ಕರಾವಳಿ ಪ್ರದೇಶದಲ್ಲಿ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಅನೇಕರಲ್ಲಿ ಡಾ. ಇಂದಿರಾ ಹೆಗ್ಡೆಯವರು ಒಬ್ಬರು. ಇವರು ಶ್ರೀಯುತ ರಾಜು ಶೆಟ್ಟಿ ಹಾಗೂ ಎಳತ್ತೂರು ಗುತ್ತು ಸಿಂಧು ಶೆಡ್ತಿ ದಂಪತಿಗಳ ಸುಪುತ್ರಿ. 14 ಮಾರ್ಚ್ 1949ರಲ್ಲಿ ಮಂಗಳೂರು ತಾಲೂಕಿನ ಕಿನ್ನಿಗೋಳಿಯ ಎಳತ್ತೂರು ಗುತ್ತಿನ ಮನೆಯಲ್ಲಿ ಇವರ ಜನನವಾಯಿತು. ಸ್ಥಳೀಯ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ಸಮಾಜಶಾಸ್ತ್ರದಲ್ಲಿ ಡಿಪ್ಲೋಮಾ ಅಧ್ಯಯನ ನಡೆಸಿದ್ದಾರೆ. ಎಸ್. ಆರ್. ಹೆಗ್ಗಡೆ ಎಂದೇ ಖ್ಯಾತರಾದ ಚೇಳಾರು ಗುತ್ತು ಸೀತಾರಾಮ ಹೆಗ್ಗಡೆಯವರ ಧರ್ಮಪತ್ನಿ.
ತಮ್ಮ 33ನೇ ವಯಸ್ಸಿನಲ್ಲಿ ಸುಧಾ, ತರಂಗ ಇತ್ಯಾದಿ ಸಾಪ್ತಾಹಿಕಗಳಿಗೆ ಸಣ್ಣ ಕಥೆಗಳನ್ನು ಬರೆಯುವ ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಿತರಾದ ಇಂದಿರಾ ಹೆಗ್ಗಡೆಯವರು ಎಂ. ಚಿದಾನಂದಮೂರ್ತಿಯವರ ಸಹಕಾರದಿಂದ ಸಂಶೋಧನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ತುಳುನಾಡಿನ ಪ್ರಾದೇಶಿಕ ಆಚರಣೆ ಮತ್ತು ಪರಂಪರೆಯ ಮೂಲದ ಬಗ್ಗೆ ಬಹಳ ಶ್ರಮವಹಿಸಿ ಅಧ್ಯಯನ ಮಾಡಿದ ಆಳವಾದ ಅನುಭವದೊಂದಿಗೆ ಕೃತಿರೂಪಕ್ಕಿಳಿಸಿದ ಸಂಶೋಧನಾ ಗ್ರಂಥವೇ . ‘ ತುಳುವರ ಮೂಲತಾನ ಆದಿ – ಆಲಡೆ – ಪರಂಪರೆ ಮತ್ತು ಪರಿವರ್ತನೆ’ಎಂಬ ಕೃತಿ. ಇದರಲ್ಲಿ ತುಳುನಾಡಿನ ಜನರು ಮತ್ತು ಅವರ ಆರಾಧನಾ ಆಚರಣೆಗಳ ಬಗ್ಗೆ ಮಾಹಿತಿ ಇದೆ. ಇವರಿಗೆ ಖ್ಯಾತಿ ತಂದುಕೊಟ್ಟ ಈ ಕೃತಿ ಡಾಕ್ಟರೇಟ್ ಪದವಿಗೂ ಭಾಜನವಾಯಿತು. ಇವರ ‘ಬಂಟರು- ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ’ ಕೃತಿಗೆ ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನದಿಂದ ‘ಅನಂತ ರಂಗ ಸಂಶೋಧನಾ ಪ್ರಶಸ್ತಿ’ ದೊರೆತಿದೆ. ‘ತುಳುನಾಡಿನ ಗ್ರಾಮ ಆಡಳಿತ ಮತ್ತು ಅಜಲು’, ‘ತುಳುವೆರೆ ಅಟಿಲ ಅರಗಣೆ’, ‘ಚೇಳಾರ ಗುತ್ತು ಅಗೋಳಿ ಮಂಜಣ್ಣ’ ಇವೆಲ್ಲವೂ ಈವರ ಸಂಶೋಧನಾ ಕೃತಿಗಳು.
‘ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರ’, ‘ದೈವಗಳ ಸಂಧಿ ಪಾಡ್ದನ’ ಇವು ಡಾ.ಇಂದಿರಾ ಹೆಗ್ಗಡೆಯವರ ರಚನೆಯ ಜಾನಪದ ಕೃತಿಗಳು. ಕಥಾ ರಚನೆಯ ಮೂಲಕ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ ಇವರು ನಾಲ್ಕು ಕಥಾ ಸಂಕಲನಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಪತಿ ಎಸ್. ಆರ್. ಹೆಗ್ಗಡೆಯವರ ಸೈನಿಕ ಜೀವನದ ಅನುಭವವನ್ನು ಪತ್ನಿಯಾದ ಇಂದಿರಾ ಹೆಗ್ಗಡೆಯವರೂ ಜೊತೆ ಸೇರಿ ರಚಿಸಿದ ಕೃತಿ ‘ಗುತ್ತಿನಿಂದ ಸೈನಿಕ ಜಗತ್ತಿಗೆ’. ‘ಮಂಥನ’, ‘ಒಡಲುರಿ’ ಮತ್ತು ‘ಅಮಾಯಕ ಕರಾವಳಿ’ ಇವರ ಇತರ ಕೃತಿಗಳು. ಇಂದಿರಾ ಹೆಗಡೆಯವರು ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಅನೇಕ ಪ್ರಶಸ್ತಿ ಸಂಮಾನಗಳು ಲಭಿಸಿವೆ.
‘ಮೋಹಿನಿಯ ಸೇಡು’ ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ‘ವಸುದೇವ ಭೂಪಾಲಂ ಪ್ರಶಸ್ತಿ’ ಮತ್ತು ‘ಪುರುಷರೇ ನಿಮಗೆ ನೂರು ನಮನಗಳು’ ಕಥಾ ಸಂಕಲನಕ್ಕೆ ‘ಅಂಬರೀಶ ಪ್ರಶಸ್ತಿ’ ಬಂದಿದೆ. ‘ಬೆಳಗಾವಿಯ ಸಾಹಿತ್ಯ ಪುರಸ್ಕಾರ’ ‘ಒಡಲುರಿ’ ಕಾದಂಬರಿಗೆ ಮತ್ತು ‘ಬದಿ’ ಕಾದಂಬರಿ ‘ಅತ್ತಿಮಬ್ಬೆ ಪುರಸ್ಕಾರ’ವನ್ನು ಪಡೆದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ‘ಗೌರವ ಪ್ರಶಸ್ತಿ- 2022’, ‘ಸಾಹಿತ್ಯ ಕೌಸ್ತುಭ ಪ್ರಶಸ್ತಿ’ ಮತ್ತು ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಸೇರಿದಂತೆ ಅನೇಕ ಸನ್ಮಾನ ಗೌರವಗಳು ಇವರ ಮಡಿಲಿಗೆ ಸೇರಿವೆ. ಇಂದಿರಾ ಹೆಗ್ಗಡೆಯವರ ಸಣ್ಣ ಕಥೆಗಳು ಧಾರವಾಹಿಯಾಗಿ ಮತ್ತು ತುಳುವರ ಆಚಾರ ವಿಚಾರಗಳ ಬಗೆಗಿನ ವಿವರಣೆಗಳು ಸುಮಾರು ಒಂದು ವಾರಗಳ ಕಾಲ ದೂರದರ್ಶನದಲ್ಲಿ ಪ್ರಸಾರವಾಗಿವೆ.
ನೇರ ನುಡಿಯ ಸಮಾಜಮುಖಿ ಚಿಂತಕಿ, ಸೃಜನಶೀಲ ಸಾಹಿತಿ ಡಾಕ್ಟರ್ ಇಂದಿರಾ ಹೆಗಡೆಯವರ ಲೇಖನಿಯಿಂದ ಇನ್ನಷ್ಟು ಕೃತಿಗಳು ಹೊರಬರಲಿ. ಹುಟ್ಟು ಹಬ್ಬದ ಶುಭಾಶಯಗಳು.