ಮಂಗಳೂರು: ಮಂಗಳೂರಿನ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಆಶ್ರಯದಲ್ಲಿ ಸಾಹಿತಿ ಶಶಿಲೇಖಾ ಬಿ. ಇವರ ಮೂರು ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 22 ಮಾರ್ಚ್ 2025ರಂದು ಮಂಗಳೂರಿನ ಉರ್ವಸ್ಟೋರ್ ಬಳಿಯ ಸಾಹಿತ್ಯ ಸದನದಲ್ಲಿ ನಡೆಯಿತು.
ಸಮಾರಂಭದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ “ಶಶಿಲೇಖಾ ತಮ್ಮ ಮೂರು ಪುಸ್ತಕಗಳಲ್ಲಿ ಜಾನಪದ ತತ್ವ, ಕೃಷಿ ಪರಂಪರೆ, ಯುವ ಪೀಳಿಗೆ ಬಹುಮುಖಿ ಸಮಾಜದ ಕೌಟುಂಬಿಕ ವಿಚಾರಗಳೊಂಗೆ ಸಮಗ್ರವಾಗಿ ತಿಳಿಸಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪಂಪ ಪ್ರಶಸ್ತಿ ವಿಜೇತ, ಹಂಪಿ ವಿ. ವಿ. ಇದರ ವಿಶ್ರಾಂತ ಕುಲಪತಿಗಳಾದ ಡಾ. ವಿವೇಕ ರೈ ಮಾತನಾಡಿ “ಸಾಹಿತಿಗಳು, ಬರಹಗಾರರು ಕೇವಲ ಹೇಳಿಕೆಗಳನ್ನು ನೀಡಬಾರದು, ಅವರ ಬದುಕು ಪ್ರಾಯೋಗಿಕವಾಗಿರಬೇಕು. ಹಾಗಿದ್ದಾಗ ಮಾತ್ರ ಅವರಿಗೆ ತಮ್ಮ ಬರಹಗಳಲ್ಲಿ ಸಮಾಜವನ್ನು ತಿದ್ದುವ ನೈತಿಕ ಹಕ್ಕು ಇರುತ್ತದೆ. ಶಶಿಲೇಖ ಅವರ ಕೃತಿ ಮತ್ತು ಜೀವನದಲ್ಲಿ ಇಂತಹ ಬದುಕಿನ ಪ್ರಯೋಗಶೀಲತೆ ಎದ್ದು ಕಾಣುತ್ತದೆ” ಎಂದರು.
‘ಬೆಳಕಿನ ಬೆನ್ನು ಹತ್ತಿ’ ಎಂಬ ಕಥಾ ಸಂಕಲನ, ‘ದೇವಭಾವದ ಹರಿವು’ ಎಂಬ ವೈಚಾರಿಕ ಲೇಖನಗಳ ಸಂಕಲನ ಹಾಗೂ ‘ಮುಂಜಾವದ ಮಾತು’ ಎಂಬ ಆಕಾಶವಾಣಿ ಪ್ರಸಾರಿತ ಚಿಂತನಗಳನ್ನು ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಅವರು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.
ಕಥಾ ಸಂಕಲನದ ಬಗ್ಗೆ ಡಾ. ನರಸಿಂಹಮೂರ್ತಿ, ವೈಚಾರಿಕ ಲೇಖನಗಳ ಬಗ್ಗೆ ಡಾ. ಸುಧಾರಾಣಿ, ಮುಂಜಾವದ ಮಾತಿನ ಬಗ್ಗೆ ಮುದ್ದು ಮೂಡುಬೆಳ್ಳೆ ಹಾಗೂ ಪ್ರಕಾಶಕರ ಪರವಾಗಿ ನಾಗೇಶ್ ಕಲ್ಲೂರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಆಕೃತಿ ಭಟ್ ಆಶಯ ಗೀತೆ ಹಾಡಿ, ಶಶಿಲೇಖಾ ಬಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ರೂಪಕಲಾ ಆಳ್ವ ನಿರೂಪಿಸಿ, ರತ್ನಾವತಿ ಜೆ. ಬೈಕಾಡಿ ತುಳು ಹಾಡುಗಳನ್ನು ಹಾಡಿ, ಮೋಲಿ ಮಿರಾಂದ ವಂದಿಸಿದರು.