03-04-2023,ಸುರತ್ಕಲ್: ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ ಸಂಸ್ಥೆಗಳು ನಡೆಸಿಕೊಂಡು ಬರುತ್ತಿರುವ ಉದಯರಾಗದ 42ನೇ ಸಂಗೀತ ಕಚೇರಿಯು ಸುರತ್ಕಲ್ ನ ಅನುಪಲ್ಲವಿಯಲ್ಲಿ ದಿನಾಂಕ 02-04- 2022ರಂದು ನಡೆಯಿತು. ಪುತ್ತೂರಿನ ತನ್ಮಯಿ ಉಪ್ಪಂಗಳ ಸುಶ್ರಾವ್ಯವಾದ ಹಾಡುಗಾರಿಕೆ ಕಚೇರಿ ನಡೆಸಿಕೊಟ್ಟರು. ಇವರಿಗೆ ಗೌತಮ್ ಭಟ್ ಪಿ.ಜಿ ವಯಲಿನ್ ನಲ್ಲಿ ಮತ್ತು ಅಜಯ ಕೃಷ್ಣ ಉಪ್ಪಂಗಳ ಮೃದಂಗದಲ್ಲಿ ಸಹಕರಿಸಿದರು.ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಕಲಾವಿದರನ್ನು ಪರಿಚಯಿಸಿ ಕೃತಜ್ಞತೆ ಸಲ್ಲಿಸಿದರು. ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಕೆ ರಾಜಮೋಹನ್ ರಾವ್, ಸಚ್ಚಿದಾನಂದ ಕೆ, ರಘುರಾಮ್ ರಾವ್ ಬೈಕಂಪಾಡಿ ಮುಂತಾದವರು ಉಪಸ್ಥಿತರಿದ್ದರು
.ರಘುರಾಮ ಮತ್ತು ಸುಮನ ಉಪ್ಪಂಗಳ ಇವರ ಪುತ್ರಿಯದ ಕು. ತನ್ಮಯ ಉಪ್ಪಂಗಳ ಇವರು ವಿದುಷಿ ಶ್ರೀಮತಿ ವೀಣಾ ರಾಘವೇಂದ್ರ ಮತ್ತು ವಿದುಷಿ ಶ್ರೀಮತಿ ಶೈಲಜಾ ಶ್ರೀರಾಮ್ ಇವರಿಂದ ಸಂಗೀತಾಭ್ಯಾಸವನ್ನು ಮತ್ತು ವಿದ್ವಾನ್ ವೇಣುಗೋಪಾಲ ಶಾನುಭಾಗ್ ಮತ್ತು ವಿದ್ವಾನ್ ಮತ್ತೂರು ಆರ್. ಶ್ರೀನಿಧಿ ಇವರುಗಳಿಂದ ವಾಯ್ಲಿನ್ ಅಭ್ಯಾಸವನ್ನು ಮಾಡುತ್ತಿದ್ದಾಳೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 97 % ಅಂಕ ಪಡೆದು ತೇರ್ಗಡೆ ಹೊಂದಿದ ಈಕೆ ಪ್ರಸ್ತುತ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದಾಳೆ. ಜೂನಿಯರ್ ವಿಭಾಗದಲ್ಲಿ 5ನೇ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಿದ ಈಕೆ ಹಾಡುಗಾರಿಕೆ ಸೀನಿಯರ್ ಪರೀಕ್ಷೆಯಲ್ಲಿ 93% ಹಾಗೂ ವಾಯ್ಲಿನ್ ಸೀನಿಯರ್ ಪರೀಕ್ಷೆಯಲ್ಲಿ 98% ಅಂಕ ಗಳಿಸಿ ತೇರ್ಗಡೆ ಹೊಂದಿರುತ್ತಾಳೆ. ಹೊನ್ನಾವರದ ‘ ನೈಸ್ ವಾಯ್ಸ್ ‘ ಏರ್ಪಡಿಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ, ಕಾಸರಗೋಡಿನ ‘ ಉಡುಪ್ಪು ಮೂಲೆ ಪ್ರತಿಷ್ಠಾನ ’ ಆಯೋಜಿಸಿದ ಸ್ಪರ್ಧೆಯಲ್ಲಿ, ‘ ರಾಗತರಂಗಿಣಿ ಮಂಗಳೂರು ’ ಆಯೋಜಿಸಿದ ಸ್ಪರ್ಧೆಯಲ್ಲಿ, ‘ ರಾಗಲಹರಿ ’ ಬೆಂಗಳೂರು ಆಯೋಜಿಸಿದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾಳೆ. ಉದಯೋನ್ಮುಖಿ-2022 ಬೆಂಗಳೂರು ಆಯೋಜಿಸಿದ ಸ್ಪರ್ಧೆಯಲ್ಲಿ ವಿಶೇಷ ಬಹುಮಾನ ಪಡೆದಿರುವ ಈಕೆ ನೂರಕ್ಕೂ ಮಿಕ್ಕಿ ಸಂಗೀತ ಕಾರ್ಯಕ್ರಮಗಳಲ್ಲಿ ಹಾಡುಗಾರಿಕೆ ಮತ್ತು ವಾಯ್ಲಿನ್ ಸಾಥ್ ಕೊಟ್ಟಿರುತ್ತಾಳೆ