valedicotryಮಂಗಳೂರು : ಆನೆಗುಂದಿ ಗುರುಸೇವಾ ಪರಿಷತ್ ಮಹಾ ಮಂಡಲ ಮಂಗಳೂರು ಇದರ ವತಿಯಿಂದ ಮಕ್ಕಳಿಗಾಗಿ ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಒಂದು ವಾರದ ‘ಜ್ಞಾನ ವಿಕಾಸ ಸಂಸ್ಕಾರ ಶಿಬಿರ’ದ ಸಮಾರೋಪ ಸಮಾರಂಭವು ದಿನಾಂಕ 27 ಏಪ್ರಿಲ್ 2025ರಂದು ನಡೆಯಿತು.
ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನವಿತ್ತ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಡುಕುತ್ಯಾರು ಇಲ್ಲಿನ ಪೀಠಾಧಿಪತಿಗಳಾಗಿರುವ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಗಳು “ಮಕ್ಕಳ ಬೌದ್ಧಿಕ ಪರಿವರ್ತನೆಯೇ ಸಂಸ್ಕಾರ. ಆದರೆ ಪರಿವರ್ತನೆಯಲ್ಲಿ ಎರಡು ಮುಖಗಳಿವೆ. ಒಂದು ಮುಖ ಸಂಸ್ಕಾರವಾದರೆ ಇನ್ನೊಂದು ಮುಖ ವಿಕಾರ. ಮಕ್ಕಳು ವಿಕಾರಗೊಳ್ಳದಂತೆ ಎಚ್ಚರವಹಿಸಬೇಕಾದುದು ಹೆತ್ತವರ ಜವಾಬ್ದಾರಿ. ಆದ್ದರಿಂದ ಮಕ್ಕಳ ಜೀವನದ ಲಕ್ಷ್ಯ ಸುಸ್ಥಿರವಾಗಿರುವಂತೆ ಮಾರ್ಗದರ್ಶನ ನೀಡುವಲ್ಲಿ ಪೋಷಕರು ಹಾಗೂ ಶಿಕ್ಷಕರ ಕರ್ತವ್ಯವೂ ಬಹು ಮುಖ್ಯವಾಗಿರುತ್ತದೆ ಎಂದು ನುಡಿದರು.
ವೇದಿಕೆಯಲ್ಲಿ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ ಪಾಂಡೇಶ್ವರ, ವಿಶ್ವಕರ್ಮ ಕಲಾ ಪರಿಷತ್ತಿನ ಅಧ್ಯಕ್ಷ ಡಾ. ಎಸ್.ಪಿ. ಗುರುದಾಸ್, ನಿವೃತ್ತ ಅಧ್ಯಾಪಕಿ ಶ್ರೀಮತಿ ರತ್ನಾವತಿ ಜೆ. ಬೈಕಾಡಿ, ಆನೆಗುಂದಿ ಗುರುಸೇವಾ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷ ಗಣೇಶ ಆಚಾರ್ಯ ಕೆಮ್ಮಣ್ಣು, ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ್ ಸಿದ್ಧಕಟ್ಟೆ ಉಪಸ್ಥಿತರಿದ್ದರು. ಆನೆಗುಂದಿ ಗುರುಸೇವಾ ಪರಿಷತ್ ಮಂಗಳೂರು ಮಹಾಮಂಡಲದ ಅಧ್ಯಕ್ಷ ಶೇಖರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳು ಮಾತನಾಡುತ್ತಾ ಮೌಲ್ಯಯುತ ಹಾಗೂ ಸಂಸ್ಕಾರ ಸಹಿತವಾದ ಶಿಕ್ಷಣ ಇಂದು ಮಕ್ಕಳಿಗೆ ಶಾಲೆಗಳಲ್ಲಿ ಸಿಗುವುದು ದುರ್ಲಭವಾಗಿದ್ದು, ಇಂತಹ ಶಿಬಿರಗಳಲ್ಲಿ ಮಾತ್ರವೇ ಲಭ್ಯವಾಗುವುದಂತು ಸತ್ಯ. ಇಲ್ಲಿ ಲಭಿಸಿದ ಸಂಸ್ಕಾರ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಲೆಂದು ಹಾರೈಸಿದರು. ಸುಮಾರು 95 ಮಂದಿ ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದು, ವಿವಿಧ ವಿಷಯಗಳ ಬಗ್ಗೆ ಪರಿಣತ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಿದರು. ಶಿಬಿರದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ಶಿಬಿರದ ಮುಖ್ಯಸ್ಥ ಗುರುರಾಜ್ ಕೆ.ಜೆ. ಪ್ರಸ್ತಾವನೆ ಗೈದರು. ಸತೀಶ್ ಆಚಾರ್ಯ ಸುರುಳಿ ಸ್ವಾಗತಿಸಿ, ದೇವರಾಜ್ ಶಿವನಗರ ಪ್ರಶಂಸಾ ಪತ್ರಗಳನ್ನು ವಾಚಿಸಿ, ಪಿ. ರವೀಂದ್ರ ಮಂಗಳಾದೇವಿ ವಂದನಾರ್ಪಣೆಗೈದು, ಪಶುಪತಿ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.