ಎಪ್ರಿಲ್ 10, ಮುಂಬಯಿ: “ವಿಶ್ವ ರಂಗ ದಿನವನ್ನು ಕನ್ನಡ ಕಲಾ ಕೇಂದ್ರದ ಕಚೇರಿಯಲ್ಲಿ ಯಾಕೆ ಆಚರಿಸಬಾರದು ಎಂಬ ನಮ್ಮ ಮನದಿಚ್ಚೆಗೆ ಇಂತಹ ಅಭೂತಪೂರ್ವ ಸ್ಪಂದನೆ ಸಿಗುತ್ತದೆ ಎನ್ನುವ ಕಲ್ಪನೆ ಇದ್ದಿರಲಿಲ್ಲ. ವಿಶ್ವ ರಂಗಭೂಮಿ ದಿನವನ್ನು ವಿಶ್ವಾದ್ಯಂತ ಮಾರ್ಚ್ 27ರಂದು ಆಚರಿಸಲಾಗುತ್ತದೆ. ರಂಗಭೂಮಿಯ ವೈವಿಧ್ಯಮಯ ಕೊಡುಗೆಗಳನ್ನು ಆಚರಿಸಲು ಇದು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಕನ್ನಡಕಲಾ ಕೇಂದ್ರವು ಕಳೆದ ಆಗಸ್ಟ್ ತಿಂಗಳಲ್ಲಿ ಆಚರಿಸಿದ ನಾಟಕೋತ್ಸವದಲ್ಲಿ ಒಂದು ಕನ್ನಡ ನಾಟಕ, ಒಂದು ತುಳು ನಾಟಕ, ಒಂದು ರೂಪಕ ಮತ್ತು ಒಂದು ತಾಳಮದ್ದಲೆ ನಡೆಸಿ ವೈವಿಧ್ಯಮಯ ಕಾರ್ಯಕ್ರಮ ನೀಡಿದೆ ಎನ್ನುವುದಕ್ಕೆ ಸಂತೋಷವಾಗುತ್ತದೆ . ಮುಂಬಯಿ ಯ ನಾಟಕ ನಿರ್ದೇಶಕರು ಪ್ರಭುದ್ಧರಾಗಿದ್ದು ಕನ್ನಡಕಲಾ ಕೇಂದ್ರದ ನಾಟಕೋತ್ಸವಕ್ಕೆ ವರ್ಷಕ್ಕೆ ಒಂದಾದರೂ ನಾಟಕ ನೀಡುವ ಮೂಲಕ ನಮ್ಮ ನಾಟಕೋತ್ಸವದ ಯಶಸ್ಸಿನಲ್ಲಿ ಪಾಲ್ಗೊಳ್ಳಬೇಕು” ಎಂದು ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಮಧುಸೂದನ್ ಟಿ ಆರ್ ಹೇಳಿದರು.
ಏಪ್ರಿಲ್ 8ರಂದು ಸಂಜೆ ಕನ್ನಡ ಕಲಾ ಕೇಂದ್ರದ ಸಾಯನ್ ನಲ್ಲಿರುವ ಕಚೇರಿಯಲ್ಲಿ ವಿಶ್ವರಂಗ ದಿನಾಚರಣೆ ನಿಮಿತ್ತ ಏರ್ಪಡಿಸಲಾಗಿದ್ದ ರಂಗ ಸಂವಾದ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಅವರು ಮಾತಾಡುತ್ತಿದ್ದರು. ರಂಗ ಅನುಭವ ವಿಷಯಕ್ಕೆ ಸಂಬಂಧಿಸಿದ ರಂಗ ಕಲಾವಿದ ಸಂಘಟಕ ಡಾಕ್ಟರ್ ಸುರೇಂದ್ರ ಕುಮಾರ್ ಹೆಗ್ಡೆ “ಯೋಗಾನು ಯೋಗವೋ ಎಂಬಂತೆ ಕೆಲವು ವರ್ಷಗಳ ಹಿಂದೆ ಕನ್ನಡ ಕಲಾ ಕೇಂದ್ರ ಏರ್ಪಡಿಸಿದ್ದ ಪ್ರಥಮ ಅಂತರ್ ಕಾಲೇಜು ನಾಟಕ ಸ್ಪರ್ಧೆ ‘ಮರ್ಡರ್ ಆಫ್ ಗಾಡ್’ ನಲ್ಲಿ ನಮ್ಮ ನಾಟಕ ತಂಡ ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ರಂಗಭೂಮಿ ಎನ್ನುವುದು ನಾಟಕಕ್ಕೆ ಮಾತ್ರ ಸೀಮಿತ ಅಲ್ಲ. ನಾಟಕ, ಯಕ್ಷಗಾನ, ಜಾನಪದ, ನೃತ್ಯ , ಸಂಗೀತ , ಚಿತ್ರಕಲೆಯೂ ಇದರಲ್ಲಿ ಸಮಾವೇಶಗೊಳ್ಳುತ್ತದೆ. ಸುಮಾರು 50 ವರ್ಷ ಹಿಂದಿನ ಮತ್ತು ಇಂದಿನ ಕಲಾವಿದರ ಪರಿಸ್ಥಿತಿಯಲ್ಲಿ ತುಂಬಾ ಬದಲಾವಣೆ ಉಂಟಾಗಿದೆ. ಹಿಂದೆ ಪುರುಷರೇ ಸ್ತ್ರೀ ಪಾತ್ರ ಮಾಡುತ್ತಿದ್ದರು. ತಾಲಿಮಿಗೆ ಶಿಸ್ತಿನಿಂದ ಬರುತ್ತಿದ್ದರು. ಅವರಲ್ಲಿ ಕಲಿಯುವ ಆಸಕ್ತಿ ಹೆಚ್ಚು ಇತ್ತು. ಅಂದಿನ ಕಾಲದಲ್ಲಿದ್ದ ಪರದೆ ನಾಟಕಗಳ ಕಲಾವಿದರೇ ಹೆಚ್ಚಿನ ಹೊಣೆಯನ್ನು ಹೊರುತ್ತಿದ್ದರು. ನೇಪತ್ಯವನ್ನು ಅವರೇ ಸಂಬಾಳಿಸುತ್ತಿದ್ದರು. ತಾವು ಓರ್ವ ಪರಿಪೂರ್ಣ ಕಲಾವಿದರು ಎಂದು ಅವರು ಎಂದೂ ಹೇಳಿಕೊಳ್ಳುತ್ತಿರಲಿಲ್ಲ. ಇಂದಿನ ಕಲಾವಿದ ತಾನು ಬೆಳೆದಿದ್ದೇನೆ ಎಂದು ಭಾವಿಸಿಕೊಳ್ಳುತ್ತಿದ್ದಾನೆ. ಇದರಿಂದ ಒಳಿತು ಮತ್ತು ಕೆಡುಕು ಎರಡೂ ಉಂಟಾಗಿದೆ. ಒಂದು, ಎರಡು ಪಾತ್ರಗಳನ್ನು ಮಾಡಿದ ಕಲಾವಿದ ಖಳನಾಯಕ , ಬಳಿಕ ನಿರ್ದೇಶಕನೂ ಆಗಲು ಪ್ರಯತ್ನಿಸುತ್ತಾನೆ. ಸಾಕಷ್ಟು ರಂಗಾಸಕ್ತಿಯ ಕೊರತೆ ಇಂದಿನ ಕಲಾವಿದರಲ್ಲಿ ಕಂಡುಬರುತ್ತದೆ. ನಿರ್ದೇಶಕರ ಮತ್ತು ಕಲಾವಿದರ ನಡುವೆ ತಾಮರಸ್ಯದ ಸಂಬಂಧ ಕಾಣುತ್ತಿಲ್ಲ. ಇದಕ್ಕೆ ಈಗಿನ ಕಲಾವಿದರು ಎದುರಿಸುತ್ತಿರುವ ಭಾಷಾ ಸಮಸ್ಯೆಯೂ ಒಂದು ಕಾರಣ. ಪ್ರಯತ್ನದಿಂದ ಪ್ರತಿಭಾವಂತರಾಗುವವರು ನಾಟಕ ರಂಗಕ್ಕೆ ಬೇಕು. ಅಧ್ಯಯನ ಆಸಕ್ತಿ, ಆಲಿಸುವ ಕ್ಷಮತೆ, ಪ್ರದರ್ಶನ ವೀಕ್ಷಣೆಯ ಆಸಕ್ತಿ, ಪ್ರೇಕ್ಷಕರ ಬಗ್ಗೆ ಜ್ಞಾನ, ಸಹ ಕಲಾವಿದನನ್ನು ಗೌರವಿಸುವ ಗುಣ ಇವೆಲ್ಲ ಇದ್ದರೆ ಯಾವುದೇ ಕಲಾವಿದ ಸಫಲನಾಗಬಲ್ಲ” ಎಂದು ಹೇಳಿದರು.
‘ಯಕ್ಷಗಾನದಲ್ಲಿ ಹಾಸ್ಯಪ್ರಜ್ಞೆ ‘ಎಂಬ ವಿಷಯದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡು ಮಾತಾಡಿದ ಯಕ್ಷಗಾನ ಕಲಾವಿದ ಸಂಘಟಕ ಜಿಟಿ ಆಚಾರ್ಯ “ಯಕ್ಷಗಾನ ಗಂಡು ಕಲೆಯೂ ಹೌದು ಗಡಸು ಕಲೆಯೂ ಹೌದು. ಈಗೀಗ ಮಹಿಳೆಯರು ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆ. ಕೆಲವೊಂದು ಪ್ರಸಂಗಗಳಿಗೆ ಅಗತ್ಯವಿಲ್ಲದಿದ್ದರೂ ಮನರಂಜನೆಗಾಗಿ ಹಾಸ್ಯ ಪಾತ್ರ ತುರುಕಿಸುತ್ತಾರೆ. ಹಿಂದೆ ಯಕ್ಷಗಾನದ ಆಯಕಟ್ಟಿನಲ್ಲೇ ಇತಿ ಮಿತಿಯ ಹಾಸ್ಯ ಇರುತ್ತಿತ್ತು. ಈಗ ಕಥಾನಾಯಕರು ದ್ವಂದ್ವಾ ರ್ಥದ ಪದ ಬಳಸಿ ಹಾಸ್ಯ ಸೃಷ್ಟಿ ಸಲು ಯತ್ನಿಸುತ್ತಿದ್ದಾರೆ. ಏನಿದ್ದರೂ ಹಾಸ್ಯ ಊಟದ ಉಪ್ಪಿನಕಾಯಿಯಂತಿರಬೇಕು. ಜಾತಿ ನಿಂದನೆ ಮಾಡುವ ಹಾಸ್ಯ ಸಲ್ಲದು. ಹಾಸ್ಯಗಾರರಲ್ಲೂ ಪ್ರತ್ಯುತ್ಪನ್ನ ಮತಿತ್ವ ,ಸಮಯ ಪ್ರಜ್ಞೆ, ವೇದಿಕೆ ಪ್ರಜ್ಞೆ ಇರಬೇಕು ಎಂದರು. ‘ ನನ್ನ ರಂಗ ಅನುಭವ ‘ವಿಷಯಕ್ಕೆ ಸಂಬಂಧಿಸಿ ಅನಿಲ್ ಹೆಗಡೆ “ಕಲಾವಿದನಾಗಿ ನೋವು ಸಂತೋಷ ಎರಡನ್ನೂ ಅನುಭವಿಸಿದ್ದೇನೆ. ಛಲ ಇದ್ದರೆ ನಾಟಕ ರಂಗದಲ್ಲಿ ತುಂಬಾ ಅವಕಾಶ ಇದೆ. ಸುಮಾರು 100 ನಾಟಕ , 60- 80 ಯಕ್ಷಗಾನ ಪಾತ್ರ ಮಾಡಿದ್ದೇನೆ. ಪಾತ್ರಧಾರಿಗಳು ಸನ್ಮಾನದ ಅಪೇಕ್ಷೆ ಇಟ್ಟುಕೊಳ್ಳದೆ ಕೆಲಸ ಮಾಡಬೇಕು. ಏಕೆಂದರೆ ಪ್ರೇಕ್ಷಕರ ಪ್ರಶಂಸೆ ಅವರಿಗೆ ದೊಡ್ಡ ಸನ್ಮಾನ” ಎಂದರು. ಮೂಲತಃ ಕಥಕ್ ಕಲಾವಿದೆಯಾಗಿ ರಂಗ ಜೀವನಕ್ಕೆ ಪಾದಾರ್ಪಣೆ ಮಾಡಿದ ಚಂದ್ರಾವತಿ ದೇವಾಡಿಗ ಮರಾಠಿ ರಂಗಭೂಮಿಯಲ್ಲೂ ಕೆಲಸ ಮಾಡಿದ ಅನುಭವ ತನಗಿದೆ. ಅಲ್ಲಿ ನಾಟಕದ ಅಂತಿಮ ರಿಹರ್ಸಲ್ ಏಳು ದಿನ ನಡೆದು ಪ್ರತಿದಿನವೂ ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಕನ್ನಡರಂಗಭೂಮಿ ಪ್ರಯಾಣ ಸುಖ ನೀಡಿದೆ ಎಂದರು. ರಂಗಭೂಮಿಯಲ್ಲಿ ಕಲಿತದ್ದನ್ನು ಜೀವನದಲ್ಲೂ ಅನುಭವಿಸಿದ್ದೇನೆ. ನಿರ್ದೇಶಕನಾದವನ ಗೋಳು ಏನು ಎನ್ನುವುದು ನನ್ನ ಅರಿವಿಗೆ ಬಂದಿದೆ. ಶಿಬಿರಗಳಿಂದ ಸಾಕಷ್ಟು ವಿಚಾರಗಳನ್ನು ಕಲಿತುಕೊಳ್ಳಬಹುದು. ಹಾಗಾಗಿ ಶಿಬಿರಗಳನ್ನು ಏರ್ಪಡಿಸಬೇಕು.
ಕಲಾವಿದರಲ್ಲಿ ಚಾಲೆಂಜ್ ಸ್ವೀಕರಿಸುವ ಗುಣ ಇರಬೇಕು ಎಂದು ಕಲಾವಿದ ಗೋಪಾಲ ತ್ರಾಸಿ ತಮ್ಮ ಅನುಭವಗಳನ್ನು ತಿಳಿಸಿದರು. ಕಲಾವಿದ ನವೀನ್ ಸುವರ್ಣ ತಮ್ಮ ತಂದೆಯ ಜೊತೆ ಇಪ್ಪತ್ತಕ್ಕೂ ಹೆಚ್ಚು ಪಾತ್ರ ನಿರ್ವಹಿಸಿದ್ದನ್ನು ಸ್ಮರಿಸಿಕೊಂಡು 25 ವರ್ಷಗಳಿಂದ ಪಲ್ಲವಿ ಆರ್ಟ್ಸ್ ಬ್ಯಾನರ್ ನಡೆ ಕೆಲಸ ಮಾಡಿದ ಅನುಭವ ಹೇಳಿಕೊಂಡರು. ಇದೇ ಸಂದರ್ಭದಲ್ಲಿ ದ ರಾ ಬೇಂದ್ರೆ ರೂಪಕದ ಕೆಲವು ಪದ್ಯಗಳನ್ನು ವಾಸು ಮೊಯ್ಲಿ ಮತ್ತು ಗಣೇಶ್ ಕುಮಾರ್ ಪ್ರಸ್ತುತಪಡಿಸಿದರು. ಅತಿಥಿಗಳಲ್ಲಿ ಒಬ್ಬರಾದ ನಾಟಕ ಸೆನ್ಸಾರ್ ಮಂಡಳಿಯ ಸದಸ್ಯ ರಂಗ ಪೂಜಾರಿ ಮಾತಾಡಿ ಸೆನ್ಸಾರ್ನ ಮಹತ್ವಿಕೆಯ ಬಗ್ಗೆ ತಿಳಿಸಿದರು. ಇನ್ನೋರ್ವ ಅತಿಥಿ ರಂಗ ನಿರ್ದೇಶಕ ಮನೋಹರ ನಂದಳಿಕೆ ಕನ್ನಡ ಕಲಾ ಕೇಂದ್ರದ ಈ ರೀತಿಯ ಚಟುವಟಿಕೆಗಳು ಶ್ಲಾಘನೀಯ. ಕಲಾವಿದನೊಬ್ಬನ ಕೊರತೆ ತನ್ನ ರಂಗ ಪಯಣಕ್ಕೆ ನಾಂದಿಯಾದ ವಿಷಯವನ್ನು ಹೇಳಿ ಮನಸ್ಸಿನ ಜಂಜಾಟ ಕಡಿಮೆ ಮಾಡುವ ಒಂದು ಸ್ಥಳ ಎಂದರೆ ಅದು ರಂಗಭೂಮಿ. 25 ವರ್ಷಗಳ ನಾಟಕ ಅನುಭವ ಪಡೆದ ಬಳಿಕ ತಾನು ನಿರ್ದೇಶಕನಾದೆ ಚಲನಚಿತ್ರಗಳಲ್ಲೂ ನಟಿಸುವ ಅವಕಾಶ ದೊರಕಿದೆ ಎಂದರು. ಎಲ್ಲ ಅತಿಥಿ ಗಣ್ಯರಿಗೆ ಕನ್ನಡ ಕಲಾ ಕೇಂದ್ರದ ವತಿಯಿಂದ ಶಾಲು ಹೊದಿಸಿ ಪುಷ್ಪ ಗೌರವ ನೀಡಲಾಯಿತು. ಆ ಬಳಿಕ ನೆರೆದ ಕಲಾವಿದರರು. ಕಲಾಸಕ್ತರು ನಡೆಸಿದ ಮುಕ್ತ ಸಂವಾದದಲ್ಲಿ ಪ್ರಶ್ನೆಗಳಿಗೆ ಸೂಕ್ತ ಉತ್ತರ ಪಡೆದುಕೊಂಡರು. ಸಂಪೂರ್ಣ ಕಾರ್ಯಕ್ರಮವನ್ನು ರಂಗ ಕಲಾವಿದ ಸಾ ದಯಾ ನಿರೂಪಿಸಿದರೆ ಕನ್ನಡ ಕಲಾ ಕೇಂದ್ರದ ಕಾರ್ಯದರ್ಶಿ, ರಮೇಶ್ ಬಿರ್ತಿಯವರು ಸಭಿಕರನ್ನು ಸ್ವಾಗತಿಸಿ ವಂದನಾರ್ಪಣೆ ಗೈದರು ಇತ್ತೀಚೆಗೆ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಮುಲ್ಕಿ ಸದಾಶಿವ ಕಾಮತ್ ಅವರಿಗೆ ನೆರೆದವರೆಲ್ಲ ಸದ್ಗತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಆಚರಿಸಿದರು.