ಕನ್ನಡ ಸಾಹಿತ್ಯಕ್ಕೆ ಸೊಗಸು ಮೂಡಿಸಿದ ವೈಶಿಷ್ಟ್ಯ ಪೂರ್ಣ ಹಾಸ್ಯಕ್ಕೆ ಮತ್ತೊಂದು ಹೆಸರಾದ ಬೀಚಿಯವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರು. ಇವರು ಆರ್. ಶ್ರೀನಿವಾಸ ರಾಯರು ಮತ್ತು ಭಾರತಮ್ಮ ದಂಪತಿಗಳ ಸುಪುತ್ರ 1913 ಏಪ್ರಿಲ್ 23 ರಲ್ಲಿ ಜನಿಸಿದ ಇವರ ಮೂಲ ಹೆಸರು ರಾಯಸಂ ಭೀಮಸೇನರಾವ್ ಆದರೂ ಜನಮಾನಸದಲ್ಲಿ ಬೀಚಿ ಎಂದೇ ಚಿರಸ್ಥಾಯಿಯಾದವರು.
ಆರು ವರ್ಷದ ಎಳವೆಯಲ್ಲಿ ತಾಯನ್ನು ಕಳಕೊಂಡ ಇವರು ಅವರಿವರಿಂದ ಶಾಲಾ ಶುಲ್ಕವನ್ನು ಸಂಗ್ರಹಿಸಿ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಅಲ್ಲಿ ಇಲ್ಲಿ ಏನೇನೋ ಕೆಲಸಗಳನ್ನು ಮಾಡಿ ಕೊನೆಗೆ 1931 ರಲ್ಲಿ ತಮ್ಮ 19ನೆಯ ವಯಸ್ಸಿನಲ್ಲಿ ಪೊಲೀಸ್ ವಿಭಾಗದಲ್ಲಿ ಜವಾನ ಆಗಿ ಉದ್ಯೋಗ ಜೀವನಕ್ಕೆ ಪಾದಾರ್ಪಣೆ ಮಾಡಿದರು. 1933ರಲ್ಲಿ ಸೀತಾಬಾಯಿಯವರು ಇವರ ಜೀವನ ಸಂಗಾತಿಯಾದರು ಮುಂದೆ ಉದ್ಯೋಗದಲ್ಲಿ ಬಡ್ತಿ ಹೊಂದಿ ರಾಜ್ಯಕ್ಕೆ ಒಂದೇ ಹುದ್ದೆಯಾದ ಪೊಲೀಸ್ ಹುದ್ದೆಯ ಸೂಪರಿಂಟೆಂಡೆಂಟ್ ಸ್ಪೆಷಲ್ ಬ್ರಾಂಚ್ ಸಿ. ಐ. ಡಿ. ಬೆಂಗಳೂರು ಹುದ್ದೆಯನ್ನು ಅಲಂಕರಿಸಿದರು. ಬೆಳೆದದ್ದು ತೆಲುಗು ವಾತಾವರಣ ಮನೆ ಮಾತು ಕನ್ನಡ ಇದರೊಂದಿಗೆ ಸಂಸ್ಕೃತವನ್ನು ಅಭ್ಯಾಸ ಮಾಡಿದ್ದು ಭಾಷೆಗಳ ಕಲಿಕೆಯ ಬಗೆಗಿನ ತುದಿತಕ್ಕೆ ಸಾಕ್ಷಿಯಾಗಿದೆ. “ದಡ್ಡರು ಮಾತ್ರ ಕನ್ನಡ ಓದುತ್ತಾರೆ” ಎಂಬ ಬೀಚಿಯವರ ಭಾವನೆಯನ್ನು ಅ. ನ. ಕೃ. ಅವರ ‘ಸಂಧ್ಯಾ ರಾಗ’ ಕಾದಂಬರಿ ಬದಲಿಸಿತು. ಇದರಿಂದ ಕನ್ನಡದ ಬಗೆಗೆ ತನ್ನೊಳಗೆ ಒಲವಿದೆ ಎಂದು ತಿಳಿದುಕೊಂಡ ಬೀಚಿ ಅ. ನ. ಕೃ. ರನ್ನು ಗುರುವಿನ ಸ್ಥಾನದಲ್ಲಿಟ್ಟು ಗೌರವಿಸಿದರು.
ಆಂಗ್ಲ ಭಾಷೆಯಲ್ಲಿ ಬರೆಯುತ್ತಿದ್ದ ಬೀಚಿಯವರ ಕನ್ನಡದ ಮೊದಲ ಕೃತಿಗೆ ಶಂಭಾ ಜೋಶಿ ಅವರು ಪ್ರಕಾಶಕರನ್ನು ಒದಗಿಸಿದರು. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಒಲವಿದ್ದ ಕಾರಣ ತಮ್ಮ ಕಾವ್ಯನಾಮದಲ್ಲಿ ಕನ್ನಡ ಇಂಗ್ಲಿಷ್ ಎರಡು ಬರುವಂತೆ ಬೀChi ಎಂದು ಬರೆಯುತ್ತಿದ್ದರು. 1954ರಲ್ಲಿ ಪ್ರಕಟಗೊಂಡ ಕನ್ನಡದ ಹಾಸ್ಯ ಪ್ರಧಾನ ಕಾದಂಬರಿ ‘ದಾಸ ಕೂಟ’ ಇವರಿಗೆ ಖ್ಯಾತಿಯನ್ನು ತಂದು ಕೊಟ್ಟಿತು. ‘ಸತೀ ಸೂಳೆ’, ‘ಸರಸ್ವತಿ ಸಂಹಾರ’, ‘ಖಾದಿ ಸೇವೆ’, ‘ಬೆಂಗಳೂರು ಬಸ್ಸು’, ’ದೇವನ ಹೆಂಡ’, ‘ಬ್ರಹ್ಮಚಾರಿಯ ಮಗ’, ‘ಸತ್ತವನು ಎದ್ದು ಬಂದಾಗ’, ‘ಏರದ ಬಳೆ’, ‘ಮೇಡಮ್ಮನ ಗಂಡ’, ‘ಟೆಂಟ್ ಸಿನಿಮಾ’, ‘ಆರಿದ ಚಹಾ’, ‘ಬಿತ್ತಿದ್ದೇ ಬೇವು’ ಹೇಗೆ 30ಕ್ಕೂ ಹೆಚ್ಚು ಕಾದಂಬರಿಗಳನ್ನು ಇವರು ಬರೆದಿದ್ದಾರೆ. ಇವರ ಬರಹಗಳನ್ನು ಕಾದಂಬರಿ ನಾಟಕ ಕಥೆ ಹರಟೆ ಪದ್ಯ ಎಂದು ವಿಭಾಗ ಮಾಡಬಹುದು. ಕಾದಂಬರಿಗಳನ್ನು ಸೇರಿಸಿ ಇವರು ಸುಮಾರು 66 ಕೃತಿಗಳನ್ನು ರಚಿಸಿದ್ದಾರೆ ಇವುಗಳಲ್ಲಿ 35 ಕಾದಂಬರಿಗಳೇ ಇವೆ. ಉಳಿದವುಗಳು ರೇಡಿಯೋ ನಾಟಕಗಳು ವಿನೋದ ಬರಹಗಳು ಸಣ್ಣ ಕಥೆ ಹರಟೆ ಸೇರಿವೆ. 1980ರಲ್ಲಿ ದೀಪಾವಳಿ ಸಂಚಿಕೆಯಲ್ಲಿ ಬರೆದ ‘ಸ್ಪೂರ್ತಿ’ಎಂಬ ಲೇಖನ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊನೆಯ ಲೇಖನವಾಗಿತ್ತು. ‘ಕನ್ನಡ ಸಾಹಿತ್ಯದ ಬರ್ನಾಡ್ ಶಾ’ ಎಂದು ಕರೆಸಿ ಕೊಳ್ಳತ್ತಿದ್ದ ಬೀಚಿಯವರು 1980 ಡಿಸೆಂಬರ್ 07 ರಂದು ಇಹದಿಂದ ದೂರವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಹಾಸ್ಯ ಸಾಹಿತ್ಯದಿಂದಾಗಿ ಜೀವಂತವಾಗಿ ಉಳಿದವರು.
ಅಗಲಿದ ಆತ್ಮಕ್ಕೆ ಅನಂತ ನಮನ
-ಅಕ್ಷರೀ