ಮಂಗಳೂರು : ಹಿರಿಯ ವಿದ್ವಾಂಸ ಡಾ. ವಾಮನ ನಂದಾವರ ಇವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದು, ದಿನಾಂಕ 15 ಮಾರ್ಚ್ 2025ರಂದು ಬೆಳಗ್ಗೆ ಗಂಟೆ 8-30ಕ್ಕೆ ನಿಧನ ಹೊಂದಿದ್ದಾರೆ. ಇವರಿಗೆ 81 ವರ್ಷ ವಯಸ್ಸಾಗಿತ್ತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು. ಹೆಸರಾಂತ ಜಾನಪದ ವಿದ್ವಾಂಸರೂ ಹಲವಾರು ಪುಸ್ತಕಗಳನ್ನು ಬರೆದ ಹೆಸರಾಂತ ಲೇಖಕರೂ ಆಗಿ ಜನಪ್ರೀತಿ ಗಳಿಸಿದ ಇವರು ಹೇಮಾಂಶು ಪ್ರಕಾಶನದ ಮೂಲಕ ಅನೇಕ ಬರಹಗಾರರನ್ನು ಹಾಗೂ ಕಲಾವಿದರನ್ನು ರೂಪಿಸಿದ ತುಳು ಕನ್ನಡ ವಿದ್ವಾಂಸರಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದವರಾದ ಇವರು ಕನ್ನಡ ಹಾಗೂ ತುಳು ಭಾಷಾ ವಿದ್ವಾಂಸ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದರು. ಇವರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ಪದವಿ ವ್ಯಾಸಂಗವನ್ನು ಮಾಡಿದ್ದು, ನಂತರ ಮಂಗಳೂರು ಸರಕಾರಿ ಮಹಾವಿದ್ಯಾಲಯದಲ್ಲಿ ಬಿ.ಎಡ್., ಕರ್ನಾಟಕ ವಿ.ವಿ.ಯಿಂದ ಎಂ.ಎ. ಕನ್ನಡ ಪದವಿ ಗಳಿಸಿದ್ದರು. ಇವರು ಮಂಡಿಸಿದ್ದ ‘ಕೋಟಿ ಚನ್ನಯ’ ಜಾನಪದೀಯ ಅಧ್ಯಯನ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ದೊರಕಿತ್ತು.
ಇಂದು ಮಧ್ಯಾಹ್ನ 2-00 ಗಂಟೆಗೆ ಉರ್ವಸ್ಟೋರ್ ನಲ್ಲಿರುವ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಮಧ್ಯಾಹ್ನ 1-00 ಗಂಟೆ ತನಕ ಪಾರ್ಥಿವ ಶರೀರವು ಉಳಾಯಿಬೆಟ್ಟು ‘ಅವತಾರ್’ ವಿಶ್ರಾಂತಿ ಮನೆಯಲ್ಲಿರುತ್ತದೆ.