ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಶ್ರೀಪಾದ ಕೃಷ್ಣ ರೇವಣಕರ್ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 16 ಮಾರ್ಚ್ 2025ರಂದು ಶ್ರೀಪಾದ ಗುಲಾಬಿ ನಿವಾಸದಲ್ಲಿ ನಡೆಯಿತು.
ಸಾಮಾಜಿಕ ಕಾರ್ಯಕರ್ತರೂ, ನಿವೃತ್ತ ಅಧ್ಯಾಪಕರೂ ಆದ ಶ್ರೀ ಸುಧಾಕರ ಪೇಜಾವರರವರು ಶ್ರೀಪಾದ ರೇವಣಕರರ ವ್ಯಕ್ತಿತ್ವ ಪರಿಚಯವನ್ನು ಮಾಡಿಕೊಟ್ಟರು. ಸರಳತೆಯ ಬದುಕನ್ನು ಮೈಗೂಡಿಸಿಕೊಂಡು, ಆದರ್ಶ ತಂದೆಯಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕೊಟ್ಟು ಬೆಳೆಸುವುದರೊಂದಿಗೆ, ಅಂಚೆ ಇಲಾಖೆಯಲ್ಲಿ ಅಂಚೆ ಅಣ್ಣನಾಗಿ ಅವರು ಗೈದ ಸೇವೆಯನ್ನೂ ಮನೆಮನಗಳನ್ನು ಬೆಸೆಯುವಂತಹ ಕೈಂಕರ್ಯಗಳನ್ನೂ ಸ್ಮರಿಸಿಕೊಂಡರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಶ್ರೀ ಪುಷ್ಪರಾಜ್ ಅವರು ‘ಗ್ರಾಮೀಣ ಬದುಕು ಶಿಕ್ಷಣ ನೀತಿ’ ಎಂಬ ವಿಷಯದ ಬಗ್ಗೆ ದತ್ತಿ ಉಪನ್ಯಾಸವನ್ನು ನೀಡಿದರು. ಗ್ರಾಮೀಣ ಶಿಕ್ಷಣವು ವಿದ್ಯಾರ್ಥಿಗಳಿಗೆ ಔಪಚಾರಿಕ ಶಿಕ್ಷಣದೊಂದಿಗೆ ಅನೌಪಚಾರಿಕ ಶಿಕ್ಷಣವನ್ನು ನೀಡಿ ಬದುಕಿನ ಯಾವುದೇ ಸವಾಲುಗಳನ್ನು ಎದುರಿಸಲು ಸಮರ್ಥರಾಗುವಂತೆ ಮಾಡುತ್ತದೆ ಎಂಬುದನ್ನು ಹೇಳುತ್ತಾ, ಇಂದು ಗ್ರಾಮೀಣರು ಅದನ್ನು ಬಿಟ್ಟು ನಗರೀಕರಣದೆಡೆಗೆ ಸೆಳೆಯಲ್ಪಟ್ಟು ಸಂಸ್ಕೃತಿ ಹಾಗೂ ಕೃಷಿ ಚಟುವಟಿಕೆಗಳಿಂದ ದೂರವಾಗುವುದರೊಂದಿಗೆ ಮಾನವೀಯ ಸಂಬಂಧಗಳು ಕುಸಿಯುತ್ತಾ ಹೋಗುತ್ತಿರುವ ಬಗ್ಗೆ ಖೇದವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಮಂಜುನಾಥ ರೇವಣಕರರು ವಹಿಸಿದ್ದರು. ಶ್ರೀಪಾದ ಕೃಷ್ಣ ರೇವಣಕರರ ಪುತ್ರರಾದ ಶ್ರೀ ಅಂಬರೀಷ ರೇವಣಕರ, ಶ್ರೀ ರಾಜೇಂದ್ರ ರೇವಣಕರ, ಅಳಿಯ ಶ್ರೀ ಚಂದ್ರಕಾಂತ ನಾನುರವರು ಮತ್ತು ಕುಟುಂಬದವರು ಹಾಗೂ ಕ.ಸಾ.ಪ. ಕೇಂದ್ರ ಸಮಿತಿಯ ಡಾ. ಮಾಧವ ಹಾಗೂ ಮಂಗಳೂರು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು. ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಸಮಿತಿಯ ಮಾರ್ಗದರ್ಶಕರೂ ಆದ ಡಾ. ಮುರಳಿ ಮೋಹನ ಚೂಂತಾರರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ ಪ್ರಸಾದ ಜೀಯವರು ನಿರ್ವಹಿಸಿ, ಕೋಶಾಧಿಕಾರಿ ಶ್ರೀ ಸುಬ್ರಾಯ ಭಟ್ ರವರು ವಂದಿಸಿದರು.