ಹಂಪಿ : ಹಸ್ತಪ್ರತಿಶಾಸ್ತ್ರ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಆಯೋಜಿಸುವ ಅಖಿಲ ಕರ್ನಾಟಕ ಇಪ್ಪತ್ತೊಂದನೆಯ ಹಸ್ತಪ್ರತಿ ಸಮ್ಮೇಳನವು ದಿನಾಂಕ 25 ಮತ್ತು 26 ಮಾರ್ಚ್ 2025ರಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ನಡೆಯಲಿದೆ.
ದಿನಾಂಕ 25 ಮಾರ್ಚ್ 2025ರಂದು ಬೆಂಗಳೂರಿನ ಹಿರಿಯ ವಿದ್ವಾಂಸರಾದ ಡಾ. ಜಿ. ಜ್ಞಾನಾನಂದ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ವಿಶ್ವಬ್ರಾಹ್ಮಣ ಮಠಾಧಿಪತಿ ಮತ್ತು ಪೀಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರು ಹಾಗೂ ವಿಶ್ವಬ್ರಾಹ್ಮಣ ಮೂರುಜಾವದ ಮಠ ಆಲಮೇಲ ಸಿಂದಗಿ ಇಲ್ಲಿನ ಪ. ಪೂ. ಶ್ರೀ ರಾಮಚಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಅಂದು ಬೆಳಿಗ್ಗೆ ಘಂಟೆ 10.30ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಡಿ. ವಿ. ಪರಮಶಿವಮೂರ್ತಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ವಿಶ್ರಾಂತ ಆಯುಕ್ತರಾದ ಶ್ರೀ ಶ್ರೀನಿವಾಸಾಚಾರಿ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ (ರಿ.) ಶಿರಸಂಗಿ ಇದರ ಅಧ್ಯಕ್ಷರಾದ ಪ್ರೊ. ಪಿ .ಬಿ. ಬಡಿಗೇರ ಇವರು ಡಾ. ಕೆ. ರವೀಂದ್ರನಾಥ ಸಂಪಾದಿಸಿದ ‘ಹಸ್ತಪ್ರತಿ ವ್ಯಾಸಂಗ-24’ ಕೃತಿ ಲೋಕಾರ್ಪಣೆಗೊಳಿಸಲಿದ್ದು, ಮುಖ್ಯ ಅತಿಥಿಗಳಾಗಿ ಹೊಸಪೇಟೆಯ ಸಹಾಯಕ ಆಯುಕ್ತರಾದ ಶ್ರೀ ವಿವೇಕಾನಂದ ಪಿ. ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಬನಹಟ್ಟಿಯ ಶ್ರೀ ಮೋಹನ ಎಂ. ಪತ್ತಾರ, ಕಲ್ಲೋಳಿಯ ಶ್ರೀ ಭಗವಂತ ಹ ಪತ್ತಾರ, ವೇದಪಾರಕ ಜಮಖಂಡಿಯ ಶ್ರೀ ಚಂದ್ರಶೇಖರ ರ. ಹಾಗೂ ಸವದತ್ತಿಯ ಶ್ರೀ ಅರುಣ್ ಚ ಸುಳ್ಳದ ಇವರನ್ನು ಸನ್ಮಾನಿಸಲಾಗುವುದು.
ಸಭಾಕಾರ್ಯಕ್ರಮದ ಬಳಿಕ ‘ಜೀವಣ್ಣ ಮಸಳಿ ಅವರ ಸಾಹಿತ್ಯ ಸಂಸ್ಮರಣೆ-1’, ‘ಜೀವಣ್ಣ ಮಸಳಿ ಅವರ ಸಾಹಿತ್ಯ ಸಂಸ್ಕರಣೆ-2’, ‘ಜಿ. ಜ್ಞಾನಾನಂದ ಅವರ ಸಮಗ್ರ ಬದುಕು ಹಾಗೂ ಸಂಶೋಧನೆ’ ಹಾಗೂ ‘ಪ್ರಾಚೀನ ಕಾವ್ಯ ಪರಿಷ್ಕರಣೆ’ ಎಂಬ ವಿಷಯದಲ್ಲಿ ಗೋಷ್ಠಿಗಳು ನಡೆಯಲಿವೆ.


