ಬೆಳಗಾವಿ : ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ಜೀವಮಾನ ಸಾಧನೆಗಾಗಿ 2024ನೇ ಸಾಲಿನ ‘ಕಾದಂಬರಿ ಸಾಹಿತ್ಯ ಪ್ರಶಸ್ತಿ’ಗೆ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಇವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ರೂ. ಐವತ್ತು ಸಾವಿರ ನಗದು, ಸ್ಮರಣಿಕೆ ಹೊಂದಿದ್ದು, ದಿನಾಂಕ 25 ಮೇ 2025ರಂದು ಸಮಾರಂಭ ನಡೆಯಲಿದೆ.
ಬರಗೂರು ರಾಮಚಂದ್ರಪ್ಪನವರು 18 ಅಕ್ಟೋಬರ್ 1946ರಂದು ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿವಿ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಇವರು ಸೇವೆ ಸಲ್ಲಿಸಿದ್ದು, ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಇವರು ಕೆಲಸ ನಿರ್ವಹಿಸಿದ್ದಾರೆ. ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಬಸವರಾಜ ಕಟ್ಟೀಮನಿ ಇವರ ತತ್ವ-ಆದರ್ಶಗಳಂತೆ ಬರೆಯುತ್ತ, ಬದುಕು ನಡೆಸಿದ್ದಾರೆ. 13 ಕಾದಂಬರಿ ರಚಿಸಿದ್ದು, ಈ ಕ್ಷೇತ್ರವನ್ನು ಸಮೃದ್ಧಗೊಳಿಸಿದ್ದಾರೆ. ‘ಸುಂಟರಗಾಳಿ’ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ.