ಸುಳ್ಯ : ವಿಶ್ವ ನೃತ್ಯ ದಿನದ ಅಂಗವಾಗಿ ಗುರುದೇವ ಲಲಿತಕಲಾ ಅಕಾಡೆಮಿ ವತಿಯಿಂದ ದಿನಾಂಕ 29 ಏಪ್ರಿಲ್ 2025ರಂದು ವಿಶ್ವ ನೃತ್ಯ ದಿನ 2025 ಸುಳ್ಯ ತಾಲೂಕಿನ ಕನಕಮಜಲಿನ ಕನಕ ಕಲಾ ಗ್ರಾಮದಲ್ಲಿ ನಡೆಯಿತು.
ಇದರ ಅಂಗವಾಗಿ ಬೆಳಗ್ಗೆ 9-00 ಗಂಟೆಯಿಂದ ರಾತ್ರಿ ತನಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ ನಡೆದ ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳನ್ನು ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್ ಉದ್ಘಾಟಿಸಿ ಶುಭ ಹಾರೈಸಿದರು. ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಕಾಮತ್, ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರ್, ಭರತನಾಟ್ಯ ಕಲಾವಿದೆ ಮಂಜುಶ್ರೀ ರಾಘವ್, ಕನಕಮಜಲು ಗ್ರಾ.ಪಂ. ಅಧ್ಯಕ್ಷೆ ಶಾರದಾ ಉಗ್ಗಮೂಲೆ, ಎಸ್. ಗೋಪಾಲಕೃಷ್ಣ ಮೂರ್ಜೆ ಭಾಗವಹಿಸಿದ್ದರು.
ಗುರುದೇವ ಲಲಿತ ಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಧಾಕೃಷ್ಣ ಪಿ.ಎಂ. ಉಪಸ್ಥಿತರಿದ್ದರು. ಅಕಾಡೆಮಿಯ ಕಲಾ ನಿರ್ದೇಶಕಿ ಡಾ. ಚೇತನಾ ರಾಧಾಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ದಾಮೋದರ ಕಣಜಾಲು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಸಂಜೆಯಿಂದ ಕುಣಿತ ಭಜನೆ, ಏಕವ್ಯಕ್ತಿ ಭರತನಾಟ್ಯ, ಸಮೂಹ ಭರತನಾಟ್ಯ, ಕೂಚಿಪುಡಿ, ಸಿತಾರ್ ವಾದನ, ಏಕವ್ಯಕ್ತಿ ಹಾಗೂ ವಿವಿಧ ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳು ಪ್ರಸ್ತುತಗೊಂಡವು.