ಮಂಗಳೂರು : ರಂಗಭೂಮಿ ಕಲಾವಿದ, ರಂಗಕರ್ಮಿಗಳಿಗೆ ನೀಡುವ, ಅರೆಹೊಳೆ ಪ್ರತಿಷ್ಠಾನದ ‘ಅರೆಹೊಳೆ ರಂಗ ಭೂಮಿ ಪುರಸ್ಕಾರ’ದ 2024ನೇ ಸಾಲಿನ ಪ್ರಶಸ್ತಿಗೆ ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ, ನಿರ್ದೇಶಕ ಆಸಿಫ್ ಕ್ಷತ್ರಿಯ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಆಸಿಫ್ ಕ್ಷತ್ರಿಯ ಈಗಾಗಲೇ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದು, ನಾನಾ ದಿಗ್ಗಜ ಸಿನಿಮಾ ಕಲಾವಿದರೊಂದಿಗೆ ಅನೇಕ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲೂ ನಾಟಕ ನಿರ್ದೇಶಿಸಿರುವ ಇವರು, ಕನ್ನಡದ ಅನೇಕ ರಂಗ ಕೃತಿಗಳಿಗೆ ತಮ್ಮದೇ ಸ್ಪರ್ಶ ಮೂಲಕ, ವಿಭಿನ್ನ ಆಯಾಮದ ನಾಟಕಗಳನ್ನು ಕಟ್ಟಿಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ‘ರಂಗರಥ ಟ್ರಸ್ಟ್’ ಎಂಬ ಭಾರತೀಯ ಕಲೆಗಳ ಪ್ರದರ್ಶನ ತಂಡದ ಮೂಲಕ, ರಂಗ ಶಿಬಿರ, ಪ್ರದರ್ಶನಗಳನ್ನು ನೀಡುತ್ತಾ, ಅನೇಕ ಯುವ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸುತ್ತಿದ್ದಾರೆ. ಇವರ ರಂಗಭೂಮಿಯ ಒಟ್ಟು ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರಶಸ್ತಿಯು ರೂಪಾಯಿ 10 ಸಾವಿರ ನಗದು ಹಾಗೂ ಫಲಕಗಳನ್ನೊಳಗೊಂಡಿದೆ.
ದಿನಾಂಕ 27 ಮಾರ್ಚ್ 2025 ರಂದು ಮಂಗಳೂರಿನ ಬೋಂದೆಲ್‌ನಲ್ಲಿ ಅರೆಹೊಳೆ ಪ್ರತಿಷ್ಠಾನ ಆಯೋಜಿಸುವ 10ನೇ ವರ್ಷದ ರಾಜ್ಯ ಮಟ್ಟದ ನಾಟಕೋತ್ಸವದ ಆರಂಭದಂದು, ನೂತನವಾಗಿ ಲೋಕಾರ್ಪಣೆಗೊಳ್ಳಲಿರುವ ಕಲಾಗ್ರಾಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.
ನಾಟಕೋತ್ಸವಕ್ಕೆ ಕಲಾಭಿ, ಅಸ್ತಿತ್ವ ಹಾಗೂ ಆಯನ ನಾಟಕದ ಮನೆಯ ಸಹಯೋಗವಿದ್ದು, ಮಾರ್ಚ್ 27ರಿಂದ 31 ರ ತನಕ ಈ ನಾಟಕೋತ್ಸವ ನಡೆಯಲಿದೆ.
Subscribe to Updates
Get the latest creative news from FooBar about art, design and business.