06 ಏಪ್ರಿಲ್ 2023, ಬೆಂಗಳೂರು: ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಅರ್ಪಿಸುವ ”ಮಂಜುನಾದ” ಸಂಗೀತ ಕಛೇರಿ ಮತ್ತು ”ಲಲಿತ ಕಲಾ ಪೋಷಕ ಮಣಿ -2022” ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 07-04-2023, ಶುಕ್ರವಾರ ಸಮಯ ಬೆಳಗ್ಗೆ ಗಂಟೆ 9:25ರಿಂದ 12:30ರವರೆಗೆ ಸೇವಾ ಸದನ ಸಭಾಂಗಣ, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ನಡೆಯಲಿದೆ.
ಪ್ರಸಿದ್ಧ ಸಂಗೀತಗಾರ ಡಾ. ರಾಜಕುಮಾರ್ ಭಾರತಿಯವರ ಮಾರ್ಗದರ್ಶನದಲ್ಲಿ ರಚಿತವಾದ ಐದು ಕೃತಿಗಳನ್ನು ಡಾ. ಡಿ. ವೀರೇಂದ್ರ ಹೆಗಡೆಯವರು ದಿನಾಂಕ 14-08-2022ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದ್ದರು. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ರಚಿಸಿದ ಸುಮಾರು 25 ಕೃತಿಗಳನ್ನು ಜನಪ್ರಿಯಗೊಳಿಸುವ ‘ಮಂಜುನಾದ’ ಯೋಜನೆಯ ಪ್ರಥಮ ಭಾಗ ಇದಾಗಿತ್ತು. ಇದೇ ಕೃತಿಗಳನ್ನು ಆಧರಿಸಿ ನಡೆಯುತ್ತಿರುವ 11ನೆಯ ಸಂಗೀತ ಕಛೇರಿ ಇದಾಗಿದೆ.
“ಮಂಜುನಾದ” ಸಂಗೀತ ಕಛೇರಿಯ ಹಾಡುಗಾರಿಕೆಯಲ್ಲಿ ಅದಿತಿ ಬಿ. ಪ್ರಹ್ಲಾದ್, ಬೆಂಗಳೂರು, ಶ್ರೇಯಾ ಕೊಳತ್ತಾಯ, ಸುರತ್ಕಲ್, ಉಷಾ ರಾಮಕೃಷ್ಣ ಭಟ್, ಮಣಿಪಾಲ, ದಿವ್ಯ ಶ್ರೀ, ಮಣಿಪಾಲ, ಕೆ. ಆಶ್ವೀಜಾ ಉಡುಪ, ಕಿನ್ನಿಗೋಳಿ, ನಮ್ರತ ಸತ್ಯನಾರಾಯಣನ್, ಚೆನ್ನೈ, ಶರಣ್ಯ ಕೆ.ಎನ್. ಸುರತ್ಕಲ್, ಸುಮೇಧಾ ಕೆ.ಎನ್. ಸುರತ್ಕಲ್, ವಯಲಿನ್ ನಲ್ಲಿ ಕಾರ್ತಿಕೇಯ ಆರ್. ಬೆಂಗಳೂರು, ಮೃದಂಗದಲ್ಲಿ ಕೌಶಿಕ್ ಶ್ರೀಧರ್, ಬೆಂಗಳೂರು ಸಹಕರಿಸದ್ದಾರೆ.
ಶ್ರೀರಾಮ ಲಲಿತ ಕಲಾಮಂದಿರ, ಬೆಂಗಳೂರು ಇದರ ಗೌರವ ಕಾರ್ಯದರ್ಶಿ, ಮೃದಂಗ ವಿದ್ವಾನ್ ಶ್ರೀ ಜಿ.ವಿ. ಕೃಷ್ಣಪ್ರಸಾದ್ ಇವರಿಗೆ ಈ ಬಾರಿಯ “ಲಲಿತ ಕಲಾ ಪೋಷಕ ಮಣಿ -2022” ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ‘ಕರ್ನಾಟಕ ಕಲಾಶ್ರೀ’ ‘ಗಾನ ಕಲಾಶ್ರೀ’ ಪ್ರಶಸ್ತಿ ಪುರಸ್ಕೃತ, ಪ್ರಬುದ್ಧ ಹಿರಿಯ ಮೃದಂಗ ವಾದಕರಾದ ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
“ಗಾನ ಕಲಾಭೂಷಣ” ಪುರಸ್ಕೃತ, ಪ್ರಬುದ್ಧ ಹಿರಿಯ ಸಂಗೀತ ವಿದ್ವಾಂಸರಾದ ವಿದ್ವಾನ್ ಡಾ.ಆರ್.ಕೆ.ಪದ್ಮನಾಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ‘ಗಾನ ಕಲಾಶ್ರೀ’, ‘ಲಯಕಲಾ ಪ್ರತಿಭಾಮಣಿ’ ಪುರಸ್ಕೃತ, ಪ್ರಬುದ್ಧ ಹಿರಿಯ ಮೃದಂಗ ವಾದಕರಾದ ವಿದ್ವಾನ್ ಎಚ್.ಎಸ್. ಸುಧೀಂದ್ರ ಅಭಿನಂದನಾ ನುಡಿಗಳನ್ನಾಡಲಿರುವರು.
ಎ. ಈಶ್ವರಯ್ಯ ಸಂಸ್ಕರಣಾ ಪ್ರಶಸ್ತಿಯನ್ನು ಕಳೆದ ಮೂರು ವರ್ಷಗಳಿಂದ ನೀಡುತ್ತಿದ್ದು, ಈ ಸಲದ ಪ್ರಶಸ್ತಿಯನ್ನು ಹೆಸರಾಂತ ಸಂಗೀತ ವಿದುಷಿ ಶ್ರೀಮತಿ ನೀಲಾ ರಾಮ್ ಗೋಪಾಲ್ ಅವರಿಗೆ ನೀಡುವುದೆಂದು ನಿಶ್ಚಯಿಸಲಾಗಿತ್ತು. ಆದರೆ ದಿನಾಂಕ 01-03-2023ರಂದು ಅವರು ವಿಧಿವಶರಾದ ಕಾರಣ ಈ ಕಾರ್ಯಕ್ರಮವನ್ನು ಅವರ ಸಂಸ್ಮರಣೆಗಾಗಿ ಸಮರ್ಪಿಸುತ್ತಿದ್ದು, ಡಾ. ಆರ್.ವಿ. ರಾಘವೇಂದ್ರ ವ್ಯವಸ್ಥಾಪಕ ಟ್ರಸ್ಟಿ, ಅನನ್ಯ, ಬೆಂಗಳೂರು ಇವರು ಶ್ರೀಮತಿ ನೀಲಾ ರಾಮ್ ಗೋಪಾಲ್ ಇವರ ಸಂಸ್ಮರಣ ಭಾಷಣವನ್ನು ಮಾಡಲಿದ್ದಾರೆ. ಶ್ರೀಮತಿ ಡಾ. ಮಣಿ ಕೃಷ್ಣಸ್ವಾಮಿ ಫೌಂಡೇಶನ್ ಚೆನ್ನೈಯ ಅಧ್ಯಕ್ಷರಾದ ಶ್ರೀ ಎಂ.ಕೆ. ಸುದರ್ಶನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಸಂಸ್ಥೆಯು ದಿನಾಂಕ 07-11-2004ರಂದು ಮಂಗಳೂರಿನಲ್ಲಿ ಉದ್ಘಾಟನೆಗೊಂಡು ಕರಾವಳಿ ಕರ್ನಾಟಕದ ಯುವ ಕಲಾವಿದರಿಗೆ ಮಾರ್ಗದರ್ಶನ, ಪ್ರೋತ್ಸಾಹ, ಅವಕಾಶ ನೀಡುವ ಉದ್ದೇಶವನ್ನಿರಿಸಿ ಪ್ರಾರಂಭದಿಂದಲೂ ಸಂಗೀತ ಕಛೇರಿಗಳು, ಕಾರ್ಯಾಗಾರ, ಉಪನ್ಯಾಸ, ಪ್ರಾತ್ಯಕ್ಷಿಕೆ, ಪ್ರಶಸ್ತಿ ಪ್ರದಾನ, ಸನ್ಮಾನ, ಸಂಗೀತೋತ್ಸವ ಹೀಗೆ ಹತ್ತು ಹಲವು ರೀತಿಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದು, ಇದು ಸಂಸ್ಥೆಯು ಬೆಂಗಳೂರಿನಲ್ಲಿ ಆಯೋಜಿಸುತ್ತಿರುವ ಪ್ರಪ್ರಥಮ ಕಾರ್ಯಕ್ರಮವಾಗಿದೆ.
ಈ ಕಾರ್ಯಕ್ರಮಕ್ಕೆ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಅಧ್ಯಕ್ಷರಾದ ಕ್ಯಾ.ಗಣೇಶ್ ಕಾರ್ಣಿಕ್, ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್, ಖಜಾಂಚಿಯಾದ ಆನಂದ ರಾವ್ ಪಿ., ನಿರ್ದೇಶಕರಾದ ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್, ಗೌರವ ಸಲಹಾ ಮಂಡಳಿ ಸದಸ್ಯರಾದ ಡಾ. ವಿ.ಅರವಿಂದ ಹೆಬ್ಬಾರ್ ಹಾಗೂ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಇವರು ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.