ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಆಯೋಜಿಸುವ ಉಡುಪಿ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ಸುಕೃತಿ – 2025’ ದಿನಾಂಕ 30 ಏಪ್ರಿಲ್ ಹಾಗೂ 01 ಮೇ 2025ರಂದು ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಹಿರಿಯ ಸಾಹಿತಿಗಳು, ಸಂಶೋಧಕರು, ವಿದ್ವಾಂಸರಾದ ಪಾದೆಕಲ್ಲು ವಿಷ್ಣುಭಟ್ಟ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದಂಗಳವರು ಹಾಗೂ ಕಿರಿಯ ಸ್ವಾಮಿಗಳಾದ ಶ್ರೀ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀ ಪಾದಂಗಳವರು ದೀಪ ಪ್ರಜ್ವಲನಗೈದು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕ. ಸಾ. ಪ. ಉಡುಪಿ ಜಿಲ್ಲಾ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದು, ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಾಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಲೇಖಕ ಪಾದೇಕಲ್ಲು ವಿಷ್ಣು ಭಟ್ ಇವರ ‘ಗ್ರಂಥಾವಲೋಕನ’, ಡಾ. ಮಂಜುನಾಥ ಕರಬ ನಂಚಾರು ಇವರ ‘ಕೆಂಪುಚುಕ್ಕಿ ಭಾವರೆಕ್ಕೆ’ ಹಾಗೂ ಪೂರ್ಣೇಶ ಕೆ. ಶಿವಪುರ ಇವರ ‘ಪೂರ್ಣಕುಂಭ’ ಕೃತಿಗಳನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಲೋಕಾರ್ಪಣೆಗೊಳಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೀತ ಗಾಯನ, ವಿಚಾರ ಗೋಷ್ಠಿ, ವಿಶೇಷ ಉಪನ್ಯಾಸ, ತಾಳಮದ್ದಳೆ, ಭರತನಾಟ್ಯ, ಅರುಣರಾಗ, ಕವಿ ಗೋಷ್ಠಿ, ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.