ಇದು ಸುಮಾರು 70 ವರ್ಷದ ಹಿಂದಿನ ಕಥೆ. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ 04/01/1955. ಆ ದಿನ ಏಕಾದಶಿಯಂತೆ. ಅಂದು ರಾಧೆ ಕೃಷ್ಣ ದಂಪತಿಯರ ಮಡಿಲು ತುಂಬಿದ ಕಂದ, ಸಾಕಿ ಬೆಳೆಸಿದ ಶಿವ ಪಾರ್ವತಿಗೊಲಿದ ಮಕರಂದ.
ಅಣ್ಣಿಗೇರಿ ಎಂಬ ನವಲಗುಂದದ ಹಳ್ಳಿಯೊಂದರಲ್ಲಿ ಅರಳಿದ ಅರವಿಂದ ಅಲ್ಲಿಯ ಕುಲೀನ ಮನೆತನ ಕುಲಕರ್ಣಿ ಕುಲದಾನಂದ… ನಮ್ಮ ಅಭಿನಯ ಭಾರತಿಯ ಹೆಮ್ಮೆಯ ರವಿ ರಶ್ಮಿ… ಅರವಿಂದ ಕುಲಕರ್ಣಿ ಧರೆಗಿಳಿದು ಬಂದ ಪರ್ವ ದಿನವಂತೆ.
ಮುಂದಿನ ಇವರ ಜೀವನ ಕಥನ ಕೇಳೋಣ. ಹೂ ಹಣ್ಣು ಬಿಡುವ ತರುಲತೆಗಳು ಚಿಗುರುತ್ತಿರುವಾಗಲೇ ಅಗತ್ಯದ ನೀರು ಗೊಬ್ಬರ ಬುಡಕ್ಕೆ ಬಿದ್ದರೆ ಅದು ಫಲ ಭರಿತ ಹೆಮ್ಮರವಾಗಿ ಬೆಳೆದು ದಾರಿ ಹೋಕರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ ಅಲ್ಲವೇ.
ಹೌದು ಹೀಗೆಯೇ ನಂದನವನವಾಗಿತ್ತು ಕುಲಕರ್ಣಿಯವರ ಬಾಲ್ಯದ ಜೀವನ. ಎಳವೆಯಲ್ಲಿಯೇ ಸಾಧನೆಗಳ ಮೆಟ್ಟಲೇರಲು ಬೇಕಾದ ಭದ್ರ ಬುನಾದಿ ದೊರೆತದ್ದು ಹುಟ್ಟೂರು ಅಣ್ಣಿಗೇರಿಯ ಸುಂದರ ಪರಿಸರದಲ್ಲಿಯೇ…
ಅರವಿಂದರ ಅಕ್ಷರ ಪಯಣ ಪ್ರಾರಂಭವಾದದ್ದೂ ಅಲ್ಲಿಯ ಸರಕಾರಿ ಶಾಲೆಯಲ್ಲಿಯೇ. ಆ ಶಾಲೆ ಅಮೃತೇಶ್ವರ ಗುಡಿಯೊಳಗಿನ ಆವರಣದಲ್ಲಿತ್ತಂತೆ. ಗುಡಿಯ ಆವರಣ ಎಂದ ಮೇಲೆ ಅಲ್ಲಿ ಆಧ್ಯಾತ್ಮಿಕ ಸಾಂಸ್ಕೃತಿಕ ಆಚಾರ ವಿಚಾರ ಜ್ಞಾನ ಪ್ರಸಾರಗಳ ಕಲರವ ನಿರಂತರ.
ಇವೆಲ್ಲದರ ಜೊತೆ ದಾಸಾಚಾರ್ಯರೆಂಬ ಮುನಿವರ್ಯರ ವೇದಾಮೃತ ಕೀರ್ತನೆಗಳ ಸಾರ ಅರವಿಂದರ ಎಳೆಯ ಮನಸ್ಸಿಗೆ ಅಮೃತ ಪಾನವಾಯಿತು. ಆವತ್ತು ಇವರ ತವರಲ್ಲೊಂದು ಜೀವನ ಶಿಕ್ಷಣ ಶಾಲೆಯೂ ಇತ್ತು.
ಅದು ಇವರಿಗೆ ಪರಿಸರ ಪ್ರಕೃತಿ ಪ್ರೇಮದ ಪಾಠ ಕಲಿಸಿತ್ತು. ನಂತರ ಇವರು ವಿದ್ಯಾರಣ್ಯ ಶಾಲೆಯನ್ನು ಒಪ್ಪಿಕೊಂಡದ್ದಕ್ಕೆ ಶಾಲೆಯೇ ಇವರನ್ನು ಐದರಿಂದ ಹತ್ತನೇ ತರಗತಿಯವರೆಗೆ ಗಟ್ಟಿಯಾಗಿ ಅಪ್ಪಿಕೊಂಡಿತ್ತು. ಆ ಸಮಯವೇ ಇವರ ಜೀವನದ ಸ್ವರ್ಣ ಯುಗ.
ಇವರೊಳಗಿನ ಶಿಲೆ ಶಿಲ್ಪವಾದದ್ದು ಇಲ್ಲಿಯೇ. ಪಾಠದೊಂದಿಗೆ ಇಲ್ಲಿ ಚಿತ್ರಕಲೆ ಸಂಗೀತ, ಸಾಹಿತ್ಯ, ನೃತ್ಯ, ಕಥೆ, ಕ್ರೀಡೆ, ರೇಡಿಯೋ, ನಾಟಕ ಹೀಗೆ ಕಲಾ ಪ್ರಪಂಚವನ್ನೇ ಇವರ ಮುಂದೆ ತೆರೆದಿಟ್ಟಿತ್ತು ಇವರ ಇಷ್ಟದ ವಿದ್ಯಾರಣ್ಯ ಶಾಲೆ. ದಿನದ ಮುಂಜಾನೆ ಎಂಟರಿಂದ ಹತ್ತು ಕಲಾ ಲೋಕ, ಹತ್ತರಿಂದ ಐದು ನಿತ್ಯದ ವಿದ್ಯಾ ಲೋಕ, ಸಂಜೆ ಐದರಿಂದ ಆರು ಪ್ರಾಚಾರ್ಯ ವೆಂಕಟ ಆಚಾರ್ಯರ ಚಿಂತನೆಯ ಚಿಣ್ಣರೊಳಗಿನ ಪ್ರತಿಭಾನ್ವೇಷಣೆಯ ಮಂಥನ ಕಾಲವಾಗಿತ್ತು.
ಸಮಗ್ರ ವಿದ್ಯಾರ್ಥಿ ಹೇಗಿರಬೇಕು ಎಂಬ ಅರಿವು ಮೂಡಿಸುವ ಈ ಮಾದರಿ ಶಾಲೆ ಜೀವನ ಘಟ್ಟದಲ್ಲಿ ಎಂದೂ ಮರೆಯಲಾಗದ ಖುಷಿ ನೀಡಿತ್ತು. ಅಂದು ಆಕಾಶವಾಣಿ ಧಾರವಾಡದ ಬಾಲ ಕಲಾವಿದನಾಗಿ ರೇಡಿಯೋ ನಾಟಕಕ್ಕಾಗಿ ಪಡೆದ ಅಂದಿನ ಐದು ರೂಪಾಯಿ ಸಂಭಾವನೆ ಇಂದಿಗೂ ಮರೆಯಲಾಗದ ಸವಿ ನೆನಪಾಗಿ ಉಳಿದಿದೆ.
ಹೇಗೆ ಮರೆತು ಹೋದೀತು ಅಂದು ಆ.ನಾ.ಕೃ., ತ.ರಾ.ಸು., ಕೃಷ್ಣಮೂರ್ತಿ ಪುರಾಣಿಕ, ಶಿವರಾಮ ಕಾರಂತರಂತಹ ಮಹಾನ್ ಕಥೆಗಾರರ ಕಥೆ ಕಾದಂಬರಿಗಳನ್ನು ಓದಿ ಶಿಕ್ಷಕರ ಅನುಪಸ್ಥಿತಿಯಲ್ಲಿ ತರಗತಿಯಲ್ಲಿ ಆಗಾಗ ತನ್ನ ಗೆಳೆಯರಿಗೆ ಕಥೆ ಹೇಳುವ ಬೋಧಿಸುವ ಅವಕಾಶ ಸಿಕ್ಕಿದ್ದು. ಇದೇ ಇವರ ರಂಗ ಪಯಣಕ್ಕೆ ನಾಂದಿಯಾಗಿತ್ತು ಎಂದರೆ ತಪ್ಪಲ್ಲ. ಆಗ ಶಾಲೆಯಲ್ಲಿ ಆಗಾಗ ನಡೆಯುತ್ತಿದ್ದ ಸಾಹಿತ್ಯ ಸಮ್ಮೇಳನದ ಮೂಲಕ ಬೇಂದ್ರೆ, ಕಾರಂತ, ಕೈಲಾಸಂರಂತ ಸಾಹಿತ್ಯ ರತ್ನಗಳ ಸಾಂಗತ್ಯ ದೊರಕಿತ್ತು.
ನಂತರ ಕೆ.ಸಿ.ಡಿ.ಯಲ್ಲಿ ಗೆಳೆಯರ ತಂಡದೊಂದಿಗೆ ವ್ಯಕ್ತಿತ್ವ ವಿಕಸನದ, ಪಾಠದೊಂದಿಗೆ ಸ್ಪರ್ಧೆ, ಭಾಗವಹಿಸುವಿಕೆ ಹೀಗೆ ಒಳ ಮನಸ್ಸಿನ ಅಭಿವ್ಯಕ್ತಿಗಳಿಗೆ ವೇದಿಕೆ ಒದಗಿತ್ತು. ಅಲ್ಲಿಂದ ಕಲಿಕೆ ಮುಂದುವರೆದು ಗೆಳೆಯರ ಒಮ್ಮತದ ನಿರ್ಧಾರಗಳಿಗೆ ತಲೆಬಾಗಿ ಸುರತ್ಕಲ್ ನ ಎನ್.ಐ.ಟಿ.ಕೆ. ಬಿಟ್ಟು ಬಿ.ವಿ.ಬಿ. ಕಾಲೇಜ್ ಮುಖಾಂತರ ಬಿ.ಇ. ಡಿಗ್ರಿ ಪಡೆದದ್ದಾಗಿತ್ತು. ಫಲಿತಾಂಶ ದೊರೆತ ನಾಲ್ಕೇ ದಿನಗಳಲ್ಲಿ ಧಾರವಾಡದ ಕೆ.ಎಚ್. ಕಪೂರ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿತ್ತು.
ಒಬ್ಬ ನಾಯಕ ಎಲ್ಲೇ ಇರಲಿ ಅವನಿದ್ದ ಭೂಮಿಯನ್ನು ಹಸನಾಗಿಸುವ ಸ್ವರ್ಗವಾಗಿಸುವ ಹುಮ್ಮಸ್ಸು ತಾಕತ್ತು ಅವನಲ್ಲಿ ಇದ್ದೇ ಇರುತ್ತದೆ. ಆ ಪೈಕಿ ಕುಲಕರ್ಣಿಯವರೂ ಒಬ್ಬರು. ದಧಿಯಿಂದ ನವನೀತ, ನವನೀತದಿಂದ ಘೃತ ಆ ಘೃತದಿಂದ ಅದೆಷ್ಟೋ ಮಂದಹಾಸ ಭರಿತ ದೀಪಗಳನ್ನು ಪ್ರಜ್ವಲಿಸುವ ಕಾಯಕದಿಂದ ಪ್ರಜ್ಞಾಶೀಲ ಪ್ರಬುದ್ಧ ಪ್ರಜೆಗಳನ್ನು ಹುಟ್ಟುಹಾಕುವ ಪ್ರೇರಕ ಶಕ್ತಿಯಾಗಿ ಮೂಡಿ ಬಂದ ಎಲ್ಲರ ಮೆಚ್ಚಿನ ಪ್ರಾಚಾರ್ಯರಾದರು ಕುಲಕರ್ಣಿ.
ಪರಿಚಯದ ಹುಡುಗಿ ವಿಜಯರ ಜೊತೆ ಪರಿಣಯವೂ ಆಯಿತು. ಜೀವನದ ಪಯಣದಲಿ ಚಿಪ್ಪರಳಿ ಮೂರು ಮುತ್ತರಳಿ ಪ್ರಭೆ ಸೂಸುತ್ತಲಿತ್ತು. ವಿಧಿ ಲಿಖಿತವೇನಿತ್ತೋ.. ಕಳೆಯಿತೊಂದು ಮುತ್ತು – ಆ ನೋವನ್ನು ಕಲೆ ಒಂದಿಷ್ಟು ಮರೆ ಮಾಚಿಸಿತ್ತು. ಇನ್ನುಳಿದೆರಡು ಮುತ್ತುಗಳು …ಮಗ ರಘುನಂದನ್ … ಮಗಳು ಗೌರಿ ಸದಾ ಹೆಜ್ಜೆ ಹೆಜ್ಜೆಗೆ ಬೆಂಬಲ ನೀಡುವ ತಂದೆಯ ಯಶೋರಥದ ಎರಡು ಚಕ್ರಗಳು.
ರಂಗ ಶಿಕ್ಷಣ, ವೃತ್ತಿ ಸಂಬಂಧಿತ ಶಿಕ್ಷಣ, ವ್ಯಕ್ತಿತ್ವ ವಿಕಸನ, ರೋಟರಿ ಅಭಿಯಾನ, ಹಸ್ತಸಾಮುದ್ರಿಕಾ ಚಿಂತನ ಇತ್ಯಾದಿ ಗುಣವಿಶೇಷಣ ಕುಲಕರ್ಣಿಯವರನ್ನು ಸದೃಢವಾಗಿಸಿ ಸಂಪನ್ಮೂಲ ವ್ಯಕ್ತಿಯಾಗಿಸಿ ಹಲವು ದೇಶ ವಿದೇಶಗಳಿಗೆ ಸುತ್ತಿಸಿತ್ತು.
ರಂಗನಟನಾಗಿ ನಿರ್ದೇಶಕನಾಗಿ ಸಂಘಟಕನಾಗಿ ಸಂಯೋಜಕನಾಗಿ ರಂಗ ಮಂಚದ ಮೆಟ್ಟಲೇರುತ್ತ ಬಂದ ಅರವಿಂದರಿಗೆ ಜಿ.ಬಿ. ಜೋಶಿಯವರ ಸಾಂಗತ್ಯ ಯಜ್ಞ ಕುಂಡಕ್ಕೆಕೆರೆದ ತುಪ್ಪವಾಯಿತು. ನಟನೆಯ ಬೆಂಕಿ ಭಗಿಲೆದ್ದಿತ್ತು. ಅವರ ಆಶ್ರಯದಲ್ಲಿ ಹುಟ್ಟಿಕೊಂಡ ‘ದಾರವಾಡ ಗೆಳೆಯರು’ ತಂಡದ ಮೂಲಕ ರೂಪುಗೊಂಡ ನಾಟಕಗಳಲ್ಲಿ ಆವರಣ, ಕದಡಿದ ನೀರು ಇವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು. ನಂತರ ಇವರ ಕನಸಿನ ಕೂಸು ಅಭಿನಯ ಭಾರತಿ 1981ರಲ್ಲಿ ಜನ್ಮ ತಳೆಯಿತು.
ಇಂದು ವಿಶ್ವ ಪ್ರಸಿದ್ಧವಾದ ಈ ತಂಡದಲ್ಲಿ ಇವರ ಸೇವೆ ಭೀಮ ಪಾಲು. ಅದರ ಸರ್ವತೋಮುಖ ಬೆಳವಣಿಗೆಗಾಗಿ ಸರಕಾರದ ಮುಂದೆ ಕೈ ಚಾಚದೆ ಸದಸ್ಯತ್ವದ ಮೂಲಕ ಹಣ ಸಂಗ್ರಹಿಸಿ ಠೇವಣಿ ಇಟ್ಟು ರಂಗ ಶಿಕ್ಷಣ ರಂಗ ಗೋಷ್ಠಿ ಅಭಿನಯ ಶಿಬಿರ ನಾಟಕೋತ್ಸವ ಹೀಗೆ ಹತ್ತಾರು ರಂಗ ಚಟುವಟಿಕೆಗಳಿಂದ ಎಲ್ಲರ ಗಮನ ತಮ್ಮತ್ತ ಸೆಳೆದರು.
ಕಳೆದ 29 ವರ್ಷಗಳಿಂದ ರಂಗಭೂಮಿಯ ಮೇರು ಕಲಾವಿದರಿಗೆ ‘ಅಭಿನಯ ಭಾರತಿ ರಂಗ ಪ್ರಶಸ್ತಿ’ ನೀಡುತ್ತಾ ಬಂದಿರುವುದೊಂದು ಮಹತ್ಸಾಧನೆ. ಮಾಸಪೂರ್ತಿ 12 ಭಾಷೆಗಳ ವಿವಿಧ ನಾಟಕಗಳ ನಾಟಕೋತ್ಸವ ಹಮ್ಮಿಕೊಂಡು ಯಶಸ್ವಿಯಾದದ್ದು ಅಭಿನಯ ಭಾರತಿಯ ಎಂದೂ ಮಾಸಿ ಹೋಗದ ದೊಡ್ಡ ಇತಿಹಾಸ.
ಕೊರೋನಾ ಸಮಯದಲ್ಲಿ ರಂಗಭೂಮಿ ನೆಲಕಚ್ಚುವ ಸ್ಥಿತಿಯಲ್ಲಿದ್ದಾಗ ತಂತ್ರಜ್ಞಾನ ಬಳಸಿ ಫೇಸ್ಬುಕ್ ಮೂಲಕ ವರ್ಚುವಲ್ ವೇದಿಕೆಯನ್ನು ನಿರ್ಮಿಸಿ ನೂರಾರು ರಂಗ ಚಟುವಟಿಕೆಗಳನ್ನು ಉಪನ್ಯಾಸಗಳನ್ನು ನಿರಂತರವಾಗಿ ಪ್ರಾರಂಭಿಸಿ ರಂಗ ಕ್ರಾಂತಿ ಎಬ್ಬಿಸಿ ಇದೀಗ ಮೂರು ಸಾವಿರದ ಐನೂರಕ್ಕೂ ಹೆಚ್ಚಿನ ಕನ್ನಡದ ದೇಶಿ ವಿದೇಶಿಯರನ್ನು ಸದಸ್ಯರನ್ನಾಗಿಸಿರುವುದು ಇವರ ಅತ್ಯಂತ ದೊಡ್ಡ ಸಾಧನೆಯೇ ಸರಿ. ಸಾಧನೆಗಳ ಸಾಕಾರ ಮೂರ್ತಿಗೆ ಪ್ರಶಸ್ತಿಗಳಿಗಿಲ್ಲ ಯಾವುದೇ ಕೊರತೆ.
ಉದ್ವಸ್ಥ, ಧರ್ಮಶಾಲೆ, ಹೀಗೊಂದು ರಾಗ, ಚಂದ್ರಗುಪ್ತ, ನಂದ ಭೂಪತಿ ಹೀಗೆ ಹತ್ತಾರು ನಾಟಕಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿ ನಟನೆ ನಿರ್ದೇಶನ ಸಂಘಟನೆಯಲ್ಲಿ ಹೆಸರು ಮಾಡಿದ ವೈಚಾರಿಕ ದೃಷ್ಟಿಕೋನದ ನೇರ ನಿಷ್ಠುರ ಮಾತುಗಳ ಉತ್ತಮ ವಾಗ್ಮಿ ಅರವಿಂದ ಕುಲಕರ್ಣಿಯವರ ಪ್ರಶಸ್ತಿಗಳ ಸರಮಾಲೆಗೆ ಸೇರಲಿದೆ ಇಂದು ಇನ್ನೊಂದು ಮುತ್ತಿನ ಪದಕ. ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಮತ್ತು ಉಡುಪಿ ಶಾಖೆಯ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಇದರ ವತಿಯಿಂದ ವಿಶ್ವರಂಗ ದಿನಾಚರಣೆಯ ಅಂಗವಾಗಿ ದಿನಾಂಕ 26 ಮಾರ್ಚ್ 2025ರಂದು ‘ಮಲಬಾರ್ ವಿಶ್ವ ರಂಗ ಪುರಸ್ಕಾರ- 2025’ ನೀಡಿ ಗೌರವಿಸಲಿದೆ.
ರಾಜೇಶ್ ಭಟ್ ಪಣಿಯಾಡಿ
ಸಂಚಾಲಕರು, ಮಲಬಾರ್ ವಿಶ್ವ ರಂಗ ಪುರಸ್ಕಾರ