿಯ ಅಮರ ಚೇತನಕ್ಕೆ ಅನಂತ ನಮನ