ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ಪ್ರಶಸ್ತಿಗಳಲ್ಲೊಂದಾದ 2025ನೆಯ ಸಾಲಿನ ‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ’ಗೆ ಪಿ.ಸಿ. ಅಂಥೋನಿ ಸ್ವಾಮಿ ಮತ್ತು ಬಿ.ಎಸ್. ತಲ್ವಾಡಿಯವರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ.
ಫಾದರ್ ಚೌರಪ್ಪ ಸೆಲ್ವರಾಜ್ ಸಾಹಿತ್ಯಕ, ಸಾಂಸ್ಕೃತಿಕ ಬಳಗದಲ್ಲಿ ಚಸರಾ ಎಂದೇ ಪರಿಚಿತರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಚಸರಾ ಚರ್ಚ್ಗಳಲ್ಲಿ ಕನ್ನಡ ಬಳಕೆ ಮತ್ತು ಕನ್ನಡಿಗರಿಗೆ ದೊರಕಬೇಕಾದ ಸವಲತ್ತುಗಳ ಕುರಿತಾಗಿ ಸುದೀರ್ಘ ಹೋರಾಟ ಮಾಡಿದರು. ಪ್ರಗತಿಪರ ಚಳುವಳಿಗೆ ಜೊತೆಗೆ ಸದಾ ಇರುತ್ತಿದ್ದ ಚಸರಾ ಸ್ವತ: ಉತ್ತಮ ಬರಹಗಾರರು, ಕ್ರೈಸ್ತ ಸಾಹಿತ್ಯ ಮತ್ತು ಸಂಗೀತಕ್ಕೆ ಘನತೆಯನ್ನು ತಂದು ಕೊಟ್ಟರು. 16 ಕನ್ನಡ ಕ್ರೈಸ್ತ ಭಕ್ತಿಗೀತೆಗಳ ಜೊತೆಗೆ 200ಕ್ಕೂ ಹೆಚ್ಚು ಕ್ರೈಸ್ತ ಗೀತೆಗಳಿಗೆ ಸಾಹಿತ್ಯ ರಚನೆ ಮಾಡಿದ್ದಾರೆ. ಅವರ ನೆನಪಿನಲ್ಲಿ ದತ್ತಿ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಚಲನ ಬಳಗದವರು ಸ್ಥಾಪಿಸಿದ್ದು, ಪ್ರತಿ ವರ್ಷ ಒಬ್ಬ ಪ್ರತಿಭಾವಂತ ಕ್ರೈಸ್ತ ಸಾಹಿತಿ ಹಾಗೂ ಒಬ್ಬರು ಕನ್ನಡಪರ ಹೋರಾಟಗಾರರಿಗೆ ಪುರಸ್ಕಾರ ನೀಡುವಂತೆ ನಿಯಮವನ್ನು ರೂಪಿಸಿದ್ದಾರೆ.
2025ನೆಯ ಸಾಲಿನ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಪಿ.ಸಿ.ಅಂತೋಣಿ ಸ್ವಾಮಿ ಉತ್ತರ ಕನ್ನಡ ಜಿಲ್ಲೆ ಕಮ್ಮನ ಹಳ್ಳಿಯವರು ಹತ್ತು ವರ್ಷ ನವದೆಹಲಿಯಲ್ಲಿದ್ದಾಗಲೂ ಕನ್ನಡದ ಕಂಪನ್ನು ಉಳಿಸಿಕೊಂಡು ಬಂದ ಅವರು ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿದ ಮೇಲೆ ಹೋರಾಟಗಳಲ್ಲಿಯೂ ಸಕ್ರಿಯರಾದರು. ಚರ್ಚ್ ಗಳಲ್ಲಿ ಕನ್ನಡ ಬಳಕೆಯ ಕುರಿತ ಹೋರಾಟ ಮುಂಚೂಣಿಯಲ್ಲಿದ್ದ ಅವರು ಉತ್ತಮ ಅನುವಾದಕರು, ಪತ್ರಿಕೋದ್ಯಮದಲ್ಲಿಯೂ ತಮ್ಮನ್ನು ತೊಡಿಗಿಸಿಕೊಂಡವರು. ಡಾ. ಬಿ.ಎಸ್. ತಲ್ವಾಡಿಯವರು ಗಡಿನಾಡು ಪ್ರದೇಶ ತಾಳವಾಡಿಯವರು. ಮೂರು ಸ್ನಾತಕೋತ್ತರ ಪದವಿಗಳ ಜೊತೆಗೆ ‘ದಕ್ಷಿಣ ಕರ್ನಾಟಕ ಕ್ರೈಸ್ತ ಜನಪದ ಸಾಹಿತ್ಯ’ ಎನ್ನುವ ವಿಷಯದ ಮೇಲೆ ಅಧ್ಯಯನ ಮಾಡಿ ಡಾಕ್ಟೊರೇಟ್ ಪಡೆದರು. ಜನಪದ ವಿದ್ವಾಂಸರಾಗಿ, ವಿಮರ್ಶಕರಾಗಿ, ಬರಹಗಾರರಾಗಿ, ಗಾಯಕರಾಗಿ ಬಹುಮುಖ ಪ್ರತಿಭೆಯನ್ನು ಮೆರೆದಿರುವ ಇವರು ‘ಸಿರಿಭುವನ ಜ್ಯೋತಿ’ ಎನ್ನುವ ಯೇಸು ಕ್ರಿಸ್ತನ ಕುರಿತ ಮಹಾಕಾವ್ಯವನ್ನು ಬರೆದಿದ್ದಾರೆ. ಪುರಸ್ಕಾರಕ್ಕೆ ಆಯ್ಕೆಯಾದ ಪಿ.ಸಿ. ಅಂಥೋನಿ ಸ್ವಾಮಿ ಮತ್ತು ಬಿ.ಎಸ್. ತಲ್ವಾಡಿ ಇಬ್ಬರನ್ನೂ ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಅಭಿನಂದಿಸುತ್ತದೆ.
ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ಸೇರಿದ್ದ ಆಯ್ಕೆ ಸಮಿತಿಯು ಪಾರದರ್ಶಕವಾಗಿ ಮತ್ತು ಕೂಲಂಕುಶವಾಗಿ ಪರಿಶೀಲಿಸಿ ಈ ಪುರಸ್ಕಾರಕ್ಕಾಗಿ ಪಿ.ಸಿ. ಅಂಥೋನಿ ಸ್ವಾಮಿ ಮತ್ತು ಬಿ.ಎಸ್. ತಲ್ವಾಡಿಯವರನ್ನು ಆಯ್ಕೆ ಮಾಡಿದೆ. ಆಯ್ಕೆ ಸಮಿತಿಯಲ್ಲಿ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಮತ್ತು ದತ್ತಿದಾನಿಗಳ ಪರವಾಗಿ ರೀಟಾ ರೇನಿ ಮತ್ತು ಪ್ರಶಾಂತ್ ಇಗ್ನೇಷಿಯಸ್ ಭಾಗವಹಿಸಿದ್ದರು.