ದಾವಣಗೆರೆ : ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ಇದರ ವತಿಯಿಂದ ಕನ್ನಡ, ತೆಲುಗು ಮತ್ತು ತಮಿಳು ನಾಟಕಗಳ ಹಬ್ಬ ‘ರಾಷ್ಟ್ರೀಯ ವೃತ್ತಿ ರಂಗೋತ್ಸವ-2025’ವನ್ನು ದಿನಾಂಕ 15 ಮಾರ್ಚ್ 2025ರಿಂದ 17 ಮಾರ್ಚ್ 2025ರವರೆಗೆ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಚಾರ ಸಂಕಿರಣ, ರಂಗ ಸಂವಾದ, ರಂಗ ಗೌರವ, ರಂಗ ಗೀತೆಗಳ ಗಾಯನ, ನಾಟಕಗಳ ಪ್ರದರ್ಶನ, ರಂಗ ದಾಖಲೆಗಳ ಪ್ರದರ್ಶನ ಮತ್ತು ಚಿತ್ರಕಲಾ ಪ್ರದರ್ಶನ ನಡೆಯಲಿದೆ.
ದಿನಾಂಕ 15 ಮಾರ್ಚ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಪದ್ಮಶ್ರೀ ಚಿಂದೋಡಿ ಲೀಲಾ ರಂಗವೇದಿಕೆಯಲ್ಲಿ ದಾವಣಗೆರೆಯ ಪ್ರತಿಮಾ ಸಭಾದ ಗೌರವಾಧ್ಯಕ್ಷರಾದ ಪ್ರೊ. ಎಸ್. ಹಾಲಪ್ಪ ಇವರು ವಿಚಾರ ಸಂಕಿರಣದ ಉದ್ಘಾಟನೆ ಮಾಡಲಿದ್ದು, ‘ಪರಂಪರೆಯ ಕಣ್ಮರೆ : ಬದಲಾಗುತ್ತಿರುವ ವ್ಯಕ್ತಿ ರಂಗ ಸ್ವರೂಪ’ ಎಂಬ ವಿಷಯದ ಬಗ್ಗೆ ಡಾ. ವಿಶ್ವನಾಥ ಹಾಗೂ ‘ವೃತ್ತಿಪರತೆ ಮತ್ತು ಆಧುನಿಕ ರಂಗಚಿಂತನೆಗಳು’ ಎಂಬ ವಿಷಯದ ಬಗ್ಗೆ ಮಹ್ಮದಲಿ ಆರ್. ಹೊಸೂರ ಇವರು ವಿಷಯ ಮಂಡನೆ ಮಾಡಲಿದ್ದಾರೆ. 11-30 ಗಂಟೆಗೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಡಿ. ಕುಂಬಾರ ಇವರು ಚಿತ್ರಕಲೆ ಮತ್ತು ರಂಗದಾಖಲೆಗಳ ಪ್ರದರ್ಶನದ ಉದ್ಘಾಟನೆ ಮಾಡಲಿರುವರು. ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕರಾದ ಮಲ್ಲಿಕಾರ್ಜುನ ಕಡಕೋಳ ಇವರು ಅಧ್ಯಕ್ಷತೆ ವಹಿಸಲಿದ್ದು, ರಂಗದಾಖಲೆ ಸಂಗ್ರಹಕಾರರಾದ ಎ.ಎಸ್. ಕೃಷ್ಣಮೂರ್ತಿ ಅಜ್ಜಂಪುರ ಇವರನ್ನು ಸನ್ಮಾನಿಸಲಾಗುವುದು. ಸಂಜೆ 5-30 ಗಂಟೆಗೆ ಹಿರಿಯ ಕಲಾವಿದರೊಂದಿಗೆ ಸಂವಾದ, ಗಂಟೆ 6-30ಕ್ಕೆ ಪ್ರಸಿದ್ಧ ಕಲಾವಿದರಾದ ಡಾ. ಮುಖ್ಯಮಂತ್ರಿ ಚಂದ್ರು ಇವರು ವೃತ್ತಿ ರಂಗೋತ್ಸವದ ಉದ್ಘಾಟನೆ ಹಾಗೂ ಮಾನ್ಯ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಇವರು ರಂಗನಾಟಕಗಳ ಉದ್ಘಾಟನೆ ಮಾಡಲಿರುವರು. 7-00 ಗಂಟೆಗೆ ಜೇವರ್ಗಿ ಶ್ರೀ ವಿಶ್ವಜ್ಯೋತಿ ಪಂಚಾಕ್ಷರ ನಾಟಕ ಸಂಘ ತಂಡದವರಿಂದ ಜೇವರ್ಗಿ ರಾಜಣ್ಣ ಇವರ ನಿರ್ದೇಶನದಲ್ಲಿ ‘ಅಕ್ಕ ಅಂಗಾರ ತಂಗಿ ಬಂಗಾರ’ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 16 ಮಾರ್ಚ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಕಂಚಿಕೆರೆ ಕೊಟ್ರಬಸಪ್ಪ ರಂಗವೇದಿಕೆಯಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ ‘ಯುವ ಚಿಂತನೆ, ರಂಗ ಪ್ರಯೋಗ, ಹೊರಳು ಹಾದಿಯ ಹಾಸ್ಯ’ ಎಂಬ ವಿಷಯದ ಬಗ್ಗೆ ಅಜಿತ ಘೋರ್ಪಡೆ ಹಾಗೂ ‘ಮಹಿಳೆ ಮತ್ತು ಸಮಕಾಲೀನ ವೃತ್ತಿ ರಂಗ ನಾಟಕಗಳು’ ಎಂಬ ವಿಷಯದ ಬಗ್ಗೆ ಡಾ. ಸುಜಾತಾ ಅಕ್ಕಿ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಸಂಜೆ 5-30 ಗಂಟೆಗೆ ಹಿರಿಯ ಕಲಾವಿದರೊಂದಿಗೆ ಸಂವಾದ, ಗಂಟೆ 6-30ಕ್ಕೆ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಸುರೇಶ್ ಬಿ. ಇಟ್ನಾಳ್ ಇವರು ನಾಟಕ ಚಾಲನೆ ನೀಡಲಿರುವರು. 7-00 ಗಂಟೆಗೆ ಪಾಂಡಿಚೆರಿಯ ವೆಲಿಪ್ಪಡೈ ಥಿಯೇಟರ್ ಮೂಮೆಂಟ್ ತಂಡದವರು ರಾಮಸಾಮಿ ಎಸ್. ಇವರ ನಿರ್ದೇಶನದಲ್ಲಿ ‘ನಡಾಪಾವಾಡೈ’ ತಮಿಳು ನಾಟಕ ಪ್ರದರ್ಶನ ನೀಡಲಿದ್ದಾರೆ.
ದಿನಾಂಕ 17 ಮಾರ್ಚ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಸಕ್ಕರಿ ಬಾಳಾಚಾರ್ಯ ರಂಗವೇದಿಕೆಯಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ ‘ಗ್ರಾಮೀಣ ರಂಗಭೂಮಿ : ತಿರುಳು ನೋಟ’ ಎಂಬ ವಿಷಯದ ಬಗ್ಗೆ ಸಾಸ್ವೇಹಳ್ಳಿ ಸತೀಶ ಹಾಗೂ ‘ರಂಗಭೂಮಿಗೆ ಇಣುಕಲಿದೆಯೇ ಕೃತಕ ಬುದ್ಧಿಮತ್ತೆ ?’ ಎಂಬ ವಿಷಯದ ಬಗ್ಗೆ ಡಾ. ಜೈರಾಜ ಎಂ. ಚಿಕ್ಕಪಾಟೀಲ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಸಂಜೆ 5-30 ಗಂಟೆಗೆ ಹಿರಿಯ ಕಲಾವಿದರೊಂದಿಗೆ ಸಂವಾದ, ಗಂಟೆ 6-30ಕ್ಕೆ ಬೆಂಗಳೂರಿನ ಶ್ರೀನಿವಾಸ ಜಿ. ಕಪ್ಪಣ್ಣ ಇವರು ಸಮಾರೋಪ ನುಡಿಗಳನ್ನಾಡುವರು. 7-00 ಗಂಟೆಗೆ ಹೈದರಾಬಾದ್ ಶ್ರೀ ವೆಂಕಟೇಶ್ವರ ಸುರಭಿ ಥಿಯೇಟರ್ ತಂಡದವರಿಂದ ಸುರಭಿ ಜಯಚಂದ್ರ ವರ್ಮಾ ಇವರ ನಿರ್ದೇಶನದಲ್ಲಿ ‘ಮಾಯಾಬಜಾರ್’ ತೆಲುಗು ನಾಟಕ ಪ್ರಸ್ತುತಗೊಳ್ಳಲಿದೆ.