ಪುತ್ತೂರು : ಪುತ್ತೂರಿನ ‘ಬಹುವಚನಂ’ ಹಾಗೂ ನಿರತ ನಿರಂತ ಆಯೋಜನೆಯಲ್ಲಿ ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ‘ಥೇಟರ್ ಮಾರ್ಚ್’ ಕಾರ್ಯಕ್ರಮವು ದಿನಾಂಕ 16 ಮಾರ್ಚ್ 2025ರ ಭಾನುವಾರದಂದು ಪರ್ಲಡ್ಕದಲ್ಲಿರುವ ಪದ್ಮಿನಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಿಶೇಷ ರಂಗೋಪನ್ಯಾಸ ನೀಡಲು ಆಗಮಿಸಿದ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ ಮಾತನಾಡಿ “ನಾಟಕದ ಹುಟ್ಟಿನ ಹಿನ್ನೆಲೆಯಲ್ಲೂ ಆರಾಧನಾ ಪರಂಪರೆ ಇದೆ. ಗ್ರೀಕ್ ನೆಲದಲ್ಲಿ ರಂಗಭೂಮಿ ಬೆಳೆದು ಬಂದ ವಿವಿಧ ಆಯಾಮಗಳನ್ನು ವಿವಿಧ ನಾಟಕ, ನಾಟಕಕಾರರು ಹಾಗೂ ಪಾತ್ರಗಳ ಮೂಲಕ ತೆರೆದಿಟ್ಟರು. ರಂಜನೆ ಎಂಬ ಬೆಲ್ಲವನ್ನು ಸವರಿಕೊಂಡ ಕಹಿಗುಳಿಗೆ ರಂಗಭೂಮಿ. ರಂಗಭೂಮಿ ಕಾಲವನ್ನು ನಮ್ಮೆದುರಿಗೆ ಇಟ್ಟು ಮಾತನಾಡುತ್ತದೆ, ಶಿಕ್ಷಣದ ನೆಲೆ, ಹಿಡಿತದ ಭಾವ, ಪ್ರಖರ ವೈಚಾರಿಕತೆಯ ನೆಲೆಗಟ್ಟು, ಪ್ರಶ್ನೆ, ವಿಮರ್ಶೆ, ಸರಿಯಾದ ತಿಳುವಳಿಕೆಯೇ ರಂಗಭೂಮಿಯ ಹಿರಿಮೆ.
ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನ
ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು
ಉರಿ ಉರಿವುತಿದೆ ದೇಶ ನಾವಿ
ನ್ನಿರಲು ಬಾರದೆನುತ್ತ ಜನ ಬೇ
ಸರದ ಬೇಗೆಯಲಿರದಲೇ ಭೂಪಾಲ ಕೇಳೆಂದ ಎಂಬ ಕುಮಾರ ವ್ಯಾಸ ಭಾರತದ ಸಾಲುಗಳನ್ನು ಉಲ್ಲೇಖಿಸಿ, ನಮ್ಮ ದೇಶ, ಜಗತ್ತು ಇದೇ ಸ್ಥಿತಿಯಲ್ಲಿದೆ, ಆರು ನೂರು ವರ್ಷಗಳ ಹಿಂದೆಯೇ ಕುಮಾರವ್ಯಾಸನಿಗೆ ಭಾರತದಲ್ಲಿ ಈ ಸ್ಥಿತಿ ಬರಬಾರದೆನ್ನುವ ಕಳಕಳಿ ಇತ್ತು. ಮಾಹಿತಿಯ ಕೊರತೆಯಿಂದ ನೀಡುವ ಹೇಳಿಕೆಗಳು ಇತಿಹಾಸವನ್ನೇ ತಿರುಚುವ ಅಪಾಯವನ್ನು ತರುತ್ತದೆ. ಗಾಂಧೀಜಿ ಯಾವಾಗ ಸತ್ತರು ಎನ್ನುವ ಪ್ರಶ್ನೆಯಿಂದ ಅವರನ್ನು ಕೊಲೆಮಾಡಲಾಯಿತು ಎನ್ನುವ ಸತ್ಯ ಅಡಗುವ ಅಪಾಯ ಇದೆ. 1961-62ರ ಮಾರ್ಚ್ 26 ಹಾಗೂ 27 ರಂದು ಫ್ರಾನ್ಸ್ ನಲ್ಲಿ ನಡೆದ ವಿಶ್ವಮಟ್ಟದ ರಂಗಭೂಮಿ ಅಧಿವೇಶನದ ನೆನಪಿನಲ್ಲಿ ಜಗತ್ತಿನಾದ್ಯಂತ ವಿಶ್ವರಂಗಭೂಮಿ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ಈಗ ಆ ದಿನವನ್ನು ಭರತ ಮುನಿ ಸಂಸ್ಮರಣಾ ದಿವಸ್ ಎಂದು ಘೋಷಿಸುವ ಪ್ರಯತ್ನಗಳು ನಡೆಯುತ್ತಿದೆ ಇದು ಒಳ್ಳೆಯ ಬೆಳವಣಿಗೆ ಅಲ್ಲ” ಎಂದರು.
‘ಅಭಿರುಚಿ ಜೋಡುಮಾರ್ಗ’ದ ಮಹಾಬಲೇಶ್ವರ ಹೆಬ್ಬಾರ್ ಅವರು, ಯಕ್ಷರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳರನ್ನು ಗೌರವಿಸಿದರು. ‘ಬಹುವಚನಂ’ ಇದರ ಡಾ.ಶ್ರೀಶ ಕುಮಾರ್ ಸ್ವಾಗತಿಸಿ ಪ್ರಸ್ತಾವನೆಗೈದು, ‘ನಿರತ ನಿರಂತ’ ಇದರ ಹಿರಿಯ ರಂಗಕರ್ಮಿ ಐ. ಕೆ. ಬೊಳುವಾರು ರಂಗ ಸಂದೇಶ ವಾಚಿಸಿ, ಕಾರ್ಯಕ್ರಮ ನಿರ್ವಹಿಸಿದರು. ರಂಗ ನಿರ್ದೇಶಕ ಮೌನೇಶ ವಿಶ್ವಕರ್ಮ ಸಹಕರಿಸಿದರು.
Subscribe to Updates
Get the latest creative news from FooBar about art, design and business.