07 ಏಪ್ರಿಲ್ 2023, ಉಡುಪಿ: ರಥಬೀದಿ ಗೆಳೆಯರು (ರಿ.) ಉಡುಪಿ ಸಾಂಸ್ಕೃತಿಕ ಸಂಘಟನೆಯ ಆಶ್ರಯದಲ್ಲಿ ಹಿರಿಯ ಅಂಕಣಕಾರ ಡಾ. ಬಿ. ಭಾಸ್ಕರ ರಾವ್ ಇವರ “ಸಾರ್ವಕಾಲಿಕ” ಪುಸ್ತಕ ಬಿಡುಗಡೆ ಸಮಾರಂಭವನ್ನು ದಿನಾಂಕ 09-04-2023 ಭಾನುವಾರ ಸಂಜೆ 4-30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜು, ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಪುಸ್ತಕದ ಲೋಕರ್ಪಣೆಯನ್ನು ಹಿರಿಯ ಸಾಹಿತಿಗಳಾದ ಡಾ. ನಾ.ಮೊಗಶಾಲೆಯವರು ನೆರವೇರಿಸಲಿದ್ದು, ಶಿಕ್ಷಣ ತಜ್ಞರು, ಲೇಖಕರು ಡಾ. ಮಹಾಬಲೇಶ್ವರ ರಾವ್ ಇವರು ಕೃತಿಯ ಬಗ್ಗೆ ಮಾತನಾಡಲಿದ್ದಾರೆ. ಪುಸ್ತಕದ ಲೇಖಕರಾದ ಡಾ. ಬಿ. ಭಾಸ್ಕರ ರಾವ್ ಇವರ ಉಪಸ್ಥಿತಿಯಲ್ಲಿ ಶ್ರೀ. ಜಿ.ಪಿ. ಪ್ರಭಾಕರ ತುಮರಿಯವರು ಕಾರ್ಯಕ್ರಮ ಸಂಯೋಜನೆ ಮಾಡಲಿದ್ದಾರೆ.
ಲೇಖಕರ ಕುರಿತು :
ಕನ್ನಡದ ಸುಪ್ರಸಿದ್ದ ಅಂಕಣಕಾರರು ಹಾಗೂ ಸಂಸ್ಕೃತಿ ವಿಮರ್ಶಕರಾಗಿರುವ ಡಾ. ಬಿ. ಭಾಸ್ಕರ ರಾವ್ ಹೈದರಾಬಾದ್ ನ ಇಂಗ್ಲೀಷ್ ಆ್ಯಂಡ್ ಫಾರಿನ್ ಲಾಂಗ್ವೇಜಸ್ ಯುನಿವರ್ಸಿಟಿ ಮತ್ತು ಇಂಗ್ಲೆಂಡ್ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದು ಮೂರು ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ನಲ್ವತ್ತು ವರ್ಷಗಳ ಕಾಲ ಇಂಗ್ಲೀಷ್ ಭಾಷಾ ತಜ್ಞರಾಗಿ ಕೆಲಸ ಮಾಡಿದ್ದಾರೆ. ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದಿಂದ ಅನ್ವಯಿಕ ಭಾಷಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಇಂಜಿನಿಯರಿಂಗ್‌ನ ವಿವಿಧ ಶಾಖೆಗಳ ಹಾಗೂ ಬ್ಯುಸಿನೆಸ್ ಮೆನೇಜ್ಮೆಂಟ್ ನ ಹದಿನೆಂಟು ಪಿ.ಎಚ್.ಡಿ. ಮಹಾಪ್ರಬಂಧಗಳ ಸಂಪಾದನ ಮಾಡಿದ್ದಾರೆ. ಪ್ಲೇಟೂವಿನ ದಿ ರಿಪಬ್ಲಿಕ್, ಕೌಟಿಲ್ಯನ ಅರ್ಥಶಾಸ್ತ್ರ, ಮನುಸ್ಮೃತಿ, ಥಾಮಸ್ ಹಾಬ್ಸ್ ನ ಲವಾಯಿತನ್ ಮತ್ತು ಗರುಡ ಪುರಾಣದ ಪೋಸ್ಟ್- ಡಾಕ್ಟೋರಲ್ ತೌಲನಿಕ ಅಧ್ಯಯನದ ಜತೆಗೆ ಬೈಬಲ್, ಭಗವದ್ಗೀತೆ, ಕುರಾನ್ ಹಾಗೂ ಉಪನಿಷತ್ ಗಳಲ್ಲಿರುವ ಸಾಮ್ಯತೆಗಳಲ್ಲಿ ಧೀಮಂತ ಆಸಕ್ತಿ ಹೊಂದಿರುವ ವಿದ್ವಾಂಸ ಇವರು. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಹತ್ವ ಇರುವ ಮೂರು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಇವರ ಎರಡು ಕೃತಿಗಳು ಪ್ರಕಟವಾಗಿದ್ದು ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆಗಾಗಿ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಗೌರವ ಫೆಲೋಶಿಪ್ ಪಡೆದಿರುವುದಲ್ಲದೇ ಹಲವು ಸಮಾರಂಭಗಳಲ್ಲಿ ಗೌರವಿಸಲ್ಪಟ್ಟಿದ್ದಾರೆ.