ಮಂಗಳೂರು: ಅಗಲಿದ ಹಿರಿಯ ಯಕ್ಷಗಾನ ಕಲಾವಿದ, ಐತಿಹಾಸಿಕ ಕರ್ನಾಟಕ ಮೇಳದಲ್ಲಿ ಸುದೀರ್ಘ ತಿರುಗಾಟ ಮಾಡಿದ ನವರಸ ನಾಯಕ ಬೆಜ್ಜದಗುತ್ತು ದಿ. ಪುಳಿಂಚ ರಾಮಯ್ಯ ಶೆಟ್ಟರ ಸ್ಮರಣಾರ್ಥ ಮೂರು ವರ್ಷಕ್ಕೊಮ್ಮೆ ನೀಡಲಾಗುವ ‘ಪುಳಿಂಚ ಪ್ರಶಸ್ತಿ’ಗೆ ಈ ಬಾರಿ ಯಕ್ಷಗಾನದ ಮೂವರು ಪ್ರಸಿದ್ಧ ಕಲಾವಿದರನ್ನು ಆಯ್ಕೆಮಾಡಲಾಗಿದೆ. ತೆಂಕುತಿಟ್ಟಿನ ಹಿರಿಯ ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ, ಗೋಣಿಬೀಡು ಸಂಜಯಕುಮಾರ್ ಶೆಟ್ಟಿ ಮತ್ತು ಮಿಜಾರು ತಿಮ್ಮಪ್ಪ ಅವರುಗಳನ್ನು 2023-25ನೇ ಸಾಲಿನ ಪುಳಿಂಚ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪುಳಿಂಚ ಶ್ರೀಧರ ಶೆಟ್ಟಿ ತಿಳಿಸಿದ್ದಾರೆ
ಇದೇ ಸಂದರ್ಭದಲ್ಲಿ ದಿ. ಬಂಟ್ವಾಳ ಜಯರಾಮ ಆಚಾರ್ಯರಿಗೆ ಮರಣೋತ್ತರವಾಗಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 25,000 ನಗದನ್ನು ಒಳಗೊಂಡಿದೆ. ದಿನಾಂಕ 04 ಮೇ 2025 ರಂದು ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಚೆಂಡೆ ಶ್ರೀ ಕಲ್ಲುರ್ಟಿ ದೈವಸ್ಥಾನದ ಪುನಃ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ ಮತ್ತು ತ್ರೈ ಮಾಸಿಕ ಕೋಲೋತ್ಸವದ ಸಂದರ್ಭ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಸಲಹೆಗಾರ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.