ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ. ಅವಿರತವಾದ ಸಾಧನೆ, ಸತತ ಅಭ್ಯಾಸ, ಅರ್ಪಣಾಭಾವಗಳಿಂದ ಮಾತ್ರ ಸಾಧ್ಯ. ಕಲಾವಿದನು ಪಾತ್ರವಾಗಬೇಕಾದರೆ ಅದರ ಸ್ವಭಾವವೇನೆಂದು ಅರಿತು ಅಭ್ಯಸಿಸಬೇಕು. ಆಳವಾದ ಅಧ್ಯಯನ ಅತ್ಯಗತ್ಯ. ಒಂದರ್ಥದಲ್ಲಿ ‘ಪರಕಾಯ ಪ್ರವೇಶ’. ಇಲ್ಲವಾದರೆ ಪಾತ್ರವು ಪೇಲವವಾಗುವುದನ್ನು ನಾವು ಕಾಣಬಹುದು. ಹೀಗೆ ಸತತ ಪರಿಶ್ರಮದಿಂದ, ಅಧ್ಯಯನದಿಂದ ಉತ್ತಮ ವೇಷಧಾರಿಯಾಗಿ ಹೆಸರನ್ನು ಗಳಿಸಿಕೊಂಡವರು ವೈ ಎಲ್ ವಿಶ್ವರೂಪ ಮಧ್ಯಸ್ಥ.
07.04.1989ರಂದು ಶ್ರೀಯುತ ವೈ ಲಕ್ಷ್ನೀನಾರಾಯಣ ಮಧ್ಯಸ್ಥ ಹಾಗೂ ಶ್ರೀಮತಿ ಮಂಜುಳ ಇವರ ಮಗನಾಗಿ ಜನನ. ಬಿ ಕಾಂ ಇವರ ವಿದ್ಯಾಭ್ಯಾಸ. ತಂದೆ ವೈ ಲಕ್ಷ್ನೀನಾರಾಯಣ ಮಧ್ಯಸ್ಥ ಅವರ ಪ್ರೇರಣೆಯಿಂದ ವಿಶ್ವರೂಪ ಅವರು ಯಕ್ಷಗಾನ ರಂಗಕ್ಕೆ ಬಂದರು.
ಶ್ರೀಯುತ ರಾಧಾಕೃಷ್ಣ ನಾಯ್ಕ ಚೇರ್ಕಾಡಿ, ಶ್ರೀಯುತ ಗಣೇಶ ನಾಯ್ಕ ಚೇರ್ಕಾಡಿ, ಶ್ರೀಯುತ ಹಿರಿಯಣ್ಣ ಶೆಟ್ಟಿಗಾರ್, ಮಂದಾರ್ತಿ ಇವರ ಬಡಗುತಿಟ್ಟು ಯಕ್ಷಗಾನ ಗುರುಗಳು. ಶ್ರೀಯುತ ಮಹೇಶ್ ಕುಮಾರ್ ಸಾಣೂರು ಬಳಿ ತೆಂಕುತಿಟ್ಟು ಯಕ್ಷಗಾನ ಕಲಿಕೆ. ಶ್ರೀಯುತ ಕೃಷ್ಣಸ್ವಾಮಿ ಜೋಷಿ ಬ್ರಹ್ಮಾವರ ಬಳಿ ಯಕ್ಷಗಾನ ಬಣ್ಣಗಾರಿಕೆಯನ್ನು ಕಲಿತಿರುತ್ತಾರೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಪದ್ಯ ಪುಸ್ತಕ ಓದುವುದು, ನುರಿತ ಕಲಾವಿದರೊಂದಿಗೆ ಚರ್ಚೆ, ಪ್ರಸಂಗದ ಕುರಿತು ವೀಡಿಯೋ ವೀಕ್ಷಿಸುವುದು ಹಾಗೂ ಪ್ರಸಂಗದ ಕುರಿತು ಮಾಹಿತಿ ಮೆಲಕು ಹಾಕಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ವಿಶ್ವರೂಪ ಅವರು ಹೇಳುತ್ತಾರೆ.
ದಕ್ಷಯಜ್ಞ, ಭಸ್ಮಾಸುರ ಮೋಹಿನಿ, ಕಾಳಿದಾಸ, ದೇವಿ ಮಹಾತ್ಮೆ, ದ್ರೌಪದಿ ಪ್ರತಾಪ ಇತ್ಯಾದಿ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ನಿಮ್ಮ ನೆಚ್ಚಿನ ವೇಷಗಳು:-
ಸ್ತ್ರೀ ಪಾತ್ರಗಳು:- ಅಂಬೆ, ದಾಕ್ಷಾಯಿಣಿ, ಸೀತೆ, ಸತ್ಯಭಾಮೆ, ಪ್ರಭಾವತಿ, ದೇವಿ, ಚಂದ್ರಮತಿ, ಮೋಹಿನಿ.
ಪುರುಷ ಪಾತ್ರಗಳು:- ಭೀಮ, ಧರ್ಮರಾಯ, ಕೌರವ, ಕರ್ಣ, ಕೃಷ್ಣ, ಜಾಂಬವಂತ, ನಾರದ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಮೊದಲಿನ ಯಕ್ಷಗಾನಕ್ಕು ಈಗಿನ ಯಕ್ಷಗಾನಕ್ಕು ಬಹಳಷ್ಟು ವ್ಯತ್ಯಾಸಗಳಿಸುವೆ. ಡಾ.ದ ರಾ ಬೇಂದ್ರೆಯವರ ಮಾತಿನಂತೆ “ಎಲ್ಲಿಯವರೆಗೆ ರಸಿಕತೆ ಕಲಾರಸಿಕರಲ್ಲಿ ಇರುತ್ತದೆಯೊ ಅಲ್ಲಿಯವರೆಗೆ ಕಲೆ ಶ್ರೀಮಂತವಾಗಿ ಹಾಗೂ ಕಲಾವಿದರು ಜೀವಂತವಾಗಿ ಇರುತ್ತಾರೆ.
ಇತ್ತೀಚಿನ ಜನಮಾನಸದಲ್ಲಿ ಹಾಗೂ ಯುವಕರಲ್ಲಿ ಕಲೆಯ ಮೇಲಿನ ಪ್ರೀತಿ ಹಾಗೂ ಆಸೆ ಬೆಳೆಯುತ್ತಿರುವುದು ಮೆಚ್ಚುವಂತಹ ವಿಚಾರ. ಈ ಪ್ರೀತಿ ಹಾಗೂ ಅಭಿಮಾನ ಯಕ್ಷಗಾನ ಪ್ರಾಕಾರದ ಮೇಲೆ ಇನ್ನಷ್ಟು ಬೆಳೆಯಲಿ ಎಂಬುದು ನನ್ನ ಕೋರಿಕೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಪರಿಪೂರ್ಣ ಕಲಾವಿದನಾಗುವ ಬಯಕೆ ಹಾಗೂ ಎಲ್ಲಾ ಪಾತ್ರಗಳನ್ನು ಸಮರ್ಪಕವಾಗಿ ನಿಭಾಯಿಸುವ ಆಸೆ. ಯಕ್ಷರಂಗಕ್ಕೆ ಮತ್ತಷ್ಟು ಆಸಕ್ತ ವಿದ್ಯಾರ್ಥಿಗಳನ್ನು ತಯಾರಿ ಮಾಡುವ ಬಯಕೆ.
ವೈ.ಎಲ್.ವಿಶ್ವರೂಪ ಮಧ್ಯಸ್ಥ ಅವರಿಗೆ ಸಿಕ್ಕಿರುವ ಸನ್ಮಾನ, ಪ್ರಶಸ್ತಿ ಹಾಗೂ ಬಿರುದುಗಳು:-
ಯಕ್ಷ ಅಭಿನಯ ಶಾರದೆ.
ಯಕ್ಷ ನಾಟ್ಯ ಶಾಂತಲ.
ನಾಟ್ಯ ಕಲಾಚತುರ.
ಯಕ್ಷ ಕಲಾ ಕುಸುಮ.
ಯಕ್ಷ ಮೋಹಕಚಲುವೆ.
ನೃತ್ಯಕಲಾಸಿಂಧು.
ಯಕ್ಷ ನಾಟ್ಯ ಮಯೂರಿ.
ಯಕ್ಷ ಸಿಂಚನ.
ಸಿಗಂದೂರು, ಮಡಾಮಕ್ಕಿ, ಸೌಕೂರು, ಹಟ್ಟಿಯಂಗಡಿ, ಬಪ್ಪನಾಡು, ಹಿರಿಯಡಕ, ನೀಲಾವರ, ಮೇಗರವಳ್ಳಿ, ಬೋಳಂಬಳ್ಳಿ, ಗುತ್ತ್ಯಮ್ಮ ಮೇಳದಲ್ಲಿ ತಿರುಗಾಟವನ್ನು ಮಾಡಿರುತ್ತಾರೆ ವೈ.ಎಲ್.ವಿಶ್ವರೂಪ ಮಧ್ಯಸ್ಥ.
ಪುಸ್ತಕ ಓದುವುದು, ಯಕ್ಷಗಾನ ವಿಡಿಯೋ ವೀಕ್ಷಣೆ ಹಾಗೂ ಯಕ್ಷಗಾನ ನೋಡುವುದು, ಸಂಗೀತ ಹಾಗೂ ಸಾಹಿತ್ಯ ವಿಹಾರ ಇವರ ಹವ್ಯಾಸಗಳು
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು