ಕನ್ನಡ ಸಾಹಿತ್ಯ ಲೋಕ ಒಂದು ಸಾಗರ ಇದ್ದಂತೆ. ಆ ಸಾಗರದ ಬೇರೆ ಬೇರೆ ಪ್ರಕಾರಗಳಲ್ಲಿ ಕೈಯಾಡಿಸಿ ಪ್ರಸಿದ್ಧರಾದವರು ಬಹಳ. ಕೆಲವೇ ಮಂದಿ ಮಹಿಳಾ ಲೇಖಕಿಯರಿದ್ದ ಆ ಕಾಲಘಟ್ಟದಲ್ಲಿ ಕನ್ನಡ ಭಾಷೆಯ ಬರಹಗಾರ್ತಿಯಾಗಿ, ಕಾದಂಬರಿ ಕ್ಷೇತ್ರದಲ್ಲಿ ಕೃಷಿ ಮಾಡಿ ಪ್ರಸಿದ್ಧರಾದವರು ಆರ್ಯಾಂಬಾ ಪಟ್ಟಾಭಿ. ಇವರು ಬಿ.ಎಂ. ಕೃಷ್ಣಸ್ವಾಮಿ ಮತ್ತು ಶ್ರೀಮತಿ ತಂಗಮ್ಮ ದಂಪತಿಯ ಸುಪುತ್ರಿ, 1936 ಮಾರ್ಚ್ 12 ರಂದು ಮೈಸೂರಿನಲ್ಲಿ ಜನಿಸಿದರು. 1958ರಲ್ಲಿ ರಾಜೇಂದ್ರಪುರ ಪಟ್ಟಾಭಿರಾಮಯ್ಯರೊಂದಿಗೆ ಇವರ ವಿವಾಹ ನಡೆಯಿತು. ಕನ್ನಡ ಸಾಹಿತ್ಯ ಲೋಕದ ಹಿರಿಯ ವಿದ್ವಾಂಸರೂ, ಕವಿಗಳೂ ಆದ ಬಿ. ಎಂ. ಶ್ರೀಕಂಠಯ್ಯ, ಜನಪ್ರಿಯ ಕಾದಂಬರಿಗಾರ್ತಿಯಾದ ವಾಣಿ ಮತ್ತು ‘ತ್ರಿವೇಣಿ’ ಎಂಬ ಕಾವ್ಯ ನಾಮದಿಂದ ಜನಪ್ರಿಯರಾದ ಅನಸೂಯ ಶಂಕರ್, ಇವರೆಲ್ಲರೂ ಆರ್ಯಾಂಬಾ ಪಟ್ಟಾಭಿಯವರ ಬಂಧುಗಳು.
ಬರಹಗಾರರ ಪ್ರಸಿದ್ಧ ಕುಟುಂಬದಿಂದ ಬಂದ ಇವರು 32 ಕಾದಂಬರಿಗಳ ರಚನೆ ಮಾಡುವುದರೊಂದಿಗೆ, ಸಣ್ಣ ಕಥಾ ಸಂಕಲನಗಳು, ಜೀವನ ಚರಿತ್ರೆಗಳು, ನಾಟಕಗಳು, ಪ್ರಬಂಧಗಳು, ಮಕ್ಕಳಿಗಾಗಿ ಪುಸ್ತಕಗಳಲ್ಲದೆ, ಟೆನ್ನಿಸ್, ಟೇಬಲ್ ಟೆನಿಸ್, ಚದುರಂಗ ಆಟಗಳು ಹವ್ಯಾಸಗಳಾಗಿದ್ದ ಕಾರಣ ಕ್ರೀಡಾ ಸಾಹಿತ್ಯವನ್ನೂ ರಚನೆ ಮಾಡಿ ಪ್ರಕಟಿಸಿದ್ದಾರೆ. ಮೈಸೂರಿಗೆ ಬಂದಾಗ ‘ಮದರ್ ತೆರೇಸಾ’ರನ್ನು ಸಂದರ್ಶಿಸಿ, ಜೀವನ ಚರಿತ್ರೆಯನ್ನೂ ರಚಸಿದ್ದಾರೆ. ಇವರ ಆರೂ ನಾಟಕ ಕೃತಿಗಳು ಬೆಂಗಳೂರು ಮತ್ತು ಮೈಸೂರು ಆಕಾಶವಾಣಿ ಕೇಂದ್ರಗಳಿಂದ ಪ್ರಸಾರಗೊಂಡಿವೆ.
ಆರ್ಯಾಂಬಾರ ಪುಸ್ತಕಗಳ ಕೆಲವು ಭಾಗಗಳು ಮತ್ತು ‘ಭರತದ ಮಹಾಪುರುಷರು’ ಕೃತಿಯನ್ನು ಶಾಲಾ ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಾಗಿ ಆಯ್ಕೆ ಮಾಡಲಾಗಿದೆ. ದೈನಿಕ, ಸಾಪ್ತಾಹಿಕ ಹಾಗೂ ಮಾಸ ಪತ್ರಿಕೆಗಳಲ್ಲಿ ಅವರ ಕೃತಿಗಳು ಪ್ರಕಟಗೊಂಡಿವೆ. ಅರ್ಯಂಬಾ ಪಟ್ಟಾಭಿಯವರ ಕಾದಂಬರಿಯನ್ನು ಆಧರಿಸಿದ ‘ಕಪ್ಪು- ಬಿಳುಪು’ ಚಲನಚಿತ್ರ ಪುಟ್ಟಣ್ಣ ಕಾಣಗಾಲರ ನಿರ್ದೇಶನದಲ್ಲಿ ನಿರ್ಮಾಣಗೊಂಡು, ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಿಗೂ ಶೀರ್ಷಿಕೆ ಮಾಡಲಾದ ಅತ್ಯುತ್ತಮ ಚಿತ್ರ. ಎಂ. ಆರ್. ವಿಠ್ಠಲ್ ನಿರ್ದೇಶನದ ‘ಎರಡು ಮುಖ’ ಚಲಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ ಮತ್ತು ಮದ್ರಾಸ್ ಫಿಲ್ಮ್ ಲವರ್ಸ್ ಅಸೋಸಿಯೇಷನ್ ಕೊಡಮಾಡುವ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದೆ. ವೈ. ಆರ್. ಸ್ವಾಮಿ ನಿರ್ದೇಶನದ ‘ಸವತಿಯ ನೆರಳು’ ಮತ್ತು ಶಾಂತಾರಾಂ ನಿರ್ದೇಶನದ ‘ಮರಳಿಗೂಡಿಗೆ’ ಚಿತ್ರಗಳು ರಾಜ್ಯ ಪ್ರಶಸ್ತಿಯನ್ನು ಗೆದ್ದುಕೊಂಡಿವೆ. ಮಾತ್ರವಲ್ಲದೆ ಅವರ ಸಣ್ಣ ಕಥೆಗಳು ಮರಾಠಿಗೆ ಅನುವಾದ ಗೊಂಡಿವೆ.
ಇವರ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿಗಳು ಪುರಸ್ಕಾರಗಳು ಸಂದಿವೆ. ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಚೇತನ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಸರ್. ಎಂ. ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಸಂಚಿ ಹೊನ್ನಮ್ಮ ಪ್ರಶಸ್ತಿ, ವಿದ್ಯಾರಣ್ಯ ಪ್ರಶಸ್ತಿ, ಅವುಗಳಲ್ಲಿ ಕೆಲವು. ರಾಜ್ಯ ಲೇಖಕರ ರಾಜ್ಯ ಸನ್ಮಾನ ಸಮಿತಿಯಿಂದ ‘ಉನ್ಮಿಲನ ಅಭಿನಂದನಾ ಗ್ರಂಥ’ ಸಮರ್ಪಣೆಗೊಂಡಿರುವುದು ಇವರ ಹೆಗ್ಗಳಿಕೆ. ವಿವಿಧ ಸಂಘಟನೆ, ಪ್ರತಿಷ್ಠಾನ, ಸೇವಾ ಸಮಿತಿ ಹಾಗೂ ಸಾಂಸ್ಕೃತಿಕ ಸಂಸ್ಥೆಗಳಿಂದ ಇವರಿಗೆ ಅಭಿನಂದನೆ ಸನ್ಮಾನಗಳು ನಡೆದಿವೆ. ನಿರಂತರ ಸಾಹಿತ್ಯ ಸೇವೆ ಮಾಡಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಆರ್ಯಾಂಬ ಪಟ್ಟಾಭಿಯವರಿಗೆ ನಮನಗಳು.
-ಅಕ್ಷರೀ