10 ಏಪ್ರಿಲ್ 2023, ಕಾರ್ಕಳ: ಕನ್ನಡ ಸಂಘ, ಕಾಂತಾವರ (ರಿ.) ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಜಂಟಿಯಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ‘ಅರಿವು ತಿಳಿವು’ 16ನೇ ಕಾರ್ಯಕ್ರಮವು 15-04-2023 ಶನಿವಾರ ಸಂಜೆ 5.00ಕ್ಕೆ ‘ಸಂಭ್ರಮ’ ಹೋಟೇಲ್ ಪ್ರಕಾಶ್, ಕಾರ್ಕಳ ಇಲ್ಲಿ ಡಾ. ಯೋಗೀಶ್ ಕೈರೋಡಿಯವರು ‘ಹೊಸಗನ್ನಡ ಕಾವ್ಯಶಕ್ತಿ ಮತ್ತು ಸೌಂದರ್ಯ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಲು ಕನ್ನಡ ಸಂಘ, ಕಾಂತಾವರ (ರಿ.) ಮತ್ತು ಅ.ಭಾ.ಸಾ.ಪ. ಕಾರ್ಕಳದ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತವನ್ನು ಕೋರಿದ್ದಾರೆ.
ಉಪನ್ಯಾಸ ನೀಡಲಿರುವ ಡಾ. ಯೋಗೀಶ್ ಕೈರೋಡಿ ದಕ್ಷಿಣ ಕನ್ನಡ ಜಿಲ್ಲಾ ಬೆಳ್ತಂಗಡಿ ತಾಲೂಕಿನ ಸಿದ್ಧಕಟ್ಟೆ ಸಮೀಪದ ಆರಂಬೋಡಿಯವರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, 2011ರಲ್ಲಿ ಮುಂಬಯ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ತಾಳ್ತಜೆ ವಸಂತ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ. ಪದವಿಯನ್ನೂ ಗಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಸಹಾಯಕರಾಗಿ ದುಡಿದ ಇವರು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಒಂದು ಕವನ ಸಂಕಲನ ಮತ್ತು ಎರಡು ಲೇಖನಗಳ ಸಂಕಲನಗಳು ಪಕಟಗೊಂಡಿವೆ. ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ “ಮದಪ್ಪರಾವಂದಿ ತುಳುವೆರ್” ಪುಸ್ತಕ ಮಾಲಿಕೆಯಲ್ಲಿ “ತುಳು ಯಕ್ಷಗಾನ ಸ್ವರೂಪ ಮತ್ತು ಸಾಧ್ಯತೆ” ಎಂಬ ಕೃತಿ ಪ್ರಕಟಗೊಂಡಿದೆ. ‘ನಾಡಿಗೆ ನಮಸ್ಕಾರ ಮಾಲೆ’ಯಲ್ಲಿ ‘ಮಿಜಾರು ಅಣ್ಣಪ್ಪ’ ಮತ್ತು ”ಕೆಮಣ್ಣು ನಾರಣಪ್ಪಯ್ಯ’ ಕೃತಿಗಳೂ ಪ್ರಕಟಗೊಂಡಿವೆ. ವಿವಿಧ ಸಂಚಿಕೆಗಳ ಸಂಪಾದಕರಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕನ್ನಡ ಮತ್ತು ತುಳು ಭಾಷಾ ಪಠ್ಯ ರಚನಾ ಸಮಿತಿಯ ಸದಸ್ಯರಾಗಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಗ್ರಾಮಚರಿತ್ರೆ ಕೋಶದ ಯೋಜನೆಯಲ್ಲಿ ಸಂಶೋಧಕರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಪಡೆದಿದ್ದಾರೆ. ಯಕ್ಷಗಾನ ಮತ್ತು ಸಾಹಿತ್ಯದ ಬಗ್ಗೆ ತಳಸ್ಪರ್ಶಿ ಅಧ್ಯಯನವನ್ನು ಪೂರೈಸಿದ ಇವರ ಆಸಕ್ತಿಯ ಕ್ಷೇತ್ರಗಳು ಸಾಹಿತ್ಯ, ಯಕ್ಷಗಾನ ಮತ್ತು ಬರವಣಿಗೆ. ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿಯೂ ಪ್ರಭುತ್ವವನ್ನು ಹೊಂದಿರುವ ಇವರು ಪ್ರಸ್ತುತ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.