ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕ.ಸಾ.ಪ. ಮಂಗಳೂರು ತಾಲೂಕು ಘಟಕದ ವತಿಯಿಂದ ಮಂಗಳೂರಿನ ಅಳಕೆಯ ‘ಗುಲಾಬಿ ಶ್ರೀಪಾದ ನಿವಾಸ’ದ ಸಭಾಂಗಣದಲ್ಲಿ ದಿನಾಂಕ 05-05-2025ರಂದು ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂದೇಶ ನೀಡಿದ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಶ್ರೀಕೃಷ್ಣ ಭಟ್ಟ ಸುಣ್ಣಂಗುಳಿ “ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯ ಮೂಲಕ ಇಂದಿನ ಯುವ ಜನತೆಯಲ್ಲಿ ಕನ್ನಡದ ಅಭಿಮಾನ ಮತ್ತು ಮಮತೆ ತುಂಬಬೇಕು. ಕನ್ನಡ ಸಾಹಿತ್ಯ ಪರಿಷತ್ತನ್ನು ಸಂಸ್ಥಾಪಿಸಿ, ಅದ್ಭುತವಾದ ಸಮಾಜಮುಖೀ ಕಾರ್ಯಗಳನ್ನು ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯದಂತೆ ಇಂದಿಗೂ ಪರಿಷತ್ತು ಕನ್ನಡದ ಧ್ವನಿಯಾಗಿ ಹತ್ತು ಹಲವು ಮಹತ್ತರ ಕಾರ್ಯಗಳನ್ನೆಸಗುತ್ತಾ ಮುಂದುವರಿಯುತ್ತಿರುವುದು ಹೆಮ್ಮೆಯ ವಿಚಾರ. ಶಾಲೆ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದತ್ತ ಒಲವು ಕಡಿಮೆಯಾಗುತ್ತಿರುವುದು ಆತಂಕದ ಸಂಗತಿ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತಿದ್ದು, ಈ ಪರಿಷತ್ತು ಕನ್ನಡಿಗರ ಏಕತೆಯ ಸಂಕೇತ” ಎಂದು ನುಡಿದರು.
ಆರಂಭದಲ್ಲಿ ಪರಿಷತ್ತಿನ ಸಂಸ್ಥಾಪಕ ನಾಲ್ವಡಿ ಕೃಷ್ಣ ರಾಜ ಒಡೆಯರ್ ರ ಭಾವಚಿತ್ರಕ್ಕೆ ಪುಷ್ಪ ವೃಷ್ಟಿಯೊಂದಿಗೆ ಗೌರವ ಸಮರ್ಪಿಸಲಾಯಿತು. ಕ.ಸಾ.ಪ. ಕೇಂದ್ರ ಮಾರ್ಗದರ್ಶಕ ಸಮಿತಿ ಸದಸ್ಯ ಡಾ. ಮುರಲೀಮೋಹನ್ ಚೂಂತಾರ್ ಸ್ವಾಗತಿಸಿದರು. ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ರತ್ನಾವತಿ ಜೆ. ಬೈಕಾಡಿ ಕನ್ನಡ ಪ್ರಾರ್ಥನೆ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸನತ್ ಕುಮಾರ್ ಜೈನ್, ರವೀಂದ್ರನಾಥ ಕೆ.ಪಿ., ಹೇಮಾ ರೇವಣ್ಕರ್, ಡಾ. ಸೌಜನ್ಯ ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಎನ್. ಗಣೇಶ್ ಪ್ರಸಾದ್ ಜೀ ನಿರೂಪಿಸಿ, ಗೌರವ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ವಂದಿಸಿದರು.