Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಅಲ್ಲಮನ ಬಯಲಾಟ’ ನಾಟಕ ಪ್ರದರ್ಶನ | ಮಾರ್ಚ್ 22
    Drama

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಅಲ್ಲಮನ ಬಯಲಾಟ’ ನಾಟಕ ಪ್ರದರ್ಶನ | ಮಾರ್ಚ್ 22

    March 19, 2025No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ‘ಆಜೀವಿಕ’ ಪ್ರಸ್ತುತ ಪಡಿಸುವ ಹೊಸ ನಾಟಕ ‘ಅಲ್ಲಮನ ಬಯಲಾಟ’ ಮೊದಲ ಪ್ರದರ್ಶನವನ್ನು ದಿನಾಂಕ 22 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

    ಈ ನಾಟಕದ ರಚನೆ : ಲಕ್ಷ್ಮೀಪತಿ ಕೋಲಾರ, ನಿರ್ದೇಶನ : ಡಾ. ಉದಯ್ ಸೋಸಲೆ, ಸಹ ನಿರ್ದೇಶನ : ವಾಸವಿ, ಸಂಗೀತ: ಹನುಮಂತ್ ಮಂಡ್ಯ, ಬೆಳಕು : ಮಹದೇವಸ್ವಾಮಿ ಮತ್ತು ಪ್ರಸಾಧನ : ಮೋಹನ್ ಕುಮಾರ್ ಇವರದ್ದು. ಹೆಚ್ಚಿನ ಮಾಹಿತಿಗಾಗಿ 9901290575 ಸಂಖ್ಯೆಯನ್ನು ಸಂಪರ್ಕಿಸಿರಿ.

    ಅಲ್ಲಮನ ತಾತ್ವಿಕ ಯಾನದಲ್ಲಿ ಜತೆಗೂಡಿ
    ಈ ನೆಲದ ಸಂಸ್ಕೃತಿ ಇತಿಹಾಸದ ಅಜ್ಞಾತ ಮಗ್ಗಲುಗಳ ಸ್ಪಷ್ಟವಾದ ಅರಿವು ದಕ್ಕಿಸಿಕೊಳ್ಳುತ್ತ, ಆ ಹುಡುಕಾಟದ ಜಾಡಿನಲ್ಲೇ ನಡೆಯುತ್ತ, ಸಮಗ್ರ ಬದಲಾವಣೆಗೆ ಅಗತ್ಯವಾದ ಮೊದಲ ಹಂತದ ಸಾಂಸ್ಕೃತಿಕ ಕ್ರಾಂತಿಯ ವಿನ್ಯಾಸವನ್ನು ಹಾಗೂ ಸಂಶೋಧನಾತ್ಮಕ ಮಾದರಿಯೊಂದನ್ನು ರೂಪಿಸುವಂತಹ ಮಹತ್ವದ ಹೊಣೆಗಾರಿಕೆಯನ್ನು ಸ್ವಯಂ ಹೆಗಲಿಗೇರಿಸಿಕೊಂಡಿರುವ ‘ಆಜೀವಿಕ’ ಬದ್ಧತೆ ಪ್ರಾಮಾಣಿಕ ಮನಸ್ಸುಗಳ ಕ್ರಿಯಾಶೀಲ ಸಮೂಹವಾಗಿದೆ. ಆ ದಿಕ್ಕಿನ ಕೆಲವಾದರೂ ಹೆಜ್ಜೆಗುರುತುಗಳನ್ನು ತಾವೀಗಾಗಲೇ ಗಮನಿಸಿರಬಹುದು. ‘ಭಾರತೀಯ ಸಂಸ್ಕೃತಿ ಇತಿಹಾಸದ ಮಹಾಮರೆವು’ ಕುರಿತ ಪಿಪಿಟಿ ಶಿಬಿರ ‘ಪೋಸ್ಟ್ ಬಾಕ್ಸ್ ನಂ.9’, ‘ಕನ್ನಗತ್ತಿ’ ಹಾಗೂ ಇತ್ತೀಚಿನ ‘ಮರೆತ ದಾರಿ’ ನಾಟಕವು ನಮ್ಮ ಉದ್ದೇಶಿತ ನಡೆಯ ನಿಖರತೆಯನ್ನು ಯಾರಿಗೇ ಆದರೂ ಮನಗಾಣಿಸಿಕೊಡಬಲ್ಲಂತಹ ಪ್ರಯತ್ನಗಳಾಗಿವೆ.

    ‘ಆಜೀವಿಕ’ದ ಆಳದ ಆಲೋಚನೆಗಳಲ್ಲಿ ಸದಾ ಕದಲುವ ಅಲ್ಲಮ ನಮ್ಮರಿವಿನ ತಲ, ಯಾಕೆಂದರೆ ವಚನ ಚಳುವಳಿಯ ಆತ್ಯಂತಿಕ ತಾತ್ವಿಕತೆಯನ್ನು ಕಟ್ಟಿಕೊಟ್ಟವನು ಅಲ್ಲಮ. ನಿರ್ದಿಷ್ಟ ತಾತ್ವಿಕ ಗೊತ್ತಿಗೆ ತನ್ನನ್ನೆಂದೂ ಕಟ್ಟಿಹಾಕಿಕೊಳ್ಳದೆ ಅನೇಕಾಂತ ಆಯಾಮಗಳ ಮೂಲಕ ಬದುಕಿನ ದರ್ಶನವನ್ನು ಮಂಡಿಸಿದ ಪ್ರತ್ಯೇಕ ಬುದ್ಧ ಈ ಅಲ್ಲಮ. ನಮ್ಮ ತಾತ್ವಿಕ ಅರಿವನ್ನು ವಿಸ್ತರಿಸಿಕೊಳ್ಳುವ ಹಾಗೂ ಲೋಕ ಗ್ರಹಿಕೆಗಳ ಸ್ಪಷ್ಟತೆಗಾಗಿ ಪದೇ ಪದೇ ಆತ್ಮಾವಲೋಕಿಸಿಕೊಳ್ಳುವಂತೆ ಮಾಡಬಲ್ಲ ಎಚ್ಚರವೇ ಈ ಅಲ್ಲಮ, ಹಾಗಾಗಿಯೇ ಸಾರ್ವಕಾಲಿಕ ಪ್ರಸ್ತುತ ಅಲ್ಲಮತತ್ವ,

    ಅಲ್ಲಮನ ಗಂಭೀರ ತಾತ್ವಿಕ ವ್ಯಕ್ತಿತ್ವಕ್ಕೆ ಅನುಗುಣವಾಗಿಯೇ ‘ಅಲ್ಲಮನ ಬಯಲಾಟ’ ನಾಟಕವೂ ಅಷ್ಟೇ ಗಂಭೀರ ತಾತ್ವಿಕ ಜಿಜ್ಞಾಸೆಗಳ ಪಲ್ಲಟ – ಮೇಲಾಟಗಳ ಮೂಲಕವೇ ಮೌನ ಮತ್ತು ಶೂನ್ಯ ತತ್ವವನ್ನು ನಿರೂಪಿಸುತ್ತದೆ. ‘ತನ್ನರಿವೇ ತನಗೆ ಗುರು’ವೆಂದು ಮನಗಾಣಿಸಿಕೊಡಬಲ್ಲ ‘ಅಲ್ಲಮನ ಬಯಲಾಟ’ ವಿಶೇಷ ಮನಃಸ್ಥಿತಿಯನ್ನು ಪರಿಣಾಮಕಾರಿಯಾಗಿ ಕಡೆದಿಡಬಲ್ಲ ಶಕ್ತ ತಾತ್ವಿಕ ಉಳಿಯಾಗಿದೆ. ಇದೀಗ ಮತ್ತೊಮ್ಮೆ ಪ್ರದರ್ಶನಕ್ಕೆ ಸಿದ್ಧವಾಗಿದೆ. ಕೃತಿಯ ವಸ್ತುವಿಗೆ, ಅದರ ತಾತ್ವಿಕ ಘನತೆಗೆ ಎಲ್ಲೂ ಚ್ಯುತಿಯಾಗದಂತೆ, ತಮ್ಮ ಸೃಜನಾತ್ಮಕ ಸಾಮರ್ಥ್ಯವನ್ನೇ ಸಾಣೆಗೊಡ್ಡಿದಂತೆ ನಿರ್ದೇಶಕರು, ನಟ-ನಟಿ ಸಮೂಹ ಹಾಗೂ ತಂತ್ರಜ್ಞರು ಶಿಸ್ತಿನ ತಾಲೀಮಿನೊಂದಿಗೆ ಶ್ರಮ ವಹಿಸಿದ್ದಾರೆ.

    ನಾಟಕಕಾರರು : ಲಕ್ಷ್ಮೀಪತಿ ಕೋಲಾರ :
    1959ರ ಜನವರಿ 2ರಂದು ಶಾಪೂರು, ಕೋಲಾರ ತಾಲ್ಲೂಕು / ಜಿಲ್ಲೆಯಲ್ಲಿ ಜನಿಸಿದ ಲಕ್ಷ್ಮೀಪತಿ ಕೋಲಾರ ಇವರು, ಸಂಸ್ಕೃತಿ, ಚರಿತ್ರೆ, ಮಾನವ ಶಾಸ್ತ್ರ, ಪರಿಸರ, ರಾಜಕಾರಣ, ಧರ್ಮ ಹೀಗೆ ಹತ್ತು ಹಲವು ಜ್ಞಾನಶಾಖೆಗಳೊಂದಿಗೆ ಅನುಸಂಧಾನಿಸುವ ಬೌದ್ಧಿಕ ಸಾಮರ್ಥ್ಯವನ್ನು ಅಕಾಡೆಮಿಕ್ ಶಿಸ್ತುಗಳ ನೆರವಿಲ್ಲದೆ ಸ್ವಯಂ ಅಧ್ಯಯನದಿಂದ ಸಂಪಾದಿಸಿಕೊಂಡಿರುವ ಮೇರು ವ್ಯಕ್ತಿತ್ವ.

    ‘ನವಿಲು ಕಿನ್ನರಿ’, ‘ನೀಲಿ ತತ್ತಿ’, ‘ನೀರ ಚಿಗುರು’ ಕವನ ಸಂಕಲನಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿತ ‘ಮಧುರಾಂತಕಮ್ ರಾಜಾರಾಮ್ ಕತೆಗಳು’ ಎಂಬ ತೆಲುಗು ಕತೆಗಳ ಅನುವಾದ ಸಂಪುಟ: ‘ಸಿಂದ್ ಆಟ’, ‘ಪಂಪನಿಗೆ ಬಿದ್ದ ಕನಸು’, ‘ಅಲ್ಲಮನ ಬಯಲಾಟ’, ‘ಪೋಸ್ಟ್ ಬಾಕ್ಸ್ ನಂ. 9’, ‘ಕನ್ನಗತ್ತಿ’, ‘ಮರೆತ ದಾರಿ’ ಎಂಬ ನಾಟಕಗಳನ್ನು ರಚಿಸಿದ್ದಾರೆ. ‘ಕಸಿ ಮಡಗಿದ ಕಣ್ಣು’ ಎಂಬ ಅಂಕಣ ಬರಹಗಳ ಸಂಗ್ರಹವು ಅತ್ಯಂತ ಅರ್ಥಪೂರ್ಣವಾಗಿ ಮೂಡಿಬಂದಿದೆ. ಇವರ ‘ಕಾಲು ದಾರಿ’ ವಿಮರ್ಶಾ ಸಂಕಲನ ಲಕ್ಷ್ಮೀಪತಿ ಕೋಲಾರ ಅವರ ವಿಸ್ತಾರ ಓದು ಮತ್ತು ಆರೋಗ್ಯಪೂರ್ಣವಾದ ಆಲೋಚನಾ ಕ್ರಮಗಳಿಂದ ರೂಪುಗೊಂಡಿರುವುದನ್ನು ಕಾಣಬಹುದು.

    ಭಾರತೀಯ ಸಂಸ್ಕೃತಿಯನ್ನು ಈವರೆಗೆ ನಿರೂಪಿಸಿರುವ ಏಕರೂಪಿ ಕ್ರಮಗಳ ಬಗ್ಗೆ ತೀವ್ರ ಭಿನ್ನಾಭಿಪ್ರಾಯ ತಳೆದಿರುವ ಲಕ್ಷ್ಮೀಪತಿ ಕೋಲಾರ ಇವರು ಶಿವ ಸಂಸ್ಕೃತಿಯ ವಿಸ್ತ್ರತ ಅನ್ವೇಷಣೆಗೆ ತೊಡಗಿಕೊಂಡು ಆ ಮೂಲಕ ಭಾರತೀಯ ಸಂಸ್ಕೃತಿ ಚರಿತ್ರೆಯನ್ನು ಬಹುಶಿಸ್ತೀಯ ನೆಲೆಗಳಿಂದ ಗ್ರಹಿಸಿ ನಿರ್ವಚಿಸುವ ಹೊಣೆಗಾರಿಕೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ, ‘ಭಾರತೀಯ ಸಂಸ್ಕೃತಿ ಇತಿಹಾಸದ ಮಹಾಮರೆವು’ ಎಂಬ ವಿಚಾರ ಗೋಷ್ಠಿಗಳನ್ನು ರಾಜ್ಯದಾದ್ಯಂತ ಮಂಡಿಸುತ್ತಿದ್ದಾರೆ. ಇದಲ್ಲದೆ ‘ಮಾಸ್ಪೀಕರ ಸಂಸ್ಕೃತಿ’, ‘ಆದಿಮ ಶಿವರಹಸ್ಯ’, ‘ದಕ್ಷಿಣ ದಂಡಾಜೀವಿಕ’ ಮತ್ತು ‘ಹರಪ್ಪ ಡಿ.ಎನ್.ಎ. ನುಡಿದ ಸತ್ಯ’ ಸಂಶೋದನಾ ಕೃತಿಗಳನ್ನು ರಚಿಸಿದ್ದಾರೆ. ಕವಿ, ಬರಹಗಾರ, ಚಳುವಳಿಗಾರ, ಚಲನಚಿತ್ರ ಸಾಹಿತಿ, ಗೀತ ರಚನಾಕಾರ, ವಿಮರ್ಶಕ, ಜಾನಪದ ಸಂಶೋಧಕ, ಹವ್ಯಾಸಿ ಪತ್ರಕರ್ತ ಹೀಗೆ ಹಲವು ವಲಯಗಳ ಅಗಾಧ ಅನುಭವದ ಇವರು ಹಲವು ಪತ್ರಿಕಾ ಹಾಗೂ ದೃಶ್ಯ ಮಾಧ್ಯಮ ವಲಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 15ಕ್ಕೂ ಹೆಚ್ಚು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕವಿಗೋಷ್ಟಿಗಳಲ್ಲಿ ಭಾಗವಹಿಸಿರುವ ಇವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗು ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವಾನ್ವಿತ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಮೂಲತಃ ಸೃಜನಾತ್ಮಕ ವ್ಯಕ್ತಿತ್ವದ ಇವರು ಚಿಂತನಾವಲಯದ ಗಟ್ಟಿಗರು. ‘ಆಜೀವಿಕ’ ಎಂಬ ಹೆಸರು ಇವರ ಸಲಹೆಯಿಂದಲೇ ಬಂದದ್ದು. ಆಜೀವಿಕದ ಪ್ರಾರಂಭಿಕ ಘಟ್ಟದಿಂದಲೂ ಎಲ್ಲ ಕಾರ್ಯ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತು ಹಲವು ಹೊಸ ನಾಟಕಗಳನ್ನು ರಚಿಸಿಕೊಟ್ಟದ್ದಲ್ಲದೆ ತಮ್ಮ ಅನುಭವ, ಅರಿವಿನ ಬೆಳಕಿನಲ್ಲಿ ಸಂಸ್ಥೆಯ ಸೈದ್ದಾಂತಿಕ ನಡೆಯನ್ನು ಎಚ್ಚರದಿಂದ ನಡೆಸುತ್ತಾ ಬಂದಿದ್ದಾರೆ.

    ನಿರ್ದೇಶಕರು : ಡಾ. ಉದಯ್ ಸೋಸಲೆ
    ಮೂಲತಃ ಮೈಸೂರಿನ ಸೋಸಲೆ ಗ್ರಾಮದವರಾದ ಇವರು ನೀನಾಸಂನ ರಂಗ ಶಿಕ್ಷಣ ಮುಗಿಸಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ‘ಆಚರಣೆಗಳಲ್ಲಿನ ನಾಟಕೀಯತೆ’ ಕುರಿತ ವಿಷಯವಾಗಿ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ಇದೀಗ ದೆಹಲಿಯ ಐ.ಸಿ.ಎಸ್.ಎಸ್.ಆರ್ ಸಂಸ್ಥೆಯಲ್ಲಿ ಪೋಸ್ಟ್ ಡಾಕ್ಟೊರಲ್ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕೇರಳಾದ ವಲ್ಲಭಟ್ಟಕಲರಿ ಶಾಲೆಯಲ್ಲಿ 3 ವರ್ಷ ಕಲರಿ ಪಯತ್ತು ಕಲಿತು ನಿರಂತರ ಪ್ರಯೋಗಗಳಲ್ಲಿ ತೊಡಗಿದ್ದಾರೆ.

    ರಂಗಭೂಮಿ, ಕಲೆ, ಸಾಹಿತ್ಯ, ಸಾವಯವ ಕೃಷಿ ಹೀಗೆ ಹಲವು ಕ್ಷೇತ್ರದಲ್ಲಿ ಸಮಾನ ಅಭಿರುಚಿ, ಆಸಕ್ತಿ ಹೊಂದಿರುವ ಉದಯ್ ಸೋಸಲೆಯವರು ನಿರಂತರ ಹುಡುಕಾಟದಲ್ಲಿ ತೊಡಗಿರುವ ಉತ್ಸಾಹಿ ವ್ಯಕ್ತಿತ್ವದವರು. ಕಳೆದ 20 ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಹೀಗೆ ಭಾರತದ ವಿವಿಧೆಡೆ ನಟನಟಿಯರನ್ನು ಉತ್ತೇಜಿಸಿ, ಆಂಗ್ಲ, ಹಿಂದಿ, ತೆಲುಗು, ಕನ್ನಡ, ನಿಮಾಡ್ ಹೀಗೆ ಅವರದ್ದೇ ಸ್ಥಳೀಯ ಭಾಷೆಗಳಲ್ಲಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ಹಲವು ನಾಟಕಗಳಿಗೆ ಪ್ರಾಂಥೀಯ, ರಾಜ್ಯ ಹಾಗು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಇವತ್ತಿನ ಸಾಂಸ್ಕೃತಿಕ ರಾಜಕಾರಣದಲ್ಲಿ ಕಳೆದುಹೋಗಿರುವ ನಾಟಕಗಳ ಸಾಮಾಜಿಕ ಜವಾಬ್ದಾರಿಯನ್ನು ತಮ್ಮ ನಾಟಕಗಳಲ್ಲಿ ಎತ್ತಿ ಹಿಡಿಯುವ ಪ್ರಯತ್ನ ಇವರದ್ದು. ನಾಟಕಗಳಲ್ಲಿನ ಲೇಖಕರ ಆಂತರಿಕ ತುಡಿತಗಳನ್ನು ಅತಿ ಪ್ರಭಾವಶಾಲಿಯಾಗಿ ರಂಗದ ಮೇಲೆ ತರಬಯಸುವ ಇವರ ಸೂಕ್ಷ್ಮ ಕಾರ್ಯವೈಖರಿ ಇವರನ್ನ ಯಶಸ್ವಿ ನಿರ್ದೇಶಕರ ಸಾಲಿನಲ್ಲಿ ನಿಲ್ಲಿಸಿದೆ.

    ಇವರ ನಿರ್ದೇಶನದ ಪ್ರಮುಖ ನಾಟಕಗಳೆಂದರೆ ‘ಅಲ್ಲಮನ ಬಯಲಾಟ’, ‘ಒಂದು ಬೊಗಸೆ ನೀರು’, ‘ಮೀಡಿಯ’, ‘ಸೆಜುವಾನ್ ನಗರದ ಸಾದ್ವಿ’, ‘ಮೂರು ಕಾಸಿನ ಸಂಗೀತ ನಾಟಕ’, ‘ಜೊತೆಗಿರುವನು ಚಂದಿರ’, ‘ಹೆಣದ ಮನೆ’, ‘ಇರುವುದೆಲ್ಲಾ ಬಿಟ್ಟು’, ‘ಮಿಂಚುಳ’, ‘ಪೋಸ್ಟ್ ಬಾಕ್ಸ್ ನಂ.9’, ‘ಕನ್ನಗತ್ತಿ’, ‘ಬ್ಲಡ್ ವೆಡ್ಡಿಂಗ್’, ‘ಮರೆತ ದಾರಿ’ ಇವೆ ಮುಂತಾದ ಸುಮಾರು 40ಕ್ಕೂ ಹೆಚ್ಚು ವೈವಿಧ್ಯಮಯ ರಂಗನಾಟಕಗಳನ್ನು ಮತ್ತು ಹಲವಾರು ಬೀದಿನಾಟಕಗಳನ್ನು ರಂಗಭೂಮಿಗೆ ಇವರದೇ ಆದ ಶೈಲಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಇದೀಗ ‘ಅಲ್ಲಮನ ಬಯಲಾಟ’ ನಾಟಕದ ಮರುನಿರೂಪಣೆ ಮೂಲಕ ತಮ್ಮ ದಶಕಗಳ ರಂಗನಡೆಯ ಮರುನಿರೂಪಣೆಯಲ್ಲಿ ತೊಡಗಿದ್ದಾರೆ. ಇದರೊಂದಿಗೆ ಯುವಕರಲ್ಲಿ ನಟನೆಯ ಆಸಕ್ತಿಯನ್ನು ತೀಕ್ಷ್ಮವಾಗಿ ಗಮನಿಸಿ ಸೂಕ್ತ ತರಬೇತಿ ನೀಡುವ ಬಗ್ಗೆ ಸುಮಾರು 15 ವರ್ಷಗಳಿಂದ ಶೈಕ್ಷಣಿಕ ಹಾಗೂ ಖಾಸಗಿ ಸಂಸ್ಥೆಗಳ ಒಡನಾಟದಲ್ಲಿ ಸತತವಾಗಿ ಶ್ರಮಿಸುತ್ತಿದ್ದಾರೆ. ‘ಆಜೀವಿಕ’ ಸಂಸ್ಥೆಯ ಸಂಸ್ಥಾಪಕರಾದ ಇವರು ತಮ್ಮೆಲ್ಲ ಕಲಿಕೆ, ಜ್ಞಾನ, ಸಂಪನ್ಮೂಲ ಹಾಗೂ ಅನುಭವಗಳ ಗಣಿಯನ್ನೇ ಧಾರೆ ಎರೆದು ಸಮಸ್ಯೆಯನ್ನು ಮುನ್ನಡೆಸುತ್ತಿದ್ದಾರೆ. ಒಬ್ಬ ಪ್ರಜ್ಞಾವಂತ ಮುಂದಾಳಾಗಿ ಉದಯ್ ಪ್ರತಿಯೊಂದು ಕಾರ್ಯಕ್ರಮದ ಒಳಗೆ ಕಲಿಕಾ ಪ್ರಕ್ರಿಯೆಗೆ ದಾರಿ ಮಾಡಿಕೊಡುತ್ತಾರೆ.

    ರಂಗದ ಮೇಲೆ :
    ಅಕ್ಷತ್ – ಭರ್ಯೊ, ಮದ್ದಲೆ, ವದರು ಪಿಶಾಚಿ, ಕೇಸೀಮಯ್ಯ, ಬಸವಣ್ಣ
    ದರ್ಶನ್ – ಅಲ್ಲಮ
    ದಿವ್ಯ – ಪಿಂಪಳ, ಗೌರಿ
    ಗುರು – ನಾಗಜ್ಜ, ಗೊಗ್ಗಯ್ಯ
    ಮನೋಜ್ ಕುಮಾರ್ – ಲಗುಮಣ್ಯ, ಮದ್ದಲೆ, ಕನ್ನದ ಮಾರಯ್ಯ, ಕಾಡಿನಲ್ಲಮ
    ಪೃಥ್ವಿ – ರುಪ್ಪೊ, ಪುರೋಹಿತ, ವಾಮಶಕ್ತಿ, ಕಾವಲುಗಾರ, ಜಂಗಮ 1
    ಪುನೀತ್ – ಭುಜ್ಯೋ, ಹೆಣ ಹೂಳುವವನು, ಕಾವಲುಗಾರ, ಜಂಗಮ 2
    ರಾಕೇಶ್ – ಸುಂಕದವನು, ಹೆಣ ಹೂಳುವವನು, ಶರಣರು
    ಶೃತಿ – ನಾಗಸಾನಿ, ಸೂಲಜ್ಜಿ, ಹೆಂಗಸು, ಶರಣರು
    ಸೌಮ್ಯ – ಸೀತಾಸಾನಿ, ಗೌರಿಗೆಜ್ಜೆ, ಸೂಲಜ್ಜಿ, ಶರಣರು
    ಸ್ವಸ್ತಿಕ್ – ಬೇಟೆಗಾರ, ಅಘೋರಾಚಾರ್ಯ, ಶರಣರು, ಬಿಜ್ಜಳ
    ತೇಜಸ್ – ಗುರ್ಯೊ, ಮದ್ದಲೆ, ಗಾಡಿಯವನು, ಜಂಗಮ 3
    ವಾಸವಿ – ಸಿದ್ಧಾಂಗನೆ, ಗೌರಿಗೆಜ್ಜೆ, ಸೂಲಜ್ಜಿ, ಮುಕ್ತಾಯಕ್ಕ, ಶರಣರು

    baikady drama roovari
    Share. Facebook Twitter Pinterest LinkedIn Tumblr WhatsApp Email
    Previous Articleಕನ್ನಡ ಭವನ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ಉದ್ಘಾಟನೆ | ಮಾರ್ಚ್ 23
    Next Article ರಂಗ ಪ್ರಯೋಗ ವಿಮರ್ಶೆ | ‘ಈ ಪರಗಣ’ವೆಂಬ ಹಾಸ್ಯ ರಸಾಯನ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಕಲಾಕುಲ್ ಕೊಂಕಣಿ ನಾಟಕ ರೆಪರ್ಟರಿಗೆ ಅರ್ಜಿ ಆಹ್ವಾನ

    May 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.