ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಇವುಗಳ ಆಶ್ರಯದಲ್ಲಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಇವರ ಕವನ ಸಂಕಲನ ‘ತಂಬೂರಿ’ ಮತ್ತು ನಾಟಕ ‘ಕಾಯ ತಂಬೂರಿ’ ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 21 ಮಾರ್ಚ್ 2025ರಂದು ಸಂಜೆ ಗಂಟೆ 5-45ಕ್ಕೆ ಉಡುಪಿಯ ಕುಂಜಿಬೆಟ್ಟು, ಸುನಾಗ್ ಆಸ್ಪತ್ರೆ ಹತ್ತಿರ ಏಡನ್ ಇನ್ ಹೋಂ ಸ್ಟೇ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಪ್ರಸಿದ್ಧ ಕವಿಗಳಾದ ಎಚ್. ದುಂಡಿರಾಜ್ ಇವರು ಕೃತಿ ಅನಾವರಣ ಮಾಡಲಿದ್ದು, ಉಡುಪಿಯ ಪ್ರಸಿದ್ಧ ವಿಮರ್ಶಕರಾದ ಪ್ರೊ ಮುರಳೀಧರ ಉಪಾಧ್ಯ ಹಿರಿಯಡ್ಕ ಇವರು ಸಭಾಧ್ಯಕ್ಷತೆ ವಹಿಸಲಿರುವರು. ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ಉಡುಪಿ ವಿಶ್ವನಾಥ್ ಶೆಣೈ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಶಂಕರ್ ಮತ್ತು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ರವಿರಾಜ್ ಎಚ್.ಪಿ. ಇವರುಗಳು ಭಾಗವಹಿಸಲಿರುವರು.