Subscribe to Updates

    Get the latest creative news from FooBar about art, design and business.

    What's Hot

    ಕಟಪಾಡಿ ವೇಣುಗಿರಿಯಲ್ಲಿ ‘ಭಜನಾ ವೈಭವ 2025’ ಸಾಂಪ್ರದಾಯಿಕ ಭಜನಾ ಸ್ಪರ್ಧೆ | ಜೂನ್ 22

    May 20, 2025

    ಸರಯೂ ಬಾಲಯಕ್ಷ ವೃಂದ ಮಕ್ಕಳ ಮೇಳದ ‘ಯಕ್ಷ ಪಕ್ಷ’ ರಜತ ಸಂಭ್ರಮ ಉದ್ಘಾಟನೆ

    May 20, 2025

    ನಿಡ್ಲೆಯಲ್ಲಿರುವ ಕರುಂಬಿತ್ತಿಲ್ ಮನೆಯಲ್ಲಿ ‘ಕರುಂಬಿತ್ತಿಲ್ ಶಿಬಿರ 2025’ | ಮೇ 20ರಿಂದ 25

    May 19, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೃತ್ಯ ವಿಮರ್ಶೆ | ಪುರಂದರ ದಾಸರ ಕೃತಿಗಳಲ್ಲಿ ನವರಸ ಝೇಂಕಾರ
    Article

    ನೃತ್ಯ ವಿಮರ್ಶೆ | ಪುರಂದರ ದಾಸರ ಕೃತಿಗಳಲ್ಲಿ ನವರಸ ಝೇಂಕಾರ

    March 31, 20251 Comment3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ದಾಸರೆಂದರೆ ಪುರಂದರ ದಾಸರಯ್ಯ’ ಎಂಬ ಸುವಿಖ್ಯಾತಿ ಪಡೆದ ದಾಸಶ್ರೇಷ್ಠ ಪುರಂದರ ದಾಸರು ಸುಮಾರು ಐದು ಲಕ್ಷದವರೆಗೂ ಕೀರ್ತನೆಗಳನ್ನು ರಚಿಸಿದ್ದು, ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಅವರು ರಚಿಸದೇ ಇರುವ ವಿಷಯವಿಲ್ಲ. ನಮ್ಮ ಸುತ್ತಮುತ್ತಲ ಬದುಕಿನ ಪ್ರತಿಯೊಂದು ಸಂಗತಿಗಳ ಬಗ್ಗೆಯೂ ವಸ್ತುನಿಷ್ಠವಾಗಿ, ಅರ್ಥಪೂರ್ಣವಾಗಿ ವಿಶ್ಲೇಷಣಾತ್ಮಕವಾಗಿ ನಿರೂಪಿಸಿದ್ದಾರೆ. ಹಾಗೆಯೇ ಲೋಕದ ಅಂಕು-ಡೊಂಕು, ಡಾಂಭಿಕತೆಗಳ ಬಗ್ಗೆ, ವಿಪರ್ಯಾಸಗಳ ಬಗ್ಗೆ ಬಹು ಮಾರ್ಮಿಕವಾಗಿ ವಿಡಂಬಿಸಿ, ಜನರ ಕಣ್ತೆರೆಸುವ ಪ್ರಯತ್ನಿಸಿದ್ದಾರೆ. ಅವರ ಸ್ವಂತ ಜೀವನವೇ ಬದುಕಿನ ತಾತ್ವಿಕ ತಿಳುವಳಿಕೆಗೊಂದು ಉತ್ತಮ ಮಾದರಿ. ಅದು ಅಷ್ಟೇ ಹೃದಯಂಗಮವಾದ ಒಂದು ಕಥಾನಕ. ಲೌಕಿಕ ಮೋಹ-ವಿರಕ್ತಿಗಳಿಗೊಂದು ಪ್ರಾತ್ಯಕ್ಷಿಕ ನಿದರ್ಶನ. ಹೀಗಾಗಿ ಅವರು ಲೋಕಾನುಭವದ ಹಿನ್ನಲೆಯಲ್ಲಿ ರಚಿಸಿರುವ ಗೀತೆಗಳಲ್ಲಿ ಎಲ್ಲ ರಸ-ಭಾವ-ಗಂಧಗಳೂ ಮೇಳೈವಿಸಿವೆ.

    ಪುರಂದರದಾಸರು ತಮ್ಮ ಅನೇಕ ಕೃತಿಗಳಲ್ಲಿ ನಿದರ್ಶನದ ಕಥೆಗಳನ್ನು ಮುಂದಿಡುತ್ತಾ ರಸಾನುಭವದ ಪರಾಕಾಷ್ಠೆಯನ್ನು ನವರಸಗಳ ಝೇಂಕಾರದಲ್ಲಿ ಹೊರಹೊಮ್ಮಿಸುವರು. ಅವರ ಪದಗಳಲ್ಲಿ ತುಂಬಿದ ರಸಜೇನು ಹೃದಯಸ್ಪರ್ಶಿ. ಅಂಥ ಬಹು ಸೂಕ್ತವಾದ ಅರ್ಥಪೂರ್ಣ ಕೃತಿಗಳನ್ನು ಆರಿಸಿಕೊಂಡು, ಅದನ್ನು ಸಮರಸ ಮಾಲೆಯಲ್ಲಿ ಹದನಾಗಿ ಹೆಣೆದು, ತಮ್ಮ ವಿಶಿಷ್ಟ ಪರಿಕಲ್ಪನೆಯಲ್ಲಿ ನೃತ್ಯ ಸಂಯೋಜಿಸಿ ಅಷ್ಟೇ ಮನೋಜ್ಞವಾಗಿ ಅರ್ಪಿಸಿದವರು ವಿದುಷಿ ಪೂರ್ಣಿಮಾ ರಜಿನಿ.

    ಅವರು ಇತ್ತೀಚೆಗೆ ದೇವಗಿರಿ ಶ್ರೀವೆಂಕಟೇಶ್ವರನ ದೇವಾಲಯದಲ್ಲಿ ಪುರಂದರ ಭಕ್ತಿರಸಾಯನದ ‘ನೃತ್ಯ ನೈವೇದ್ಯ’ವನ್ನು ಭಕ್ತಿ ತಾದಾತ್ಮ್ಯತೆಯಿಂದ ಅರ್ಪಿಸಿದರು. ಶೃಂಗಾರ-ವಾತ್ಸಲ್ಯದಿಂದ ಹನಿದ ‘ಜಗದೋದ್ಧಾರನ ಆಡಿಸಿದೆಳೆಶೋದೆ’ – ನಿರ್ವ್ಯಾಜ ಮಮತೆಯ ತಾಯ ಪ್ರೀತಿಯನ್ನು ಬಾಲಕೃಷ್ಣನ ತುಂಟಾಟ- ಅದ್ಭುತ ಪವಾಡಗಳ ಸಾಂಗತ್ಯದಲ್ಲಿ ನವಿರಾದ ಪ್ರೇಮವನ್ನು ಧ್ವನಿಸಿತು. ಕಲಾವಿದೆ ಪೂರ್ಣಿಮಾ ತಮ್ಮ ಪ್ರಸ್ತುತಿಯಲ್ಲಿ ಪರಿಣತ ಅಭಿನಯದ ಪರಿಣಾಮಕಾರಿ ನೋಟವನ್ನು ಅನುಭವಜನ್ಯರಾಗಿಸಿದರು. ಮುದ್ದುಕೃಷ್ಣನ ಅಂಬೆಗಾಲು, ಮುಗ್ಧನೋಟ-ಆಟ-ತುಂಟಾಟಗಳ ವೈವಿಧ್ಯ, ಮಗನ ಕಾಡಿಸುವಿಕೆಯಿಂದ ಯಶೋದೆ ಹೈರಾಣಾಗುವ ಪರಿಯನ್ನು ಕಲಾವಿದೆ, ತಮ್ಮ ಪ್ರಬುದ್ಧ ಅಭಿನಯದಿಂದ ಕಟ್ಟಿಕೊಡುತ್ತ, ರಸಾನುಭವ ನೀಡಿ, ಸುಲಲಿತ ಆಂಗಿಕಾಭಿನಯದ ಸೊಗಡಿನಲ್ಲಿ ಭಾವಸಾಂದ್ರತೆಯನ್ನು ಚಿಮ್ಮಿಸಿ ಮುದನೀಡಿದರು.

    ಅನಂತರ- ‘ಎಲ್ಲಾನೂ ಬಲ್ಲೆನೆನ್ನುವಿರಲ್ಲ ? ಅವಗುಣ ಬಿಡಲಿಲ್ಲ’ ಎಂದು ವಿಡಂಬಿಸುವ ದಾಸರು ಸಾಮಾಜಿಕ ಸಂಗತಿಗಳ ವೈರುದ್ಧ್ಯ- ವಿಪರ್ಯಾಸಗಳಿಗೆ ಹಾಸ್ಯಲೇಪನದಲ್ಲಿ ಕನ್ನಡಿ ಹಿಡಿಯುವರು. ಡಂಭಾಚಾರದ – ಆಶಾಢಭೂತಿತನದ ಹಲವು ಉದಾಹರಣೆಗಳನ್ನು ‘ಹಾಸ್ಯ’ಪೂರ್ಣ ಶೈಲಿಯ ಅಭಿನಯದಲ್ಲಿ ಸಮರ್ಥವಾಗಿ ನಿರೂಪಿಸುತ್ತ ಕಲಾವಿದೆ, ತಮ್ಮ ಸೂಕ್ಷ್ಮಸಂವೇದನೆಯ ಅಭಿನಯವನ್ನು ಹೊರಸೂಸಿದರು. ಲೋಕಧರ್ಮ ಮನೋಭಾವದ ಈ ಕೃತಿಯ ಅಭಿನಯದಲ್ಲಿ ಕಲಾವಿದೆಯ ಸೃಜನಶೀಲ ಕಲ್ಪನೆಗಳಿಗೆ ಸಾಕಷ್ಟು ಅವಕಾಶವಿತ್ತು. ಮುಂದೆ- ‘ಇನ್ನು ದಯಬಾರದೇ? ದಾಸನ ಮೇಲೆ’ ಎನ್ನುತ್ತಾ ಶ್ರೀಹರಿಗೆ ಶರಣಾಗಿ, ದಾಸಭಾವದ ವಿನಯಪಾರಮ್ಯದ ‘ಕರುಣಾ’ ಭಾವವನ್ನು ಮೆರೆದರು ಪೂರ್ಣಿಮಾ.

    ‘ಚಂದ್ರಚೂಡ ಶಿವಶಂಕರ ಪಾರ್ವತಿ ರಮಣ …’ ತನ್ನ ಗಾಢ ತಪಸ್ಸನ್ನು ಭಂಗಗೊಳಿಸಿದ ಕಾಮದೇವನನ್ನು ಕೋಪದಿಂದ ತನ್ನ ಮೂರನೆಯ ಕಣ್ತೆರೆದು ಧಗಧಗಿಸಿದ ದೃಶ್ಯವನ್ನು ಪೂರ್ಣಿಮಾ ತಮ್ಮ ಕ್ರೋಧೋನ್ಮತ್ತ ‘ರೌದ್ರ’ ಮುಖಭಾವ- ಕೆಂಗಣ್ಣ ಅಭಿನಯ- ಶಕ್ತಿಶಾಲಿ ಆಂಗಿಕಗಳಲ್ಲಿ ಘನೀಕರಿಸಿದರು. ಅನಂತರ- ನಂಬಿದ ಮುಗ್ಧಭಕ್ತ ಪ್ರಹ್ಲಾದನನ್ನು ಕಾಯ್ದ ಶ್ರೀಹರಿಯ ಸಂಚಾರಿ ಹೃದಯಸ್ಪರ್ಶಿಯಾಗಿತ್ತು. ಕಲಾವಿದೆಯ ನರಸಿಂಹ ಮತ್ತು ಹಿರಣ್ಯಕಶಿಪುವಿನ ರೋಮಾಂಚಕ ಅಭಿನಯ ನೋಡುಗರಿಂದ ಮೆಚ್ಚುಗೆ ಚಪ್ಪಾಳೆ ಪಡೆಯಿತು. ದೈವ ಸಾಕ್ಷಾತ್ಕಾರವನ್ನು ಚಿತ್ರಿಸಿದ ‘ಯಮನೆಲ್ಲಿ ಕಾಣನೆಂದು ಹೇಳಬೇಡ’ ಎನ್ನುವ ಅಪೂರ್ವ ಅನುಭೂತಿ ನೀಡಿದ ಕೃತಿಯಲ್ಲಿ, ಸಂಕಷ್ಟದಲ್ಲಿ ಕಾಯ್ವ ಶ್ರೀರಾಮನೇ ದುಷ್ಟ ಸಂಹಾರಕ ಯಮನೂ ಆಗುತ್ತಾನೆಂಬ ಶ್ರೀರಾಮನ ದ್ವಿಮುಖದರ್ಶನ ಮಾಡಿಸಿ, ವೀರರಸವನ್ನು ಪ್ರಜ್ವಲ ಅಭಿನಯದಲ್ಲಿ ಸಾಕಾರಗೊಳಿಸಿದರು.

    ಗುಮ್ಮನಿಗೆ ಭಯಪಡುವ ಪುಟ್ಟ ಕೃಷ್ಣ ’ಗುಮ್ಮನ ಕರೆಯದಿರೆ’ ಎಂದು ಭಯಭೀತಗೊಂಡು ತಾಯಿಯನ್ನು ಗೋಗರೆವ ಮನೋಜ್ಞ ಸಂಚಾರಿ ದೃಶ್ಯಗಳಲ್ಲಿ ‘ಭಯಾನಕ’ ರಸವನ್ನು ಕಟ್ಟಿಕೊಡುತ್ತ, ‘ಏನು ಬರೆದೆಯೋ ಬ್ರಂಹ’ ಎಂದು ಬೇಸರಿಸಿ ಅಸಹ್ಯಿಸಿಕೊಳ್ಳುವ ಜೀವನದ ಹಲವು ಜುಗುಪ್ಸೆಯ ಸಂದರ್ಭದಲ್ಲಿ ಪೂರ್ಣಿಮಾ ‘ಭೀಭತ್ಸತೆ’ಯನ್ನು ಪ್ರಕಟಗೊಳಿಸುವರು. ಶ್ರೀಕೃಷ್ಣನ ಸಾಹಸಗಾಥೆಗಳಲ್ಲಿ ಪ್ರಮುಖವಾದ ಕಾಳಿಂಗಮರ್ಧನನ ಘಟನೆಯನ್ನು ಆಧರಿಸಿ ‘ಆಡಿದನೋ ರಂಗ ಅದ್ಭುತದಿಂದಲಿ…’ ಎಂದು ‘ಅದ್ಭುತ’ ರಸವನ್ನು ಅಭಿವ್ಯಕ್ತಿಸಿದರು. ಕೃತಿಯ ಪ್ರಾರಂಭದಲ್ಲಿ ಬಾಲಕೃಷ್ಣ ಹಾಗೂ ಅವನ ಗೆಳೆಯರು ಚೆಂಡಾಟ ಆಡುತ್ತ, ಅದು ಕಾಳಿಂದಿ ಮಡುವಿಗೆ ಬಿದ್ದಾಗ ಆಗುವ ಗಾಬರಿ- ಗೊಂದಲದ ಚಿತ್ರಣವನ್ನು ಕಲಾವಿದೆ, ಮಕ್ಕಳ ಜೊತೆ ಮಗುವಾಗಿ ಪ್ರತಿಸ್ಪಂದಿಸಿ, ಗಲಿಬಿಲಿಯಾಗುವ ಅಭಿನಯವನ್ನು ಸೊಗಸಾಗಿ ತೋರಿದರು.

    ಹೆಡೆ ಬಿಚ್ಚಿ ರೊಚ್ಚಿಗೆದ್ದ ಕಾಳಿಂಗನ ಹೊರಳಾಟ, ಸಡ್ಡು ಹೊಡೆದ ನರ್ತನಕ್ಕೆ ಸರಿಯಾಗಿ ಬಾಲಕೃಷ್ಣ ಅದನ್ನು ತಹಬಂದಿಗೆ ತರುವ, ಅದನ್ನು ನಿಯಂತ್ರಿಸಿ ಅದರ ಹೆಡೆಯ ಮೇಲೆ ಹತ್ತಿ ಕುಣಿವ ದಿಗ್ವಿಜಯದ ನಲಿವಿನ ಕುಣಿತ ಅದ್ಭುತವನ್ನು ಸೃಷ್ಟಿಸಿತು. ಮುಂದೆ- ಕುರುಕ್ಷೇತ್ರದ ರಣಾಂಗಣದ ದೃಶ್ಯದಲ್ಲಿ ಕೃಷ್ಣ ಮತ್ತು ಅರ್ಜುನರ ನಡುವಣ ಸಂವಾದ, ಕುಸಿದ ಅರ್ಜುನನಿಗೆ ಬಲತುಂಬುವ ಕೃಷ್ಣ, ಅವನ ಧೈರ್ಯದ ಬೆಂಬಲದಿಂದ ಅವನು ತನ್ನ ತಾತ ಭೀಷ್ಮನನ್ನು ಹೊಡೆದುರುಳಿಸುವ ದೃಶ್ಯದ ಅಭಿನಯ ಮನಮುಟ್ಟುವಂತಿತ್ತು. ಮುಂದಕ್ಕೆಲ್ಲ ವಿಷಾದವೇ. ಆದರೆ ’ನಾರಾಯಣ ನಿನ್ನ ನಾಮದ ಬಲ’ ಎಂದು ಸ್ಥಿರತೆ ಹಾಗೂ ಪ್ರಶಾಂತ ಮನಸ್ಥಿತಿಯ ದ್ಯೋತಕನಾದ ಮರಣದ ಶರಶಯ್ಯೆಯಲ್ಲಿರುವ ವೃದ್ಧ ಭೀಷ್ಮನ ಕಥಾ ದೃಶ್ಯದೊಂದಿಗೆ ಪೂರ್ಣಿಮಾ ಅಂತ್ಯದಲ್ಲಿ ‘ಶಾಂತ’ ರಸಭಾವ- ಸ್ಥಿತಪ್ರಜ್ಞ ಮುಖಭಾವವನ್ನು ತಮ್ಮ ಅಭಿನಯದಲ್ಲಿ ಕೇಂದ್ರೀಕರಿಸಿದರು.

    – ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

     

    article baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಶಕ್ತಿನಗರದ ಕಲಾಂಗಣನಲ್ಲಿ ‘ಎಸ್.ಬಿ.ಜಿ. ಟ್ರಾವೆಲ್ಸ್ ರೂಟ್ ನಂ.2’ ಕೊಂಕಣಿ ಹಾಸ್ಯ ನಾಟಕ | ಏಪ್ರಿಲ್ 06
    Next Article ಯಕ್ಷಧ್ರುವ ಪಟ್ಲ ಫೌಂಡೇಶನ್ ‘ದಶಮ ಸಂಭ್ರಮ’ದ ಆಮಂತ್ರಣ ಪತ್ರ ಬಿಡುಗಡೆ
    roovari

    1 Comment

    1. Poornima Rajini on April 5, 2025 11:24 am

      thank you soo much for your kind words mam 🙏🙏

      Reply

    Add Comment Cancel Reply


    Related Posts

    ಕಟಪಾಡಿ ವೇಣುಗಿರಿಯಲ್ಲಿ ‘ಭಜನಾ ವೈಭವ 2025’ ಸಾಂಪ್ರದಾಯಿಕ ಭಜನಾ ಸ್ಪರ್ಧೆ | ಜೂನ್ 22

    May 20, 2025

    ಸರಯೂ ಬಾಲಯಕ್ಷ ವೃಂದ ಮಕ್ಕಳ ಮೇಳದ ‘ಯಕ್ಷ ಪಕ್ಷ’ ರಜತ ಸಂಭ್ರಮ ಉದ್ಘಾಟನೆ

    May 20, 2025

    ನಿಡ್ಲೆಯಲ್ಲಿರುವ ಕರುಂಬಿತ್ತಿಲ್ ಮನೆಯಲ್ಲಿ ‘ಕರುಂಬಿತ್ತಿಲ್ ಶಿಬಿರ 2025’ | ಮೇ 20ರಿಂದ 25

    May 19, 2025

    ರಾಜ್ಯ ಮಟ್ಟದ ಕವನ ಮತ್ತು ಸಣ್ಣಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟ

    May 19, 2025

    1 Comment

    1. Poornima Rajini on April 5, 2025 11:24 am

      thank you soo much for your kind words mam 🙏🙏

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.