ಬಿ.ಸಿ.ರೋಡ್ : ಗೆಜ್ಜೆಗಿರಿ ಮೇಳದವರಿಂದ ಯಕ್ಷೋತ್ಸವ 2025 ಕಾರ್ಯಕ್ರಮವು ದಿನಾಂಕ 26 ಏಪ್ರಿಲ್ 2025ರಂದು ಬಿ.ಸಿ.ರೋಡಿನ ಚಂಡಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ “ಉಪನಿಷತ್ತ್, ಭಗವದ್ಗೀತೆ ಇದನ್ನು ಜನ ಸಾಮಾನ್ಯರು ತಿಳಿದಿರುವುದು ತುಂಬ ಅಪರೂಪ. ಆದರೆ ಯಕ್ಷಗಾನದ ಮೂಲಕ ಇದನ್ನು ತಿಳಿಯುವುದು ಸಾಧ್ಯ. ಯಕ್ಷಗಾನದಿಂದ ನಮ್ಮ ಜೀವನದ ಮೂಲ ಚಿಂತನೆಯ ಅರಿವು ಉಂಟಾಗುತ್ತದೆ. ದುಷ್ಟರ ನಾಶವಾಗಿ ಶಿಷ್ಟರ ರಕ್ಷಣೆಯ ಬಗ್ಗೆಯೂ ಯಕ್ಷಗಾನದಲ್ಲಿ ತಿಳಿಯುತ್ತದೆ. ನಮ್ಮ ಧರ್ಮರಕ್ಷಣೆಯ ಕೈಂಕರ್ಯದಲ್ಲಿ ಯಕ್ಷಗಾನ ಪ್ರಸಂಗ ಸದಾ ಪ್ರೇರಣೆ ನೀಡಲಿ” ಎಂದು ಹೇಳಿದರು.
ಇದೇ ಸಂದರ್ಭ ಮೇಳದ ಕಲಾವಿದರಾದ ಲಕ್ಣ್ಮಣ್ ಗೌಡ ಮುಚ್ಚೂರು, ದಾಮೋದರ ಪಾಟಾಳಿ, ದತ್ತೇಶ್ ಮಾವಿನಕಟ್ಡೆ, ಶ್ರೀಶ ಭಟ್ ಪೊಳಲಿ, ವಿಶ್ವನಾಥ ಕುಲಾಲ್ ಪದ್ಮುಂಜ ಮತ್ತು ಬಾಬಣ್ಣ ಪಾರೆಂಕಿ ಮಡಂತ್ಯಾರ್ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮೇಳದ ಪ್ರಧಾನ ಭಾಗವತರಾದ ಯೋಗೀಶ್ ಶರ್ಮ ಅಳದಂಗಡಿ, ಪ್ರಸಂಗಕರ್ತ ನಿತಿನ್ ಕುಮಾರ್ ತೆಂಕಕಾರಂದೂರು, ಹಿಮ್ಮೇಳ ಕಲಾವಿದ ಗಣಪತಿ ಭಟ್, ಉದ್ಯಮಿ ಭರತ್ ಅಂಚನ್ ಉಪಸ್ಥಿತರಿದ್ದರು.
ಮೇಳದ ಮ್ಯಾನೇಜರ್ ದೀಪಕ್ ಕೋಟ್ಯಾನ್ ಸಜೀಪ ಸನ್ಮಾನಿತರ ಪರಿಚಯ ವಾಚಿಸಿ, ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿ, ಸತೀಶ್ ಪೂಜಾರಿ ಸಜೀಪ ಧನ್ಯವಾದ ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ‘ದೇವು ಪೂಂಜ ಪ್ರತಾಪ’ ಬಯಲಾಟ ನಡೆಯಿತು. ಆದಿತ್ಯವಾರ ರಾತ್ರಿ ‘ಪಾಪಣ್ಣ ವಿಜಯ ಗುಣಸುಂದರಿ’, ಸೋಮವಾರ ‘ನಾಗರಪಂಚಮಿ’, ಮಂಗಳವಾರ ಕಲ್ಲಡ್ಕ ಕುದ್ರೆಬೆಟ್ಟು ಮಣಿಕಂಠ ಮಂದಿರದಲ್ಲಿ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ನಡೆಯಲಿದೆ.