ಶ್ರೀಕೃಷ್ಣದೇವರಾಯ ಕಲಾಮಂದಿರದ ರಂಗದ ಮೇಲೆ ಭಕ್ತಿ-ತಾದಾತ್ಮ್ಯತೆಗಳಿಂದ ಮೈಮರೆತು ನರ್ತಿಸುತ್ತಿದ್ದ ಕಲಾವಿದೆ ಕೀರ್ತನಾ ಶಶಿಕುಮಾರ್ ಎರಡು ಗಂಟೆಗಳ ಕಾಲ ನೆರೆದ ಸಮಸ್ತ ಕಲಾರಸಿಕರ ಗಮನವನ್ನು ತನ್ನತ್ತ ಸೆಳೆದಿಟ್ಟುಕೊಂಡಿದ್ದು ವಿಶೇಷ. ನೃತ್ಯಕ್ಕೆ ಹೇಳಿ ಮಾಡಿಸಿದ ಮಾಟವಾದ ಅಂಗಸೌಷ್ಟವ, ಭಾವಪೂರ್ಣ ಅಭಿವ್ಯಕ್ತಿ ಸೂಸುವ ಹಸನ್ಮುಖ, ಬೊಗಸೆಕಂಗಳ ಚೆಲುವಿನ ಕಲಾವಿದೆ, ನಿಷ್ಠೆ- ಪರಿಶ್ರಮಗಳಿಂದ ಕಲಿತ ತನ್ನ ಸೊಬಗಿನ ನೃತ್ಯಧಾರೆಯೊಂದಿಗೆ ಅಪೂರ್ವ ಭಂಗಿಗಳನ್ನು ಕಲಾತ್ಮಕವಾಗಿ ಪ್ರದರ್ಶಿಸಿದಳು.
ಬೆಂಗಳೂರಿನ ‘ಉಷ್ಶಸ್ ಫೌಂಡೇಶನ್’ ನೃತ್ಯಸಂಸ್ಥೆಯ ನೃತ್ಯಗುರು ಕಲೈಮಾಮಣಿ ಡಾ. ಸಂಗೀತಾ ಕಬಿಲನ್ ಇವರ ಶಿಷ್ಯೆ ಕೀರ್ತನಾ ಶಶಿಕುಮಾರ್ ವಿದ್ಯುಕ್ತವಾಗಿ ನಡೆದ ಅವಳ ರಂಗಪ್ರವೇಶದಲ್ಲಿ ಸಾಕಾರಗೊಳಿಸಿದ ಎಲ್ಲ ಕೃತಿಗಳೂ ದೈವೀಕ ಪ್ರಭೆಯಿಂದ ಬೆಳಗಿದವು. ಪ್ರಥಮ ಪ್ರಸ್ತುತಿಯಾಗಿ ತ್ಯಾಗರಾಜರು ರಚಿಸಿದ ‘ನಂದನಮು ರಘುನಂದನ’- (ಷಹನ ರಾಗ-ಆದಿತಾಳ)ನನ್ನು ಗಾಯಕ ರೋಹಿತ್ ಭಟ್ಟರು ಮಾರ್ದವ ರಾಗದಲ್ಲಿ ಸ್ತುತಿಸತೊಡಗಿದಂತೆ, ಸಾಕೇತರಾಮನ ಸೇತುಬಂಧನದ ಸೂಕ್ಷ್ಮಸಂಚಾರಿಯನ್ನು ಕೀರ್ತನಾ ಚಿತ್ರಿಸುತ್ತ, ರಾಮನನ್ನು ಪರಿಪರಿಯಾಗಿ ನುತಿಸುತ್ತ, ಅವನ ದಿವ್ಯರೂಪವನ್ನು, ಸುಂದರ ಭಂಗಿಗಳನ್ನು ತನ್ನ ಮನೋಜ್ಞ ಅಭಿನಯ ಮತ್ತು ಬಾಗು-ಬಳಕುಗಳ ಆಂಗಿಕಾಭಿನಯದಿಂದ ಚಿತ್ರಿಸಿದಳು. ಆಂಜನೇಯನ ಭಕ್ತಿಯ ಮಜಲುಗಳನ್ನು ಭಕ್ತಿಪುರಸ್ಸರವಾಗಿ ಕಟ್ಟಿಕೊಡುತ್ತಾ, ಆನಂದಾತಿರರೇಕದಿಂದ ಕರುಣಾಸಾಗರನನ್ನು ಚೇತೋಹಾರಿ ಅಭಿನಯದಿಂದ ಸಾಕ್ಷಾತ್ಕರಿಸಿದಳು. ಗುರು ಸಂಗೀತಾರ ಸುಶ್ರಾವ್ಯ ದನಿಯ, ಕುಣಿಸುವ ಲಯದ ನಟುವಾಂಗದ ಬನಿಗೆ ಕಲಾವಿದೆ ತನ್ನ ಹರಿತ ನೃತ್ತಗಳ ಆಮೋದದ ಗತಿಯಲ್ಲಿ ಹೆಜ್ಜೆಗೂಡಿಸಿದಳು.
ಮುಂದಿನ ಶುದ್ಧ ನೃತ್ತ ಬಂಧ- ಸಾಹಿತ್ಯವಿರದಿದ್ದರೂ ಕೀರ್ತನಾ ನಿರೂಪಿಸಿದ ಜತಿಸ್ವರದ ಚೆಂದವೇ ವಿಭಿನ್ನ. ಪಾದಭೇದಗಳ ಚುರುಕಿನ ದಾಂಗುಡಿಯಲ್ಲಿ, ಆಂಗಿಕಗಳನ್ನು ಸುಲಲಿತವಾಗಿ ಹಬ್ಬಿಸುತ್ತ ಕಣ್ಣೆದುರು ಜತಿಗಳ ಸುಗ್ಗಿ ಚೆಲ್ಲುತ್ತ ಹೋಗುವ ವೈಖರಿಯೇ ವಿಸ್ಮಯಕಾರಕ. ವೈವಿಧ್ಯ ನೃತ್ಯವಿನ್ಯಾಸಗಳ ಮೋಡಿ ಅನನ್ಯ. ನೃತ್ಯ ವ್ಯಾಕರಣದ ಪ್ರತಿಯೊಂದು ಅಂಶಗಳನ್ನೂ ಒಳಗೊಂಡ ಜತಿಸ್ವರ- ಕಲಾವಿದೆಯ ಪ್ರತಿಭಾ ಸಂಪನ್ನತೆಯನ್ನು ಬಿಂಬಿಸಿತು. ಅನಾಯಾಸದ ಹೆಜ್ಜೆ-ಗೆಜ್ಜೆಗಳ ಪಾದರಸದ ಮಿನುಗು, ಹೊಸತನದ ಒನಪು-ಒಯ್ಯಾರಗಳ ನೋಟ ಬೀರಿತು. ಲಯಾತ್ಮಕ ನೃತ್ತಗಳ ಚೆಲುವಿನಲ್ಲಿ ಭಂಗಿಗಳು ಅರಳಿದವು. ಎಲ್ಲಕ್ಕಿಂತ ಕೀರ್ತನಳ ಅಂಗಶುದ್ಧ -ಸ್ಪಷ್ಟ -ನಿಖರ ಹಸ್ತಮುದ್ರೆಗಳ ಪ್ರದರ್ಶನ ಗುರುಗಳ ನಟ್ಟುವಾಂಗ ಸಾಂಗತ್ಯದಲ್ಲಿ ತನ್ನದೇ ಆದ ಛಾಪು ಹೊಂದಿತ್ತು.
ಅನಂತರ ಶ್ರೀ ಮುತ್ತುಸ್ವಾಮಿ ದೀಕ್ಷಿತರ್ ವಿರಚಿತ ದೇವಿಸ್ತುತಿ ‘ಕಂಜದಳಾಯತಾಕ್ಷಿ ಕಾಮಾಕ್ಷಿ’ – ದೇವಿಯ ಮಹೋನ್ನತ ರೂಪವನ್ನು ಕೀರ್ತನಾ ತನ್ನ ದಿವ್ಯಭಂಗಿಗಳಿಂದ, ಅಪೂರ್ವ- ಲಾವಣ್ಯದ ಆಂಗಿಕಾಭಿನಯಗಳ ಸೌಂದರ್ಯದಿಂದ ಕಣ್ಮುಂದೆ ತಂದು ನಿಲ್ಲಿಸಿದಳು. ಮೋಹಕ ನೃತ್ತಗಳಿಂದ ಅಲಂಕೃತವಾದ ಅವಳ ಚುರುಕಾದ ಪಾದ ಚಲನೆಗಳು, ಲೀಲಾಜಾಲ ಅಂಗಶುದ್ಧ ನರ್ತನ ಮುದನೀಡಿದವು . ಕಲಾವಿದೆಯ ತೇಜೋಪೂರ್ಣ ಮುಖಭಾವ – ಭಾವಪುರಸ್ಸರ ಕಣ್ಣುಗಳ ಚಲನೆಯ ಆರ್ದ್ರತೆ, ನುರಿತ ಅಭಿನಯದೊಂದಿಗೆ ಕೂಡಿ ವಿಶಿಷ್ಟ ಅನುಭೂತಿಯನ್ನುಂಟು ಮಾಡಿತು. ಸರ್ವ ಸಮರ್ಪಣಾ ಭಾವದಿಂದ ಶರಣಾದ ಭಕ್ತಚೇತನಳಾಗಿ ಕಲಾವಿದೆ ಭಕ್ತಿಯ ಪರಾಕಾಷ್ಠೆಯ ಸಾಕಾರ ಮೂರ್ತಿಯಾದಳು. ದೈವೀಕತೆಯ ಪ್ರತಿಬಿಂಬವಾಗಿ ಮೈಮರೆತು ನರ್ತಿಸಿದ ಕೀರ್ತನಾ, ನೋಡುಗರೆದೆಯಲ್ಲಿ ಸಂಚಲನವನ್ನುಂಟು ಮಾಡಿದಳೆಂದರೆ ಅತಿಶಯೋಕ್ತಿಯಲ್ಲ.
ಭರತನಾಟ್ಯ ಪ್ರಸ್ತುತಿಯ ಹೃದಯಭಾಗ ಅಷ್ಟೇ ಹೃದ್ಯ ಭಾಗವೂ ಆದ ‘ಪದವರ್ಣ’ – ಶ್ರೀಮನ್ನಾರಾಯಣನಿಗೆ ಸಮರ್ಪಿತವಾಗಿತ್ತು. (ರಾಗ – ಶಂಕರಾಭರಣ, ಆದಿತಾಳ) ಶ್ರೀದಂಡಾಯುಧಪಾಣಿ ಪಿಳ್ಳೈ ರಚನೆ. ದೀನಾತ್ಮಳಾಗಿ ಸ್ವಾಮಿಯಲ್ಲಿ ಅನುರಕ್ತಳಾದ ನಾಯಕಿ, ಹಗಲಿರುಳು ಅವನ ನೆನಪಲ್ಲಿ ನವೆಯುತ್ತ ಅನ್ನಾಹಾರ ತ್ಯಜಿಸಿ ವಿರಹವೇದನೆಯಿಂದ ಹೊಯ್ದಾಡುತ್ತಿದ್ದಾಳೆ. ಎಲ್ಲರನ್ನೂ ಕಾಯುವ ಕರುಣಾಕರ ನನ್ನಲ್ಲೇಕೆ ವ್ಯಗ್ರನಾಗಿದ್ದಾನೆ? ಈ ಮೋಹದ ಜಾಲವರಿಯೇ ಎಂದು ವಿಸ್ಮಿತಳಾಗಿ ನಾಯಕಿ, ತನ್ನ ಪ್ರಾಣನಾಥ ತಿರುಮಲೇಶನನ್ನು ಕರೆತರಲು ಸಖಿಯನ್ನು ಬೇಡಿಕೊಳ್ಳುತ್ತ ದುಂಬಾಲು ಬಿದ್ದಿದ್ದಾಳೆ. ‘ಸಖಿಯೇ, ಇಂದ ಜಾಲಂ ಏನಡಿ.. …ವರಚೊಲ್ಲಡಿ’ -ಎಂದು ಕರುಳು ಕರಗುವಂತೆ ಬೇಡಿಕೊಳ್ಳುವ ನಾಯಕಿಯಾಗಿ, ಕಲಾವಿದೆ ವಿರಹಾರ್ತ ಭಾವಗಳನ್ನು ಗಾಢ ಅಭಿವ್ಯಕ್ತಿಯಲ್ಲಿ ಹೊರಸೂಸುತ್ತಾಳೆ.
ನರ್ತಕಿಯ ನಿರಾಯಾಸ ನರ್ತನದ ಸೊಗಸು ಹೊರಹೊಮ್ಮುತ್ತ, ನಡುನಡುವೆ ನೃತ್ತಸಲಿಲ ಭೋರ್ಗರೆಯುತ್ತದೆ. ಸಂಗೀತಾರ ಸ್ಫುಟವಾದ ನಟ್ಟುವಾಂಗದ ಸೊಲ್ಲುಕಟ್ಟುಗಳ ಮೋಡಿಮಾಡುವ ಮಾರ್ದನಿಗೆ ಪಾದರಸ ವೇಗದ ಖಚಿತ ಅಡವುಗಳು, ಪಾದಭೇದದ ಮಿನುಗಿನ ನೃತ್ತಗುಚ್ಚಗಳು ಕಣ್ಮನ ಸೆಳೆದವು. ನಾಯಕಿ, ತನ್ನ ಸಖಿಗೆ ವಿವಿಧ ಆಮಿಷಗಳನ್ನೊಡ್ಡಿ ತನ್ನಿನಿಯನನ್ನು ಕರೆತರಲು ಕೇಳಿಕೊಳ್ಳುವ ಅತ್ಯಂತ ಸೂಕ್ಷ್ಮಾಭಿನಯದ ಅಭಿನಯ ಪರಿಣಾಮಕಾರಿಯಾಗಿತ್ತು. ಆಕೆಯ ಆತ್ಮನಿವೇದನೆಯ ಭಾವಾಭಿವ್ಯಕ್ತಿಯ ತನ್ಮಯತೆ ಹೃದಯಂಗಮವಾಗಿ ಮೂಡಿಬಂದಿತ್ತು. ಜೊತೆಗೆ ಅದಕ್ಕೆ ಪೂರಕವಾಗಿ ಕೃಷ್ಣ- ಕುಚೇಲರ ಹಾಗೂ ಗಜೇಂದ್ರ ಮೋಕ್ಷ, ದ್ರೌಪದಿಯ ಮಾನರಕ್ಷಣೆಯ ಮುಂತಾದ ಸಂಚಾರಿ ಕಥೆಗಳು ಅವಳ ವ್ಯಾಕುಲತೆಯನ್ನು ಬಿತ್ತರಿಸಲು ಶಕ್ತವಾಗಿದ್ದವು. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಸೊಗಸಾಗಿ ಅಭಿನಯಿಸಿದ ಕೀರ್ತನ ನವರಸಗಳನ್ನೂ ಅಷ್ಟೇ ಚೈತನ್ಯಪೂರ್ಣವಾಗಿ ಅಭಿವ್ಯಕ್ತಿಸಿದ್ದಳು. ಕಲಾವಿದೆಯ ಪ್ರತಿಯೊಂದು ಮನಮೋಹಕ ಭಂಗಿ-ಭಾವಗಳೂ, ಹಸ್ತ ವಿನಿಯೋಗಗಳ ಕಲಾತ್ಮಕತೆ ಸ್ಮರಣೀಯವಾಗಿದ್ದವು. ಕೃತಿಗೆ ಹೊನ್ನಕಳಶವಿಟ್ಟಂತೆ ಸಂಗೀತಾರ ಅಪೂರ್ವ ನೃತ್ಯಸಂಯೋಜನೆ ಕಣ್ಮನ ತಣಿಸಿತು.
ಅನಂತರ- ‘ಚಂದ್ರಚೂಡ ಶಿವಶಂಕರ’ನನ್ನು ಕಲಾವಿದೆ ತನ್ನ ಶಕ್ತಿಶಾಲಿ ಆಕಾಶಚಾರಿ, ವಿವಿಧ ಚಾರಿಗಳ ಸಮ್ಮೋಹಕ ನೃತ್ಯವೈಭವದಿಂದ ಧರೆಗಿಳಿಸಿ ಆಹ್ಲಾದ ನೀಡಿದಳು. ಬಾಲ ಮಾರ್ಕಂಡೇಯ ಮತ್ತು ಶಿವ, ವಿಷಕಂಠನಾದ ವಿವಿಧ ಘಟನೆಗಳನ್ನು ಸಂಕ್ಷಿಪ್ತವಾಗಿ ಸಂಚಾರಿಯಲ್ಲಿ ಝಳಪಿಸಿ, ದೇವೀಕೃತಿಯನ್ನು ಶಿಲ್ಪಸದೃಶ, ಹೃನ್ಮನ ತಂಪೆಸೆವ ನಾನಾ ದೈವೀಕ ಭಂಗಿಗಳಲ್ಲಿ ಸಾಕ್ಷಾತ್ಕರಿಸಿದಳು. ಅಂತ್ಯದಲ್ಲಿ ಕಲಾತ್ಮಕತೆ ಮಿಳಿತ ಮೋಹಕತೆಯ ಕಾಂತಿ ಬೆಸೆದ ಮಂಡಿ ಅಡವು- ಅರೆಮಂಡಿ ಅಡವು, ಚಮತ್ಕಾರಿಕ ಚಲನೆಗಳ ಒಘದೊಂದಿಗೆ ‘ತಿಲ್ಲಾನ’ವನ್ನು ಮಂಗಳಮಯವಾಗಿ ಸಂಪನ್ನಗೊಳಿಸಿದಳು.
– ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.