04 ಏಪ್ರಿಲ್ 2023, ಮಂಗಳೂರು: ದಿನಾಂಕ 01-04-23ರಂದು ಕರಾವಳಿ ಲೇಖಕಿಯರ-ವಾಚಕಿಯರ ಸಂಘದಲ್ಲಿ ಲೇಖಕಿ ವಿಜಯಲಕ್ಷ್ಮಿ ಶಾನುಭಾಗ್ ರವರ ‘ಗೃಹಾವರಣ’ ಎಂಬ ಕೃತಿಯ ಲೋಕಾರ್ಪಣೆಯ ಕಾರ್ಯಕ್ರಮ ನಡೆಯಿತು.
ಬೆಸೆಂಟ್ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ರಾಮಚಂದ್ರ ಇವರು ಕೃತಿಯನ್ನು ಬಿಡುಗಡೆಗೊಳಿಸಿ, “ಗೃಹದೊಳಗಿನ ಹಲವು ಮುಖಗಳು ಕೃತಿಯಲ್ಲಿ ಅನಾವರಣಗೊಂಡಿವೆ. ಮನೆ ಎಂದರೆ ಅದು ಕಲ್ಲು ಕಟ್ಟಡದ ಭೌತಿಕ ಸ್ವರೂಪವಲ್ಲ. ಮನಸ್ಸುಗಳನ್ನು ಬೆಸೆಯುವ ಮೂಲಕ ಸಂಬಂಧಗಳನ್ನು ಹೆಣೆಯುವ ಆಶ್ರಯ ತಾಣ. ‘ಗೃಹಾವರಣ’ ಮನಸ್ಸುಗಳನ್ನು ಬೆಸೆಯುವ ಕಾಯಕ ಗೈದ ಪ್ರೀತಿಯ ಕೃತಿ” ಎಂದರು.
ಸೈಂಟ್ ಆಗ್ನೆಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶೈಲಜ ಕೆ. ಇವರು ಕೃತಿಯನ್ನು ಪರಿಚಯ ಮಾಡಿ “ಇವರ ಬರಹಗಳ ಲಾಲಿತ್ಯಮಯ ಶೈಲಿ ಓದುಗರನ್ನು ಸೆಳೆಯುತ್ತದೆ. ಗೃಹಿಣಿ ಗೃಹ ಮುಚ್ಯೆತೆ ಎಂದ ಪ್ರಾಜ್ಞರ ಮಾತನ್ನು ನೆನಪಿಸಿಕೊಂಡು ಗೃಹ ನಿರ್ವಹಣೆಯಲ್ಲಿ ಗೃಹಣಿಯ ಪಾತ್ರ ಮಹತ್ವದ್ದು. ಆಕೆಯ ಸಮಯ, ಶ್ರಮ, ಪ್ರೇಮ, ಮನೆಯೊಳಗಿನ ಭಾವಜಗತ್ತನ್ನು ಅವರಿಸಿಕೊಳ್ಳುತ್ತದೆ” ಎಂದರು.
ಕೃತಿಯ ಲೇಖಕಿ ವಿಜಯಲಕ್ಷ್ಮಿ ಶಾನುಭಾಗ್ “ಇದು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಬರಹಗಳ ಸಂಕಲಿತ ರೂಪ. ಇದರಿಂದ ಬರಹಗಳ ಅನನ್ಯತೆ ಸಾಧ್ಯವಾಗಿದೆ” ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳಾಯರು “ಅಡುಗೆ ಮನೆ ಅಧ್ಯಾತ್ಮ ಎಲ್ಲ ಲೇಖಕಿಯರನ್ನು ನಿರಂತರವಾಗಿ ಕಾಡಿದೆ. ಹಾಗಾಗಿ ಹೆಚ್ಚಿನ ಬರಹಗಾರ್ತಿಯರ ಮನೆ ಮತ್ತು ಅಡುಗೆ ಮನೆಯ ಕುರಿತಾದ ವಿಭಿನ್ನ ಸ್ವರೂಪ ಬರಹಗಳು ರಚನೆಗೊಂಡು ಸಾಹಿತ್ಯಲೋಕ ಶ್ರೀಮಂತಗೊಂಡಿದೆ. ಹೆಣ್ಣು ಅಡುಗೆ ಮನೆಯನ್ನು ದಾಟಿ, ಮನೆಯ ಹೊಸ್ತಿಲು ದಾಟಿ ಹೊರ ಜಗತ್ತಿಗೆ ಮುಖಾ ಮುಖಿಯಾದಾಗ ತನ್ನ ಶಕ್ತಿಯನ್ನು ಅರಿಯುತ್ತಾಳೆ. ಇದು ಹೆಣ್ಣಿನ ಶಕ್ತಿಯ ಆತ್ಮಾವಲೋಕನದ ಪರಿ” ಎಂದು ವಿವರಿಸಿದರು.
ಲೇಖಕಿ ವಿದ್ಯಾ ಗಣೇಶ್ ರವರು ಶುಭಾಂಶಸನೆಗೈದರು. ಸ್ವಾಗತ ಮತ್ತು ಪ್ರಸ್ತಾವನೆ ಶ್ರೀಮತಿ ಅರುಣಾ ನಾಗರಾಜ್ ಇವರಿಂದ ನಡೆಯಿತು. ಶ್ರೀಮತಿ ರಶ್ಮಿ ಅರಸ್ ರವರು ಆಶಯ ಗೀತೆ ಹಾಡಿದರು. ಶ್ರೀಮತಿ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಗೈದರು. ಸಭೆಯಲ್ಲಿ ಕ.ಲೇ.ವಾ. ಸಂಘದ ಸದಸ್ಯರಲ್ಲದೆ ಆಗ್ನೇಸ್ ಕಾಲೇಜಿನ ಕನ್ನಡ ವಿದ್ಯಾರ್ಥಿಗಳೂ ಉಪಸ್ಥಿತರಿದ್ದರು.