06 ಏಪ್ರಿಲ್ 2023, ಮಂಗಳೂರು: ಸುರತ್ಕಲ್ ಗೋವಿಂದದಾಸ ಕಾಲೇಜು ವತಿಯಿಂದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ತೆಂಕು ತಿಟ್ಟು ಮತ್ತು ಬಡಗು ತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಯಾನ 2023’. ಕಾರ್ಯಕ್ರಮ ಏಪ್ರಿಲ್ 7ರಿಂದ 10ರವರೆಗೆ ಕಾಲೇಜಿನ ಎಚ್.ಜಿ.ಕೆ. ರಾವ್ ರಂಗ ಮಂದಿರದ ಯಕ್ಷ ಕೇಸರಿ ಅಗರಿ ರಘುರಾಮ ಭಾಗವತ ವೇದಿಕೆಯಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಕೃಷ್ಣಮೂರ್ತಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏಪ್ರಿಲ್ 7ರಂದು ಬೆಳಗ್ಗೆ 9ಕ್ಕೆ ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಎಚ್. ಅಧ್ಯಕ್ಷತೆ ವಹಿಸಲಿದ್ದಾರೆ. ಸುರತ್ಕಲ್‌ನ ಇಡ್ಯಾ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಐ. ರಮಾನಂದ ಭಟ್ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಉದ್ಯಮಿ ಅಗರಿ ವೈ.ವಿ. ರತ್ನಾಕರ ರಾವ್, ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಕುಳಾಯಿ, ಪ್ರಿನ್ಸಿಪಾಲ್ ಲಕ್ಷ್ಮೀ ಪಿ., ಕಾಲೇಜಿನ ಅಲ್ಯುಮ್ನಿ ಅಸೋಸಿಯೇಶನ್ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದರು.
ಏಪ್ರಿಲ್ 10ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಶ್ರೀರಂಗ ಹೊಸಬೆಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬಯಿಯ ವಿ.ಕೆ. ಸಮೂಹ ಸಂಸ್ಥೆ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕರುಣಾಕರ ಎಂ. ಶೆಟ್ಟಿ ಮದ್ಯಗುತ್ತು, ಶ್ರೀ ಕ್ಷೇತ್ರ ಧರ್ಮಸ್ಥಳದ ಜಮಾ ಉಗ್ರಾಣ ವಿಭಾಗದ ನಿವೃತ್ತರಾದ ಭುಜಬಲಿ, ಯಕ್ಷಗುರು ಶಂಕರನಾರಾಯಣ ಮೈರ್ಪಾಡಿ, ಪ್ರಮುಖರಾದ ಗಂಗಾಧರ ಪೂಜಾರಿ ಭಾಗವಹಿಸಲಿದ್ದಾರೆ.
ಯಕ್ಷಯಾನ ಪ್ರಶಸ್ತಿ ಸಮ್ಮಾನವನ್ನು ಯಕ್ಷಗಾನ ಪೋಷಕ ಮಾಧವ ಎಸ್. ಶೆಟ್ಟಿ ಬಾಳ ಅವರಿಗೆ ಪ್ರದಾನ ಮಾಡಲಾಗುತ್ತದೆ. ಏಪ್ರಿಲ್ 7ರಿಂದ 10ರವರೆಗೆ ಯಕ್ಷಗಾನ ಸ್ಪರ್ಧೆಯಲ್ಲಿ ನಾನಾ ಕಾಲೇಜುಗಳ ತಂಡಗಳು ಭಾಗವಹಿಸಲಿವೆ. ಅಂದು ಸಂಜೆ 5 ಗಂಟೆಯಿಂದ ಅಗರಿ ಸಂಸ್ಕರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು. ಪ್ರಮುಖರಾದ ಶ್ರೀರಂಗ ಎಚ್., ಪ್ರೊ. ರಮೇಶ್ ಭಟ್, ಗಂಗಾಧರ ಪೂಜಾರಿ, ಪೂರ್ಣಿಮಾ ಯತೀಶ್ ರೈ ಉಪಸ್ಥಿತರಿದ್ದರು.