ಧಾರವಾಡ : ಭಾರತೀಯ ಸಂಗೀತಲೋಕದ ನವೋನ್ವೇಷ, ಸ್ವರಯೋಗಿನಿ ಖ್ಯಾತಿಯ ಪದ್ಮವಿಭೂಷಣ ಡಾ. ಪ್ರಭಾ ಅತ್ರೆ ಸಂಸ್ಮರಣೆಯಲ್ಲಿ ಸಂಗೀತ ಹಾಗೂ ಭರತನಾಟ್ಯಗಳ ವಿಶೇಷ ಕಾರ್ಯಕ್ರಮವನ್ನು ಧಾರವಾಡದಲ್ಲಿ ದಿನಾಂಕ 15 ಮಾರ್ಚ್ 2025 ಶನಿವಾರದಂದು ಸಂಜೆ 5-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ (ರಿ.) ಹಾಗೂ ಪುಣೆಯ ‘ಸ್ವರಮಯಿ’ ಸಂಸ್ಥೆಗಳು ಜಂಟಿಯಾಗಿ ಹಮ್ಮಿಕೊಂಡಿವೆ. ಈ ಸಂಗೀತ-ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಡಾ. ಪ್ರಭಾ ಅತ್ರೆಯವರಿಂದ ರಚಿತ ‘ಬಂದಿಶ್’ಗಳು ಪ್ರಸ್ತುತಗೊಳ್ಳಲಿವೆ.
ಸುಮಾರು ಎಂಟು ದಶಕಗಳ ಕಾಲ ಡಾ. ಪ್ರಭಾ ಅತ್ರೆಯವರು ಕೇವಲ ಸಂಗೀತ ಕ್ಷೇತ್ರವಷ್ಟೇ ಅಲ್ಲ ಶಿಕ್ಷಣ, ಸಾಹಿತ್ಯ, ಸಮಾಜಸೇವೆ ಇನ್ನೂ ಅನೇಕ ಕ್ಷೇತ್ರಗಳಿಗೆ ಅಪೂರ್ವ ಕೊಡುಗೆಯನ್ನು ಸಲ್ಲಿಸಿದ ಬಹುಮುಖ ಪ್ರತಿಭೆ. ಸ್ವತಃ ವಿದ್ಯಾರ್ಥಿನಿಯಾಗಿ, ಚಿಂತಕಿಯಾಗಿ ಉಳಿದವರಿಗೆ ಮಾದರಿಯಾಗುವಂಥ ವ್ಯಕ್ತಿತ್ವ ಡಾ. ಪ್ರಭಾ ಅತ್ರೆಯವರದು. ಇಂಥ ದಿಗ್ಗಜೆಯ ಸಂಸ್ಮರಣೆಯಲ್ಲಿ ವಿಶೇಷ ಕಾರ್ಯಕ್ರಮವೊಂದು ಧಾರವಾಡದಲ್ಲಿ ನಡೀತಾ ಇದೆ.
ಕೇಂದ್ರ ಸಂಗೀತ ನಾಟಕ ಅಕ್ಯಾಡೆಮಿ ಪುರಸ್ಕೃತ ಕಲಾವಿದೆ, ಹಿರಿಯ ಗಾಯಕಿ ವಿದುಷಿ ಪದ್ಮಾ ತಳವಲಕರ್ ಇವರು ಗಾಯನವನ್ನು ಪ್ರಸ್ತುತಪಡಿಸಲಿದ್ದಾರೆ. ಇವರಿಗೆ ತಬಲಾದಲ್ಲಿ ತೇಜಸ್ ಮಾಜಗಾಂವಕರ್ ಹಾಗೂ ಅಮೇಯ ಬಿಚ್ಚು ಹಾರ್ಮೋನಿಯಂದಲ್ಲಿ ಸಾಥ್ ಸಂಗತ್ ಮಾಡಲಿದ್ದಾರೆ. ಇನ್ನೊಬ್ಬ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತ ಹಿರಿಯ ನೃತ್ಯ ಕಲಾವಿದೆ ಡಾ. ಸುಚೇತಾ ಭಿಡೆ-ಚಾಪೇಕರ್ ಮತ್ತು ತಂಡದವರು ‘ನೃತ್ಯ-ಪ್ರಭ’ ಎಂಬ ವಿಶೇಷ ಭರತನಾಟ್ಯವನ್ನು ಪ್ರದರ್ಶಿಸಲಿದ್ದಾರೆ. ಇವರೊಂದಿಗೆ ಶಿಷ್ಯೆಯರಾದ ಆರುಂಧತಿ ಪಟವರ್ಧನ, ರುಚಾ, ಅನುಜಾ ಹಾಗೂ ಸಾಗರಿಕಾ ಪಾಲ್ಗೊಳ್ಳಲಿದ್ದಾರೆ.
ವಿದುಷಿ ಪದ್ಮಾ ತಳವಲಕರ
ಜೈಪುರ-ಅತ್ರೌಲಿ ಘರಾಣೆಯ ಹಿರಿಯ ಗಾಯಕಿ ವಿದುಷಿ ಪದ್ಮಾ ತಳವಲಕರ್ ಹಿಂದುಸ್ತಾನಿ ಸಂಗೀತದ ವಿದ್ವತ್ಪೂರ್ಣ ವಿದುಷಿ. ಪಂಡಿತ್ ಪಿಂಪಲಖರೆ, ವಿದುಷಿ ಮೋಗುಬಾಯಿ ಕುರ್ಡಿಕರ, ಪಂಡಿತ್ ಗಜಾನನಬುವಾ ಜೋಶಿ ಇವರ ಪದತಲದಲ್ಲಿ ಕುಳಿತು ಆಳವಾಗಿ ಅಧ್ಯಯನಗೈದ ಪದ್ಮಾರವರು ಅತ್ಯಂತ ಕಡಿಮೆ ಸಮಯದಲ್ಲಿ ದೇಶದ ಪ್ರಬುದ್ಧ ಗಾಯಕಿಯಾಗಿ ಹೊರಹೊಮ್ಮಿದರು. ಸ್ವರಬದ್ಧತೆ, ವೈವಿಧ್ಯಮಯ ಲಯಕಾರಿಗಳು, ತಾನ್ಗಳು, ಸ್ವರಗಳನ್ನು ಕ್ರಿಯಾಮಾಧುರ್ಯದೊಂದಿಗೆ ಶೃಂಗರಿಸುವಿಕೆಯೊಂದಿಗೆ ಅತ್ಯಂತ ಮನಮೋಹಕವಾಗಿ ಪ್ರಸ್ತುತಪಡಿಸುವ ಪದ್ಮಾ ತಳವಲಕರ್ ಇವರು ಠುಮರಿ, ದಾದ್ರಾ, ತರಾನಾ, ನಾಟ್ಯಸಂಗೀತ, ಭಜನ್ ಗಳನ್ನು ಸಾದರಪಡಿಸುವಲ್ಲಿಯೂ ಪ್ರಬುದ್ಧತೆ ಸಾಧಿಸಿದ್ದಾರೆ. ದೇಶ-ವಿದೇಶಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿರುವ ಪದ್ಮಾ ತಳವಲಕರ್ ಇವರು ‘ವತ್ಸಲಾಬಾಯಿ ಜೋಶಿ ಪುರಸ್ಕಾರ’, ‘ಪಂಡಿತ್ ಜಸರಾಜ ಪುರಸ್ಕಾರ’ ಹೀಗೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ನೃತ್ಯ ವಿದುಷಿ ಡಾ. ಸುಚೇತಾ ಭಿಡೆ-ಚಾಪೇಕರ್
ಭರತನಾಟ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಸೃಜನಶೀಲ ಕಲ್ಪನೆಗಳೊಂದಿಗೆ ನಾಟ್ಯಕ್ಷೇತ್ರದಲ್ಲಿ ಅಳವಡಿಸಿ ವಿಶಿಷ್ಟ ಪ್ರದರ್ಶನ ನೀಡುವಲ್ಲಿ ವಿಶೇಷ ಛಾಪನ್ನ ಮೂಡಿಸಿರುವವರು ನೃತ್ಯ ವಿದುಷಿ ಡಾ. ಸುಚೇತಾ ಭಿಡೆ- ಚಾಪೇಕರ್ ಇವರು. ಅದರಲ್ಲೂ ಹಿಂದಸ್ತಾನಿ ಸಂಗೀತದೊಂದಿಗೆ ಅಳವಡಿಸಿಕೊಂಡು ‘ನೃತ್ಯಗಂಗಾ’ ಎಂಬ ಪ್ರದರ್ಶನ ಅತ್ಯಂತ ಮನಮೋಹಕವಾದದ್ದು. ಕಲಾತ್ಮಿಕವಾಗಿ ಪದ್ಮವಿಭೂಷಣ ಡಾ. ಪ್ರಭಾ ಅತ್ರೆಯವರೊಂದಿಗೆ ಗಾಢವಾಗದ ಒಡನಾಟ ಹೊಂದಿದವರು. ಈ ನಿಟ್ಟಿನಲ್ಲಿ ಇಬ್ಬರು ದಿಗ್ಗಜೆಯರ ಕಲ್ಪನೆಯಲ್ಲಿ ಹೊರಹೊಮ್ಮಿದ್ದೇ ‘ಸ್ವರನೃತ್ಯಪ್ರಭಾ’ ಅನ್ನುವಂಥ ಸ್ವರನೃತ್ಯ ಪ್ರದರ್ಶನ. ಇದರ ವಿಶೇಷತೆ ಅಂದರೆ ವಿದುಷಿ ಡಾ. ಪ್ರಭಾ ಅತ್ರೆಯವರು ಬರೆದಂಥ ಬಂದಿಶ್ ಗಳೊಂದಿಗೆ ಹೆಣೆದು ಭರತನಾಟ್ಯವನ್ನು ಪ್ರದರ್ಶನ ನೀಡುತ್ತಾರೆ. ಅವರ ಮಗಳಾದ ಆರುಂಧತಿ ಪಟವರ್ಧನ, ರುಚಾ, ಅನುಜಾ ಹಾಗೂ ಸಾಗರಿಕಾರವರು ಈ ತಂಡದಲ್ಲಿ ಇದ್ದಾರೆ. ಭರತನಾಟ್ಯದಲ್ಲಿ ಸ್ನಾತಕ ಪದವಿ ಪಡೆದು ನಂತರ ಮುಂಬೈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಕಳೆದ 60 ವರ್ಷಗಳಿಂದ ಸುಚೇತಾರವರು ಓರ್ವ ಕಲಾವಿದೆಯಾಗಿ, ಗುರುವಾಗಿ, ಸಂಶೋಧಕಿಯಾಗಿ, ನೃತ್ಯ ಸಂಯೋಜಕಿಯಾಗಿ ಸೇವೆ ಸಲ್ಲಿಸಿ ದೇಶ ವಿದೇಶಗಳಲ್ಲಿ ತಮ್ಮ ಕಲಾವಂತಿಕೆಯನ್ನು ಮೆರೆದಿದ್ದಾರೆ.