ಬೆಂಗಳೂರು : ವಿಜಯನಗರ ಬಿಂಬ ಕಳೆದ 29 ವರ್ಷಗಳಿಂದ ರಂಗಭೂಮಿಯಲ್ಲಿ ತನ್ನದೇ ಛಾಪು ಮೂಡಿಸಿದೆ. ಇದೀಗ ಬರ್ಟೋಲ್ಟ್ ಬ್ರೆಕ್ಟ್ ನ ಮಹತ್ವದ ನಾಟಕ ‘ಮದರ್ ಕರೇಜ್’ ಇದರ ಪ್ರದರ್ಶನವನ್ನು ದಿನಾಂಕ 28 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಏರ್ಪಡಿಸಿದೆ.
20ನೇ ಶತಮಾನದ ಅತ್ಯುತ್ಕೃಷ್ಟ ನಾಟಕ ಎಂದೇ ಹೆಸರಾಗಿರುವ ‘ಮದರ್ ಕರೇಜ್’ – ಯುದ್ಧ ಮತ್ತು ಮನುಷ್ಯ ಸಂಬಂಧಗಳ ಮೇಲೆ ಅದರ ಪರಿಣಾಮವನ್ನು ಹೇಳುವ ಕಥೆ. ಯುದ್ಧ ಪ್ರೀತಿ ಇದ್ದ ಹಾಗೆ ಅದು ಮುಂದುವರೆಯಲು ತನ್ನದೇ ಆದ ಮಾರ್ಗವನ್ನು ಹುಡುಕುತ್ತದೆ ಎಂದು ಹೇಳುತ್ತಲೇ ಬ್ರೆಕ್ಟ್ ನಮ್ಮನ್ನು ಆ ನಿಟ್ಟಿನಲ್ಲಿ ಯೋಚಿಸುವ ಹಾಗೆ ಮಾಡುತ್ತಾನೆ.
ಇದು ಯುದ್ಧ ವಿರೋಧಿ ನಾಟಕವಾದರೂ ಇದರಲ್ಲಿ ಬರುವ ಬಹುಪಾಲು ಪಾತ್ರಗಳು ಯುದ್ಧ ನಡೆಯಬೇಕು ಎಂದೇ ಹೇಳುತ್ತಾರೆ.
1630ರ ಸುಮಾರಿಗೆ ಯುರೋಪ್ನಲ್ಲಿ ನಡೆದ 30 ವರ್ಷಗಳ ಧಾರ್ಮಿಕ ಯುದ್ಧ ನಾಟಕದ ಹಿನ್ನೆಲೆಯಾಗಿದೆ. ಪ್ರೊಟೆಸ್ಟೆಂಟ್ ಮತ್ತು ಕ್ಯಾಥಲಿಕ್ ಗಳ ನಡುವೆ ನಡೆಯುವ ಈ ಯುದ್ಧದಿಂದ ಕಂಗಾಲಾಗಿರುವ ಸ್ಥಳಗಳಲ್ಲಿ ಮದರ್ ಕರೇಜ್ ತನ್ನ ಮಕ್ಕಳು ಮತ್ತು ಗಾಡಿಯೊಂದಿಗೆ ತಿರುಗಾಡುತ್ತಾ ಜನರಿಗೆ ಬೇಕಾದ ಸಾಮಾನುಗಳನ್ನು ಮಾರುತಿರುತ್ತಾಳೆ.
‘ವ್ಯಾಪಾರಂ ದ್ರೋಹ ಚಿಂತನಂ’ ಎಂಬ ನುಡಿಗಟ್ಟು ಸರ್ವ ವೇದ್ಯ. ಈ ನಿಟ್ಟಿನಲ್ಲೆ ಮದರ್ ಕರೇಜ್ ನಾಟಕದುದ್ದಕ್ಕೂ ಯೋಚಿಸುತ್ತಾ ಕೆಲವೊಮ್ಮೆ ಮಾನವೀಯ ಮುಖವನ್ನು ಪ್ರದರ್ಶಿಸುತ್ತಾಳೆ. ಮೂಕಿಯಾದ ಮಗಳು ಕ್ಯಾತರಿನ್ ನಾಟಕದ ಕೊನೆಯಲ್ಲಿ ದೊಡ್ಡ ದನಿಯಾಗಿ ಮಾರ್ಪಾಡಾಗುತ್ತಾಳೆ. ಜೀವನ ಪ್ರೀತಿ, ವ್ಯಾಪಾರಿ ಬುದ್ಧಿ ಕೆಲವೊಮ್ಮೆ ಮಾನವರಿಗೆ ಹೇಗೆ ಮುಳುವಾಗಬಹುದು ಎಂಬುದನ್ನು ಈ ನಾಟಕ ಹೇಳುತ್ತದೆ. ಇಪ್ಪತ್ತನೇ ಶತಮಾನದ ಅತ್ಯುತ್ತಮ ನಾಟಕ ಹಿಂದೆ ಖ್ಯಾತವಾಗಿರುವ ಈ ನಾಟಕದ ಹೊಳಹುಗಳನ್ನು ತಮ್ಮ ಮುಂದಿಡುವ ಒಂದು ಸಣ್ಣ ಪ್ರಯತ್ನ ನಮ್ಮ ಈ ನಾಟಕ.
ರಚನೆ – ಬರ್ಟೋಲ್ಟ್ ಬ್ರೆಕ್ಟ್
ಕನ್ನಡಕ್ಕೆ – ಲಿಂಗದೇವರು ಹೆಳೆಮನೆ
ವಿನ್ಯಾಸ ನಿರ್ದೇಶನ – ಡಾ. ಎಸ್.ವಿ. ಕಶ್ಯಪ್