ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಯಕ್ಷಗಾನ ಹಿಮ್ಮೇಳ ತಜ್ಞ, ಯಕ್ಷಗಾನಶಾಸ್ತ್ರ ಪಠ್ಯಗಳ ಕೃತಿಕಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಗುರು ದಿ. ಬಿ. ಗೋಪಾಲಕೃಷ್ಣ ಕುರುಪ್ ಇವರಿಗೆ ‘ನುಡಿ ನಮನ -ಯಕ್ಷ ನಮನ’ ಕಾರ್ಯಕ್ರಮವು ದಿನಾಂಕ 05 ಏಪ್ರಿಲ್ 2025ರಂದು ಮಧ್ಯಾಹ್ನ ಘಂಟೆ 2.00ಕ್ಕೆ ಮಂಗಳೂರು ವಿ. ವಿ. ಯ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ.
ವಿ. ವಿ. ಕುಲಸಚಿವ ಕೆ. ರಾಜುಮೊಗವೀರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಶಿ, ವಿದ್ವಾಂಸ ಡಾ. ರಾಘವ ನಂಬಿಯಾರ್, ಹಾವೇರಿ ಜಾನಪದ ವಿ. ವಿ. ಇದರ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ, ವಿಶ್ರಾಂತ ಪ್ರಾಧ್ಯಾಪಕ ಡಾ. ಪ್ರಭಾಕರ ಶಿಶಿಲ ಮೊದಲಾದವರು ಭಾಗವಹಿಸಿ ನುಡಿನಮನ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗೋಪಾಲಕೃಷ್ಣ ಕುರುಪ್ ಅವರ ಶಿಷ್ಯವೃಂದದಿಂದ ‘ಯಕ್ಷ ನಮನ:’ ಪೂರ್ವ ರಂಗ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಲಿದ್ದು, ಚೆಂಡೆ -ಮದ್ದಳೆಯಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಸುಬ್ರಹ್ಮಣ್ಯ ಸಗ್ರಿತ್ತಾಯ, ಭಾಗವತಿಕೆಯಲ್ಲಿ ಯೋಗೀಶ್ ಶರ್ಮ, ಕಾರ್ತಿಕ್ ತಾಮಣ್‌ಕರ್ ಕೆದಿಹಿತ್ತು ಮೊದಲಾದವರು ಭಾಗವಹಿಸಲಿದ್ದಾರೆ.

