ಬ್ರಹ್ಮಾವರ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಬ್ರಹ್ಮಾವರ ಇವರ ನಾಲ್ಕನೇ ವರ್ಷದ ರಂಗೋತ್ಸವದ ಸಮಾರೋಪ ಸಮಾರಂಭವು ದಿನಾಂಕ 06 ಏಪ್ರಿಲ್ 2025ರಂದು ಬ್ರಹ್ಮಾವರದ ನಿರ್ಮಲ ಆಂಗ್ಲ ಮಾಧ್ಯಮ ಶಾಲಾ ವೇದಿಕೆ ಹೋಲಿ ಫ್ಯಾಮಿಲಿ ಚರ್ಚ್ ವಠಾರದಲ್ಲಿ ನಡೆಯಿತು.
ರಂಗೋತ್ಸವದ ಎರಡನೇ ದಿನ ವಿಶೇಷವಾಗಿ ಮಕ್ಕಳಿಗಾಗಿ ಮೀಸಲಿಟ್ಟಿದ್ದು, ಎಸ್.ಎಮ್.ಎಸ್. ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಆಶಯಗೀತೆ ಕಾರ್ಯಕ್ರಮ ನಡೆದು ಬಳಿಕ ‘ಧಮನಿ’ ಟ್ರಸ್ಟ್ (ರಿ.) ತಂಡದ ಮಕ್ಕಳ ಅಭಿನಯದ ರಂಜಿತ್ ಶೆಟ್ಟಿ ಕುಕ್ಕುಡೆ ನಿರ್ದೇಶನದ ‘ಸೂರ್ಯ ಬಂದ’ ನಾಟಕ ಪ್ರದರ್ಶನಗೊಂಡಿತು.
‘ರಂಗೋತ್ಸವ’ದ ಮೂರನೇ ದಿನದ ಅತಿಥಿಯಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ಹಾಗೂ ಕವಿ ಶ್ರೀ ಕಿಶೋರ್ ಗೊನ್ಸಾಲ್ವೆಸ್ ಮುಖ್ಯ ಅತಿಥಿಯಾಗಿ ಮಾತನಾಡಿ “ರಂಗಭೂಮಿ ಗುರಿತಪ್ಪಿಸುವ ವಿಚಲನೆ ಅಲ್ಲ. ಅದೊಂದು ಕನ್ನಡಿ, ಮುಖಸ್ಥುತಿ ಮಾಡದ, ತಿರುಚಿಸದ, ಸುಳ್ಳು ಹೇಳದ ದಾಕ್ಷಿಣ್ಯವಿಲ್ಲದ ಕನ್ನಡಿ, ಇದ್ದ ಹಾಗೇ ಪ್ರತಿಬಿಂಬಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಸಭಾ ಕಾರ್ಯಕ್ರಮದ ಬಳಿಕ ಮಂದಾರ ತಂಡದ ಹೊಸ ಪ್ರಸ್ತುತಿಯಾದ ರೋಹಿತ್ ಎಸ್. ಬೈಕಾಡಿ ನಿರ್ದೇಶನದ ‘ಬೆತ್ತಲಾಟ’ ನಾಟಕ ಪ್ರದರ್ಶನಗೊಂಡಿತು. ಹೀಗೆ ಮೂರು ದಿನದ ಮಂದಾರ ರಂಗೋತ್ಸವದಲ್ಲಿ ಅನೇಕ ರಂಗಕರ್ಮಿಗಳು, ಕಲಾಭಿಮಾನಿಗಳು ಭಾಗವಹಿಸಿದರು.