ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸಾಪ್ತಾಹಿಕ ನೃತ್ಯಸರಣಿ 90ರ ಕಾರ್ಯಕ್ರಮವು ದಿನಾಂಕ 31 ಮಾರ್ಚ್ 2025ರಂದು ಸಂಜೆ ಗಂಟೆ 6-25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಮಂಗಳೂರಿನ ವಿದುಷಿ ವೈಷ್ಣವಿ ವಿ. ಪ್ರಭು ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ವಿದುಷಿ ವೈಷ್ಣವಿ ವಿ. ಪ್ರಭು ಇವರು ಖ್ಯಾತ ಭರತನಾಟ್ಯ ಕಲಾವಿದೆಯಾಗಿದ್ದು, ಪ್ರಸ್ತುತ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಅಂತಿಮ ವರ್ಷದ ಎಂ.ಕಾಂ. ಪದವಿಯ ವಿದ್ಯಾರ್ಥಿಯಾಗಿದ್ದಾರೆ. 17 ವರ್ಷಗಳ ಕಾಲ ಗುರುಗಳಾದ ವಿದುಷಿ ಶ್ರೀಮತಿ ರಶ್ಮಿ ಸರಳಾಯರವರ ಮಾರ್ಗದರ್ಶನದಲ್ಲಿ ಭರತನಾಟ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಜೂನಿಯರ್, ಸೀನಿಯರ್, ಪ್ರೀ ಮತ್ತು ಅಂತಿಮ ವಿದ್ವತ್ ಪರೀಕ್ಷೆಗಳಲ್ಲಿ ವಿಶೇಷ ಶ್ರೇಣಿಯನ್ನು ಪಡೆದುಕೊಂಡಿರುತ್ತಾರೆ. ಅವರು ರಮಾ ವೈದ್ಯನಾಥನ್, ಶ್ವೇತಾ ಪ್ರಚಂಡ, ರಾಧಿಕಾ ಶೆಟ್ಟಿ, ಬ್ರಘಾ ಬ್ರೆಸೆಲ್ ಸೇರಿದಂತೆ ಅನೇಕ ಖ್ಯಾತ ಕಲಾವಿದರ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಹೆಚ್ಚಿಸಿಕೊಂಡಿದ್ದಾರೆ. ವಿಶೇಷವಾಗಿ 2015-2016ರಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಂಪನ್ಮೂಲ ಕೇಂದ್ರ ಮತ್ತು ಸಂಸ್ಕೃತಿ ಸಚಿವಾಲಯದಿಂದ ನೀಡುವ ತರಬೇತಿ ವಿದ್ಯಾರ್ಥಿ ವೇತನವನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಪಡೆದ ಏಕೈಕ ವಿದ್ಯಾರ್ಥಿಯಾಗಿರುತ್ತಾರೆ.
ವೈಷ್ಣವಿ ವಿ. ಪ್ರಭು ಇವರ ಕಲಾ ಪ್ರತಿಭೆ ಗಡಿಯನ್ನೂ ದಾಟಿದ್ದು ಮುಂಬೈ, ಗೋವಾ, ದೆಹಲಿ ಮತ್ತು ಇತ್ತೀಚೆಗೆ ದುಬೈ ಸೇರಿ 200ಕ್ಕೂ ಹೆಚ್ಚು ಸಾಂಸ್ಕೃತಿಕ ವೇದಿಕೆಗಳಲ್ಲಿ ಮನಸೆಳೆಯುವ ಪ್ರದರ್ಶನಗಳನ್ನು ನೀಡಿ, ಅಂತರರಾಷ್ಟ್ರೀಯ ಮಟ್ಟದ ಕಲಾವಿದೆಯಾಗಿ ಮನ್ನಣೆಯನ್ನು ಪಡೆದಿದ್ದಾರೆ. ಮೈಸೂರಿನಲ್ಲಿ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ವಿಜೇತೆಯಾಗಿ ಹೊರಹೊಮ್ಮಿದ್ದು, ಇತ್ತೀಚೆಗೆ ಇವರು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಮಂಗಳೂರು ಇವರಿಂದ ‘ನೃತ್ಯ ರಂಗ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿ ‘ನಟನಂ’ ಎಂಬ ಕನ್ನಡ ದೇವರನಾಮದ ಮೂಲ ಗೀತೆಯನ್ನು ಪ್ರಸಿದ್ಧ ಕವಿ ಕೊಚ್ಚಿ ಅನಂತ್ ಭಟ್ ಅವರಿಂದ ಕೊಂಕಣಿ ಭಾಷೆಗೆ ಅನುವಾದಿಸಿ ಭರತನಾಟ್ಯಕ್ಕೆ ಅಳಡಿಸಿ ಯಶಸ್ವಿಯಾಗಿ ಪ್ರದರ್ಶನ ನೀಡಿರುತ್ತಾರೆ. ವೈಷ್ಣವಿ ವಿ. ಪ್ರಭು ಇವರು ಕೇವಲ ನೃತ್ಯವಲ್ಲದೆ ಸಂಗೀತದಲ್ಲಿಯೂ ಪರಿಣಿತರಾಗಿದ್ದು, ಕರ್ನಾಟಕ ಸಂಗೀತದಲ್ಲಿ ಜೂನಿಯರ್ ಪ್ರಮಾಣಪತ್ರವನ್ನು ಪಡೆದಿದ್ದಾರೆ. ತಮ್ಮ ಕಲಾ ಅನುಭವವನ್ನು ಹಂಚಿಕೊಳ್ಳುವ ಉದ್ದೇಶದಿಂದ, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಗಂಜಿಮಠ ಮತ್ತು ಗುರುವುರಗಳಲ್ಲಿ ‘ನಟನಂ’ ನೃತ್ಯ ವಿದ್ಯಾಲಯವನ್ನು ಐದು ವರ್ಷಗಳ ಹಿಂದೆ ಸ್ಥಾಪಿಸಿರುತ್ತಾರೆ. 2024ರ ಫೆಬ್ರವರಿ 2ರಂದು ಅವರು ತಮ್ಮ ಕನಸಿನ ನೃತ್ಯ ಕಾರ್ಯಕ್ರಮ ‘ನಟರಾಜ ವಂದನಂ’ ರಂಗಪ್ರವೇಶವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಇತ್ತೀಚೆಗೆ ಇವರು ಮಂಗಳೂರು ಮತ್ತು ಬೆಂಗಳೂರು ಸೇರಿ ಹಲವೆಡೆ ಭರತನಾಟ್ಯ ಮತ್ತು ಅರೆ ಶಾಸ್ತ್ರೀಯ ನೃತ್ಯ ಶಿಬಿರಗಳನ್ನು ಆಯೋಜಿಸಿದ್ದು, ಯುವಜನತೆಯಲ್ಲಿ ನೃತ್ಯ ಮತ್ತು ಸಂಸ್ಕೃತಿಯ ಅರಿವು ಹೆಚ್ಚಿಸುತ್ತಿದ್ದಾರೆ. ಮುಂದೆ, ಶಾಲೆಗಳಲ್ಲಿ ಎರಡು ಗಂಟೆಗಳ ನೃತ್ಯ ಶಿಬಿರವನ್ನು ‘ನೃತ್ಯ ಚಿಂತನೆ ಮತ್ತು ಜೀವನದಲ್ಲಿ ಕಲೆಯ ಮಹತ್ವ’ ಎಂಬ ಶೀರ್ಷಿಕೆಯೊಂದಿಗೆ ನಡೆಸುವ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ನೃತ್ಯವನ್ನು ಕಲಿಸುತ್ತಿದ್ದಾರೆ. ಅದೇ ರೀತಿ, ಮುಂದಿನ ತಲೆಮಾರಿನ ಕಲಾವಿದರನ್ನು ಪ್ರೋತ್ಸಾಹಿಸಲು ಇವರು ಕರ್ನಾಟಕ ಬೋರ್ಡ್ ನಡೆಸುವ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಭರತನಾಟ್ಯ ಪರೀಕ್ಷೆಗಳ ಪರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೈಷ್ಣವಿ ವಿ. ಪ್ರಭುರವರ ಪರಿಶ್ರಮ, ಸಮರ್ಪಣೆ ಮತ್ತು ಸಾಧನೆಗಳ ಮೂಲಕ ಭರತನಾಟ್ಯ ಪ್ರಪಂಚದಲ್ಲಿ ದಾರಿದೀಪವಾಗಿ ರಾರಾಜಿಸುತ್ತಿದ್ದಾರೆ.