ಕಾಸರಗೋಡು : ಕಾಸರಗೋಡು ಜಿಲ್ಲೆಯ ಸಾಂಸ್ಕೃತಿಕ ಸಾಹಿತ್ಯಿಕ ಸಂಸ್ಥೆಯಾದ ರಂಗಚಿನ್ನಾರಿ ಕಳೆದ ಹಲವು ವರ್ಷಗಳಿಂದ ಕಾಸರಗೋಡಿನ ಹಿರಿಯ ಕಿರಿಯ ಪ್ರತಿಭೆಗಳಿಗೆ ನಗದು ಬಹುಮಾನ ಸಹಿತ ‘ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿ’, ‘ರಂಗ ಚಿನ್ನಾರಿ ಪ್ರಶಸ್ತಿ’, ‘ರಂಗ ಚಿನ್ನಾರಿ ಯುವ ಪ್ರಶಸ್ತಿ’ ನೀಡಿ ಪ್ರತಿಭೆಗಳನ್ನು ಗೌರವಿಸಿದೆ. ಇದರಂತೆ 2024-25ನೇ ಸಾಲಿನ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ರಂಗ ಚಿನ್ನಾರಿಯ ನಿರ್ದೇಶಕರುಗಳಾದ ಕಾಸರಗೋಡು ಚಿನ್ನಾ, ಸತೀಶ್ಚಂದ್ರ ಭಂಡಾರಿ, ಸತ್ಯನಾರಾಯಣ ಕೆ. ಮತ್ತು ಮನೋಹರ ಶೆಟ್ಟಿ ತಿಳಿಸಿದ್ದಾರೆ. ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿ ಹಾಗೂ ಹರಿರಾಯ ಕಾಮತ್, ಪ್ರೇಮಾ ಕಾಮತ್ ಸ್ಮರಣಾರ್ಥ ನಗದು ಬಹುಮಾನಕ್ಕೆ ಮಾಧವ ಪಾಟಾಳಿ ನೀರ್ಚಾಲು, ರಂಗ ಚಿನ್ನಾರಿ ಪ್ರಶಸ್ತಿ ಹಾಗೂ ಎನ್.ಆರ್. ಬೇಕಲ್ ಸ್ಮರಣಾರ್ಥ ನಗದು ಬಹುಮಾನಕ್ಕೆ ರಾಂ ಎಲ್ಲಂಗಳ ಮತ್ತು ಕುಂಚಿನಡ್ಕ ಶಕುಂತಲಾ ಕೃಷ್ಣ ಭಟ್, ರಂಗ ಚಿನ್ನಾರಿ ಯುವ ಪ್ರಶಸ್ತಿ ಹಾಗೂ ಕೆ. ದೇರಪ್ಪ ಸ್ಮರಣಾರ್ಥ ನಗದು ಬಹುಮಾನಕ್ಕೆ ಕಿರಣ್ ರಾಜ್ ಮತ್ತು ದೀಕ್ಷಾ ಕೂಡ್ಲು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ದಿನಾಂಕ 24 ಮೇ 2025ರಂದು ಶನಿವಾರ ಸಂಜೆ 4-00 ಗಂಟೆಗೆ ಪದ್ಮಗಿರಿ ಕಲಾ ಕುಟೀರದಲ್ಲಿ ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ.
ಮಾಧವ ಪಾಟಾಳಿ ನೀರ್ಚಾಲು :
ನೀರ್ಚಾಲು ಗ್ರಾಮದ ತಲ್ಪನಾಜೆಯಲ್ಲಿ ಚಂದ ಪಾಟಾಳಿ ಹಾಗೂ ಸಬ್ಬಮ್ಮ ದಂಪತಿ ಪುತ್ರರಾಗಿರುವ ಇವರು ಬಾಲ್ಯಕಾಲದಲ್ಲಿ ಬಣ್ಣದ ಮಾಲಿಂಗ ಇವರ ವೇಷಕ್ಕೆ ಮನಸೋತವರು. ಹಾಗೆ ಯಕ್ಷಗಾನದಲ್ಲಿ ಆಸಕ್ತಿ ಹುಟ್ಟಿಕೊಂಡಿತು. ಆದರೆ ನಾಟ್ಯಕಲಿಯಲು ವ್ಯವಸ್ಥೆ ಇಲ್ಲ. ಆ ಸಂದರ್ಭದಲ್ಲಿ ವೇಷಭೂಷಣ ಕಟ್ಟಲು ಕಟೀಲು ಮೇಳಕ್ಕೆ ಸೇರ್ಪಡೆಗೊಂಡರು. ಅಲ್ಲಿ ನಿರಂತರ ಬೆಳಗ್ಗಿನ ತನಕ ಯಕ್ಷಗಾನ ನೋಡಿ ಹಲವು ವಿಚಾರಗಳನ್ನು ಕಲಿತುಕೊಂಡರು. ಬಳಿಕ ಉಂಡೆಮನೆ ಕೃಷ್ಣ ಭಟ್ ಇವರಲ್ಲಿ ನಾಟ್ಯ ಅಭ್ಯಾಸ ಮಾಡಿದರು. ಪುಂಡುವೇಷ ಪೀಟಿಕೆವೇಷ ಅಭ್ಯಾಸ ಮಾಡುತ್ತಾ ಬಣ್ಣದ ವೇಷದಲ್ಲಿ ಆಸಕ್ತಿ ಹೆಚ್ಚಿಸಿ ಬಣ್ಣದ ವೇಷಧಾರಿಯಾದರು. ಪುನಃ ಕಟೀಲು ಮೇಳದಲ್ಲಿ ವೇಷಧಾರಿಯಾಗಿ ಸೇರಿಕೊಂಡರು. ಬಳಿಕ ಧರ್ಮಸ್ಥಳ ಮೇಳದಲ್ಲಿ 8 ವರ್ಷ, ಎಡನೀರು ಮೇಳದಲ್ಲಿ 11 ವರ್ಷ ಸೇವೆ. ಅದರ ಎಡೆಯಲ್ಲಿ ಸ್ವಲ್ಪ ಸಮಯ ಕೂಡ್ಲು, ಮಲ್ಲ, ಕೊಲ್ಲಂಗಾನ, ಭಗವತೀ ಮೇಳಗಳಲ್ಲಿ ಸೇವೆ ಸಲ್ಲಿಸಿದರು. ಬಣ್ಣಗಾರಿಕೆಯಲ್ಲಿ ಪರಂಪರಾಗತ ಬಿಟ್ಟಿ, ನಾಟ್ಯಗಾರಿಕೆ, ಸ್ವರಗಾಂಭೀರ್ಯ ಇವರ ಹೆಚ್ಚುಗಾರಿಕೆ. ಇವರ ಮಹಿಷಾಸುರ, ಶುಂಭಾಸುರ, ರಾವಣ, ಶೂರ್ಪನಖಾ, ರುದ್ರಭೀಮ ಮುಂತಾದ ಬಣ್ಣದ ವೇಷಗಳು ಅಭಿಮಾನಿಗಳ ಮನಸೂರೆಗೊಂಡಿದೆ. ಎಡನೀರು ಮೇಳ, ಗಾಣಿಗ ಸಮುದಾಯ ಸೇವಾ ಸಂಘ ಮಂಗಳೂರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಪಂಜ ಹಾಗೂ ಇತರ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿದ್ದಾರೆ. ಪ್ರಸ್ತುತ ವರ್ಷದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಂ ಎಲ್ಲಂಗಳ :
ಶಂಕರನಾರಾಯಣ ಶ್ಯಾನುಭೋಗ್ ಮತ್ತು ಪದ್ಮಾವತಿ ದಂಪತಿ ಪುತ್ರರಾಗಿರುವ ರಾಂ ಎಲ್ಲಂಗಳ ಕಾವ್ಯನಾಮದ ರಾಮರಾಯ ಶ್ಯಾನುಭೋಗ್ ಇವರು ಮಧೂರಿನ ಎಲ್ಲಂಗಳದ ನಿವಾಸಿ ಎಂ.ಎ., ಬಿ. ಎಡ್ ಮಾಡಿದ ಇವರು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉಪನ್ಯಾಸಕನಾಗಿ ವೃತ್ತಿ ಜೀವನ ಆರಂಭಿಸಿ ನಂತರ ಮಂಗಳೂರಿನ ವಾಮಂಜೂರು ಸೈಂಟ್ ರೇಮಂಡ್ಸ್ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಸಹಾಯಕನಾಗಿ ಸೇವೆ ಸಲ್ಲಿಸಿ 2018ರಲ್ಲಿ ನಿವೃತ್ತಿ ಹೊಂದಿದರು. ಇವರ ವಕ್ರಸಂಚಾರ (ವ್ಯಂಗ್ಯ ಚಿತ್ರ ಸಂಕಲನ), ಆಕಾಶವಾಣಿ ಭಾಷಣೊಲು, (ತುಳು ಭಾಷಣ ಸಂಕಲನ) ಬಹುಮಾನ, ಬೆಳಕು, ಅಮೃತ ವೃಕ್ಷ (ಮಕ್ಕಳ ನಾಟಕ ಸಂಕಲನ), ಹೊಂಬೆಳಕು (ಮಕ್ಕಳ ಗೀತ ಗುಚ್ಚ) ಕೃತಿಗಳು ಪ್ರಕಟಗೊಂಡಿದೆ. ಅಲ್ಲದೆ ಸುಮಾರು 28 ತುಳು ನಾಟಕಗಳು 13 ಬಾನುಲಿ ನಾಟಕಗಳು, 5 ಯಕ್ಷಗಾನ ಪ್ರಸಂಗಗಳು, 8 ಗೀತಾ ರೂಪಕಗಳನ್ನೂ ರಚಿಸಿದ್ದಾರೆ. ಸುಮಾರು 25 ವರ್ಷಗಳ ಕಾಲ ಆಕಾಶವಾಣಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ತುಳು ನಾಟಕ ರಚನೆಗಾಗಿ 7 ಬಾರಿ ಧರ್ಮಸ್ಥಳ ರತ್ನವರ್ಮ ಪ್ರಶಸ್ತಿ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ 2014ನೇ ಸಾಲಿನ ದತ್ತಿ ಪುರಸ್ಕಾರ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪ್ರಶಸ್ತಿ, ಕಲಾ ಪ್ರತಿಭ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಈ ಸಾಧಕನ ಅರ್ಹತೆಗೆ ತಕ್ಕಂತೆ ಈ ವರ್ಷದ ರಂಗಚಿನ್ನಾರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕುಂಚಿನಡ್ಕ ಶಕುಂತಲಾ ಕೃಷ್ಣ ಭಟ್ :
ಬಂಟ್ವಾಳ ತಾಲೂಕಿನ ಅಳಿಕೆಯ ಜೆಡ್ಡು ಗಣಪತಿ ಭಟ್ ಹಾಗೂ ಜೆಡ್ಡು ಗೌರಮ್ಮನವರ ಸುಪುತ್ರಿಯಾದ ಇವರು ಶಾಸ್ತ್ರೀಯ ಸಂಗೀತ ಹಿನ್ನಲೆಯಿಂದ ಬಂದ ಅವರಿಗೆ ಸಂಗೀತದತ್ತ ಒಲವು ಹೆಚ್ಚಾಗಿಯೇ ಇತ್ತು. ಹತ್ತು ವರ್ಷಗಳ ತನಕ ಇವರಿಗೆ ಅಮ್ಮನೇ ಮೊದಲ ಗುರು. ನಂತರ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ಬಳಿ ಸಂಗೀತಾಭ್ಯಾಸ ಮುಂದುವರಿಸಿದರು. ಅವರ ನೇತೃತ್ವದಲ್ಲಿ ಮದ್ರಾಸ್ ವಿಶ್ವ ವಿದ್ಯಾನಿಲಯ ಮಟ್ಟದ ಪರೀಕ್ಷೆಗಳನ್ನು ಪೂರೈಸಿದರು. 2018ರಲ್ಲಿ ಕಾಸರಗೋಡಿನ ಕೇಂದ್ರೀಯ ತೋಟಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳದಲ್ಲಿ ಕಛೇರಿ ನಡೆಸಿದ ಹೆಗ್ಗಳಿಕೆ ಇವರದ್ದು. ಗುರುಕುಲ ಪದ್ದತಿಯಲ್ಲಿ ಸಂಗೀತ ಕಲಿಸುವ ಇವರು ಉತ್ತಮ ಶಿಷ್ಯವೃಂದವನ್ನು ಹೊಂದಿದ್ದಾರೆ. ಪೆರ್ಲ ಕೃಷ್ಣಭಟ್ ರಚನೆಯ ಮಧೂರು ಸುಪ್ರಭಾತವನ್ನು 1974ರಲ್ಲಿ ಮೊತ್ತಮೊದಲ ಬಾರಿಗೆ ರಾಗ ಸಂಯೋಜಿಸಿದ್ದಾರೆ. ಅಲ್ಲದೆ ಪೆರಡಾಲ ಉದನೇಶ್ವರ ಸುಪ್ರಭಾತ, ನಾರಾಯಣೀಯಂ, ಪುಣಚ ಮಹಿಷಮರ್ದಿನಿ ಸುಪ್ರಭಾತ ಇವುಗಳಿಗೆಲ್ಲಾ ರಾಗ ಸಂಯೋಜಿಸಿ ಹಾಡಿ ಧ್ವನಿಸುರುಳಿ ಹೊರತಂದಿದ್ದಾರೆ. ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ರಚನೆಗಳನ್ನೆಲ್ಲ ಸಂಗ್ರಹಿಸಿ ‘ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ಕೃತಿಗಳು’ ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಪುತ್ತೂರಿನ ಮೂಕಾಂಬಿಕ ಸಂಗೀತ ಶಾಲೆ, ಪಡ್ರೆ ಚಂದು ಸ್ಮಾರಕ ನಾಟ್ಯಾಲಯ, ಗೋಪಾಲಕೃಷ್ಣ ಸಂಗೀತ ಶಾಲೆ, ಆಲಂಪಾಡಿ ವೆಂಕಟೇಶ್ ಶ್ಯಾನುಭೋಗ್ ಪ್ರತಿಷ್ಠಾನ, ಮೈಸೂರಿನ ಗಾನ ಭಾರತಿ ಮೊದಲಾದ ಸಂಸ್ಥೆಗಳು ಇವರನ್ನು ಗೌರವಿಸಿದೆ. ಈ ಸಾಧಕಿಗೆ ಪ್ರಸ್ತುತ ವರ್ಷದ ‘ರಂಗಚಿನ್ನಾರಿ ಪ್ರಶಸ್ತಿ’ ಒಲಿದಿದೆ.
ಕಿರಣ್ ರಾಜ್ ಕೆ. :
ಕುಂಬ್ದಾಜೆ ಗ್ರಾಮದ ಅಚ್ಯುತ ಹಾಗು ಗೋದಾವರಿ ದಂಪತಿ ಸುಪುತ್ರನಾದ ಇವರು ಚಲನಚಿತ್ರ ನಿರ್ದೇಶಕ. ಇವರು ರಚಿಸಿ, ನಿರ್ದೇಶಿಸಿದ 777 ಚಾರ್ಲಿ ಚಲನಚಿತ್ರ ರಾಷ್ಟ್ರಮಟ್ಟದ ಸಿನಿಮಾ ಪ್ರಶಸ್ತಿ ಗಳಿಸಿದೆ. ಇವರ ಕಬ್ಬಿನ ಹಾಲು (ಕಿರು ಚಿತ್ರ) ವಿಭಾ ದಕ್ಷಿಣ ಭಾರತ ಕಿರುಚಿತ್ರ ಉತ್ಸವದಲ್ಲಿ ಉತ್ತಮ ಕಿರುಚಿತ್ರ ಪ್ರಶಸ್ತಿ ಗಳಿಸಿದೆ. ಕಾವಳ (ಟೆಲಿ ಫಿಲ್ಮ್), ಕನಸು (ಮ್ಯೂಸಿಕ್ ವಿಡಿಯೋ), ಯಕ್ಷಗಾನ ಬೊಂಬೆಯಾಟ (ಡೋಕ್ಯುಮೆಂಟರಿ) ಇವರ ಇತರ ಸಾದನೆಗಳು ‘ಎಂದೆಂದಿಗೂ’, ‘ರಿಕಿ’, ‘ಕಿರಿಕ್ ಪಾರ್ಟಿ’ ಇತ್ಯಾದಿ ಚಲನಚಿತ್ರಗಳಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿಸಿದ ಅನುಭವ ಇವರಿಗಿದೆ. ಈ ಪ್ರತಿಭೆಗೆ ಈ ವರ್ಷದ ‘ರಂಗ ಚಿನ್ನಾರಿ ಯುವ ಪ್ರಶಸ್ತಿ’ ಅರಸಿ ಬಂದಿದೆ.
ದೀಕ್ಷಾ ವಿ. ಕೂಡ್ಲು :
ವಸಂತ ಹಾಗೂ ದೀಪಾ ದಂಪತಿ ಪುತ್ರಿ ಉತ್ತಮ ಕ್ರೀಡಾಪಟು. ಓಟಗಾರ್ತಿಯಾಗಿ ತನ್ನ ಕ್ರೀಡಾ ಜೀವನ ಆರಂಭಿಸಿದ ಈಕೆ ಬಳಿಕ ತೈಕೊಂಡಾ ಅಭ್ಯಾಸವನ್ನು ಜಯನ್ ಮಾಸ್ತರ್‌ದಿಂದ ಆರಂಭಿಸಿದಳು. ಬಳಿಕ ಕಬಡ್ಡಿಯಲ್ಲೂ ತನ್ನ ಸಾಮರ್ಥ್ಯವನ್ನು ಮುಂದವರಿಸಿದಳು. ಈಕೆ ನೇಪಾಳದಲ್ಲಿ ಜರಗಿದೆ ಇಂಡೋ ನೇಪಾಟ್ ಓಪನ್ ಇಂಟರ್ ನೇಶನಲ್ ತೈಕೊಂಡಾ ಚಾಂಪಿಯನ್ ಶಿಪ್ 2023 ಇದರಲ್ಲಿ ಚಿನ್ನದ ಪದಕ, ಎರ್ನಾಕುಳಂನಲ್ಲಿ ನಡೆದ ಕೇರಳ ರಾಜ್ಯಮಟ್ಟದ ಶಾಲಾ ತೈಕೊಂಡಾ ಚಾಂಪಿಯನ್ ಶಿಪ್ 2024-25 ಇದರಲ್ಲಿ ಚಿನ್ನದ ಪದಕ, ಮಧ್ಯಪ್ರದೇಶದ ದೇವಾಸ್‌ನಲ್ಲಿ ನಡೆದ 68ನೇಯ ರಾಷ್ಟ್ರ ಮಟ್ಟದ ಶಾಲಾ ತೈಕೊಂಡಾ ಚಾಂಪಿಯನ್‌ಶಿಪ್ 2024 25ರಲ್ಲಿ ಭಾಗವಹಿಸುವಿಕೆ, ಎರ್ನಾಕುಳಂನಲ್ಲಿ ನಡೆದ ಕೇರಳ ರಾಜ್ಯಮಟ್ಟದ ಶಾಲಾ ಕಬಡ್ಡಿ ಚಾಂಪಿಯನ್‌ಶಿಪ್ 2024 25 ಇದರಲ್ಲಿ ಕಂಚಿನ ಪದಕ, ಪಾಲಕ್ಕಾಡಿನಲ್ಲಿ ನಡೆದ ಕೇರಳ ರಾಜ್ಯಮಟ್ಟದ ಶಾಲಾ ಕಬಡ್ಡಿ ಚಾಂಪಿಯನ್ ಶಿಪ್ 2023-24 ಇದರಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾಳೆ. ಸದ್ಯ ಈಕೆ ತಿರುವನಂತಪುರದಲ್ಲಿ ಕ್ರೀಡಾಶಾಲೆಯಲ್ಲಿ ಕಲಿಕೆಯನ್ನು ಮುಂದುವರಿಸುತ್ತಿದ್ದಾಳೆ. ಈ ವರ್ಷದ ‘ರಂಗ ಚಿನ್ನಾರಿ ಯುವ ಪ್ರಶಸ್ತಿ’ಗೆ ಇವಳನ್ನು ಆಯ್ಕೆ ಮಾಡಲಾಗಿದೆ.