ಮಂಜೇಶ್ವರ : ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಗಿಳಿವಿಂಡು ಆಶ್ರಯದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮಂಜೇಶ್ವರದ ಗಿಳಿವಿಂಡುವಿನಲ್ಲಿ ದಿನಾಂಕ 23 ಮಾರ್ಚ್ 2025ರಂದು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ 142ನೇ ಜನ್ಮದಿನಾಚರಣೆ ಸಮಾರಂಭವು ನಡೆಯಿತು.
ಈ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ ವೈದ್ಯ ಡಾ. ರಮಾನಂದ ಬನಾರಿ ಮಾತನಾಡುತ್ತಾ “ಗೋವಿಂದ ಪೈಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಮಹಾಚೇತನರಾಗಿದ್ದು, ಅವರ ನಿವಾಸ ಗಿಳಿವಿಂಡು ಆ ಮಟ್ಟದಲ್ಲಿ ಅಭಿವೃದ್ಧಿಗೊಳ್ಳಬೇಕಾದುದು ನಮ್ಮೆಲ್ಲರ ಹೊಣೆಯಾಗಿದೆ. ಬಹುಮುಖಿ ವ್ಯಕ್ತಿತ್ವದ ಪೈಗಳು ಎಂದಿಗೂ ಕನ್ನಡ ಸಹಿತ ದೇಶದ ಎಲ್ಲಾ ಸಾಹಿತ್ಯ ವಲಯಗಳಲ್ಲೂ ಅಸಾಮಾನ್ಯ ಕೊಡುಗೆ ನೀಡಿದ ಅಪೂರ್ವ ಮಹಾಪುರುಷರಾಗಿದ್ದರು. ರಾಷ್ಟ್ರಕವಿಯ ಕನಸುಗಳನ್ನು ಸಾಕಾರಗೊಳಿಸಲು, ಸಾಹಿತ್ತಿಕ ಮೌಲ್ಯಗಳನ್ನು ಹೊಸ ತಲೆಮಾರಿಗೆ ಹಸ್ತಾಂತರಿಸಲು ಪರಂಪರೆಗೆ ಧಕ್ಕೆ ಬಾರದಂತೆ ಆಧುನಿಕ ಕೌಶಲ್ಯಗಳಿಂದೊಡಗೂಡಿ ಸ್ಮಾರಕ ನಿವೇಶನವನ್ನು ಇನ್ನಷ್ಟು ಪ್ರವರ್ಧಮಾನಕ್ಕೆ ತರಬೇಕು” ಎಂದು ಹೇಳಿದರು.
ಸಮಾರಂಭದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕೊಡಮಾಡುವ ‘ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಪ್ರಶಸ್ತಿ’ಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಅನುವಾದಕ, ಸಾಹಿತಿ ಕೆ.ವಿ. ಕುಮಾರನ್ ಮಾಸ್ತರ್ ಇವರಿಗೆ ಪ್ರದಾನಗೈದು, ಸ್ಮಾರಕ ಸಮಿತಿ ಹೊಸತಾಗಿ ಪ್ರಕಟಿಸಿದ ಗೋವಿಂದ ಪೈಗಳ ಸಮಗ್ರ ಬದುಕು – ಸಾಧನೆಗಳ ಕುರಿತಾದ ‘ಸುರಭಿ’ ಕೃತಿಯನ್ನು ಬಿಡುಗಡೆಗೊಳಿಸಿದ ಉದುಮ ಶಾಸಕ ಸಿ.ಎಚ್. ಕುಂಞಂಬು ಮಾತನಾಡಿ, “ಗೋವಿಂದ ಪೈಗಳು ನಿಧನ ಹೊಂದಿದ 40 ವರ್ಷಗಳ ಬಳಿಕ ಅವರ ಕುಟುಂಬ ಸದಸ್ಯರು ಉದಾರವಾಗಿ ನೀಡಿರುವ ವಿಶಾಲ ನಿವೇಶನ ಹಂತಾನುಹಂತವಾಗಿ ಇದೀಗ ಬೆಳೆದು ಬರುತ್ತಿದೆ. ಆದರೆ ಗಡಿ ಭಾಗದ ಈ ಸಾಹಿತ್ಯ ಕೇಂದ್ರದ ಬಗ್ಗೆ ಸಾಹಿತ್ಯ ಪ್ರೇಮಿಗಳಿಂದ ಬೆಂಬಲ ಲಭ್ಯವಾಗದಿರುವುದು ದುಃಖಕರ. ಇಲ್ಲಿಯ ನಿರ್ಮಿತಿಗಳು ಕೇವಲ ಕಟ್ಟಡವಾಗಿರದೆ ನಿರಂತರ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಬೇಕು. ಜನರು, ಸಮಾಜವನ್ನು ಸಕಾರಾತ್ಮಕತೆಯತ್ತ ಪ್ರಚೋದಿಸುವ ಪೈಗಳಂತಹ ಸಾಹಿತ್ಯ ಚೇತನಗಳು ಸಜ್ಜನ ಸಮಾಜದ ಸದಾ ಸ್ಮರಣೀಯರು” ಎಂದವರು ತಿಳಿಸಿದರು.
ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್. ಜಯಾನಂದ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡವ, ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಪ್ರಶಸ್ತಿ ಪುರಸ್ಕೃತ ಕೆ.ವಿ. ಕುಮಾರನ್ ಮಾಸ್ತರ್ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಗಿಳಿವಿಂಡು ಪ್ರಧಾನ ಕಾರ್ಯದರ್ಶಿ ಉಮೇಶ್ ಎಂ. ಸಾಲ್ಯಾನ್ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೋಶಾಧಿಕಾರಿ ಬಾಲಕೃಷ್ಣ ಮಾಸ್ತರ್ ವಂದಿಸಿದರು. ವನಿತಾ ಆರ್. ಶೆಟ್ಟಿ ಹಾಗೂ ಆಶಾ ದಿಲೀಪ್ ರೈ ಸುಳ್ಳಮೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ವರ್ಷಾ ಮತ್ತು ಬಳಗ ಹಾಗೂ ನಿಶ್ಚಿತ್ ಮತ್ತು ಬಳಗದವರಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಕೃತಿಗಳ ಗಾಯನ ಜರಗಿತು. ಅಲ್ಲದೆ ಸಭಾ ಕಾರ್ಯಕ್ರಮದ ಬಳಿಕ ವಿವಿಧ ತಂಡಗಳಿಂದ ನೃತ್ಯ ಕಾರ್ಯಕ್ರಮ, ಕವಿಗೋಷ್ಠಿ ನಡೆಯಿತು. ಸುರಭಿ ಕೃತಿಯ ಬಗ್ಗೆ ಸಂಪಾದಕಿ ಆಶಾ ದಿಲೀಪ್ ರೈ ಸುಳ್ಯಮೆ ಮಾತನಾಡಿದರು. ಕೃತಿಗೆ ಬರಹಗಳನ್ನು ನೀಡಿದ ಜಯಂತಿ ಕೆ., ಡಾ. ಯು. ಮಹೇಶ್ವರಿ, ಡಾ. ಸುಜೇಶ್ ಎಸ್., ಶಿವಶಂಕರ ಪಿ., ಶ್ರೀಲತಾ ಕೆ., ವನಿತಾ ಆರ್. ಶೆಟ್ಟಿ, ಉಮೇಶ್ ಎಂ. ಸಾಲ್ಯಾನ್ ಮೊದಲಾದವರನ್ನು ಗೌರವಿಸಲಾಯಿತು.