ಬೆಂಗಳೂರು : ಕನ್ನಡ ನಾಡಿನ ಹಿರಿಯ ಸಾಹಿತಿ, ವಿಮರ್ಶಕರು, ಕವಿ ಚಿಂತಕರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿದ್ದ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ಇವರು ವಯೋಸಹಜ ಅನಾರೋಗ್ಯದಿಂದಾಗಿ ದಿನಾಂಕ 06 ಏಪ್ರಿಲ್ 2025ರಂದು ರಾತ್ರಿ ನಿಧನರಾಗಿದ್ದಾರೆ. ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ 1931ರಲ್ಲಿ ಜನಿಸಿದ ಸಿದ್ದಲಿಂಗಯ್ಯರವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ ಪಡೆದಿದ್ದರು. ಇದೇ ವಿಶ್ವವಿದ್ಯಾಲಯದಿಂದ 1961ರಲ್ಲಿ ಸ್ನಾತಕೋತ್ತರ ಪದವೀಧರರಾಗಿ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಉದ್ಯೋಗ ಆರಂಭಿಸಿದ್ದರು. ಮುಂದೆ ಪ್ರಾಂಶುಪಾಲರಾಗಿ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು.
ಸಾಂಸ್ಕೃತಿಕ ಜಗತ್ತಿಗೆ ಕವಿ ಜಿ.ಎಸ್. ಸಿದ್ದಲಿಂಗಯ್ಯರ ಕೊಡುಗೆ ಗಮನಾರ್ಹವಾದದ್ದು. 1989ರಿಂದ 1992ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ 17ನೇ ಅಧ್ಯಕ್ಷರಾಗಿ ಅವರು ಕೈಗೊಂಡ ಕೆಲಸಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ಸದೃಢವಾಗಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಸಾಹಿತ್ಯ ಪರಿಷತ್ತಿಗೆ ಒಂದು ನಿರ್ದಿಷ್ಟ ಧ್ವಜವನ್ನು ರೂಪಿಸುವಲ್ಲಿ ಅವರ ಪಾತ್ರ ಮಹತ್ವದ್ದು. ಆಡಳಿತಾತ್ಮಕವಾಗಿ, ಆರ್ಥಿಕವಾಗಿ ಪರಿಷತ್ತನ್ನು ಕಟ್ಟುವಲ್ಲಿ ಶ್ರಮಿಸಿದವರು ಜಿ.ಎಸ್. ಸಿದ್ದಲಿಂಗಯ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳಿಗೆ ವಿಶೇಷ ಗಮನ ಕೊಟ್ಟರು. ಜಿ.ಎಸ್. ಸಿದ್ದಲಿಂಗಯ್ಯ ಕವಿಯಾಗಿ, ವಿಮರ್ಶಕರಾಗಿ, ಅನುವಾದಕರಾಗಿ ಕನ್ನಡ ಪುಸ್ತಕ ಲೋಕಕ್ಕೆ ಅನನ್ಯ ಕೊಡುಗೆ ಕೊಟ್ಟಿದ್ದಾರೆ.
‘ರಸಗಂಗೆ’, ‘ಉತ್ತರ’, ‘ಚಿತ್ರ-ವಿಚಿತ್ರ’, ‘ಐವತ್ತರ ನೆರಳು’ ಸೇರಿ ವಿವಿಧ ಕವನ ಸಂಕಲನ, ‘ಶ್ರೀ ಕವಿ ಲಕ್ಷ್ಮೀಶ’, ‘ರತ್ನಾಕರವರ್ಣಿ’, ‘ಹೊಸಗನ್ನಡ ಕಾವ್ಯ’, ‘ಪಂಚಮುಖ ಚಾಮರಸ’, ‘ವಚನ ಸಾಹಿತ್ಯ-ಒಂದು ಇಣುಕು ನೋಟ’ ಸೇರಿ ವಿವಿಧ ವಿಮರ್ಶಾ ಕೃತಿಗಳು, ‘ಮಹಾನುಭಾವ ಬುದ್ಧ’, ‘ವಿರತಿಯ ಸಿರಿ ಸಪ್ಪಣ್ಣನವರು’, ‘ಬಸವಣ್ಣ’ ಮೊದಲಾದ ಜೀವನಚರಿತ್ರೆ, ‘ಶತಾಬಿ ದೀಪ’, ‘ಸಾಲು ದೀಪಗಳು’, ‘ಅಣ್ಣನ ನೂರೊಂದು ವನಗಳು’ ಸೇರಿ ವಿವಿಧ ಸಂಪಾದಿತ ಕೃತಿಗಳು ಸೇರಿ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ.
ತುಮಕೂರಿನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮುಂಬೈನ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಸೇರಿ ಹಲವು ಗೌರವಕ್ಕೆ ಹಾಗೂ ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಬಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.