ಬೆಂಗಳೂರು : ಸುಂದರ ಪ್ರಕಾಶನವು ಆಯೋಜಿಸಿದ್ದ ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭವು ದಿನಾಂಕ 11 ಮೇ 2025ರಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೌರಿ ಸುಂದರ್ ಪ್ರಶಸ್ತಿ ಸಮಿತಿ ಅಧ್ಯಕ್ಷ ಬಿ.ಆರ್. ಲಕ್ಷ್ಮಣರಾವ್ ಮಾತನಾಡಿ “ಯಾವುದೇ ವ್ಯಕ್ತಿಗೆ ಪ್ರಶಸ್ತಿ ದೊರೆಯುವುದು ಅವರು ಮಾಡಿದ ಕೆಲಸಕ್ಕೇ ಹೊರತು ಅವರು ನಮ್ಮ ಬಂಧು-ಬಳಗ ಅಥವಾ ಗೆಳೆಯರೆಂದಲ್ಲ. ಕಲಾವಿದರಿಗೆ ಅವರ ಕಲೆ ಜೀವನೋತ್ಸಾಹ ನೀಡುತ್ತದೆ. ಕಲೆ ಇದ್ದವರಿಗೆ ಎಂದಿಗೂ ಜೀವನ ಸಾಕಾಯಿತು ಎಂದು ಅನ್ನಿಸುವುದಿಲ್ಲ. ಅಂತೆಯೇ ಗೌರಿಸುಂದರ್ ಅವರು ಕೂಡ ಸದಾ ಜೀವನೋತ್ಸಾಹಿಯಾಗಿರುತ್ತಿದ್ದರು. ಅದಕ್ಕೆ ಅವರು ಕರಗತ ಮಾಡಿಕೊಂಡಿದ್ದ ಕಲೆಯೇ ಕಾರಣ. ಅಂತಹ ಕಲೆಯ ಸೇವೆ ಮಾಡುತ್ತಿರುವ ಡಾ. ಸುಷ್ಮಾ ಎಸ್.ವಿ.ಯವರಿಗೆ ಈ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣ” ಎಂದು ಹೇಳಿದರು.
ಸಾಹಿತಿ ಎಚ್. ಗೋಪಾಲಕೃಷ್ಣ, ರಂಗಕರ್ಮಿ ಗುಂಡಣ್ಣ ಮಾತನಾಡಿದರು. ನಟಿ ಡಾ. ಸುಷ್ಮಾ ಎಸ್.ವಿ.ಯವರಿಗೆ ಗೌರಿಸುಂದರ್ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಡಾ. ಸುಷ್ಮಾ ಎಸ್.ವಿ. ಮಾತನಾಡಿ “ಬದುಕಿನಲ್ಲಿ ಏರು ಪೇರುಗಳನ್ನು ಕಂಡಿದ್ದೇನೆ. ಒಬ್ಬ ಕಲಾವಿದನಿಗೆ ತನ್ನ ಎಲ್ಲಾ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸಲು ಹೆಚ್ಚು ಅವಕಾಶ ಇರುವುದು ರಂಗಭೂಮಿಯಲ್ಲಿ ಮಾತ್ರ ಎಂದರು.
ಇದೇ ಸಂದರ್ಭದಲ್ಲಿ ಮಂ.ಆ.ವೆಂಕಟೇಶ್ ಇವರ ‘ಕರ್ನಾಟಕ ರಾಜ್ಯ ರಮಾರಮಣರು’ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ವಿಜಯನಗರ ಬಿಂಬ ಮತ್ತು ಪಿ.ಇ.ಎಸ್. ವಿಶ್ವವಿದ್ಯಾಲಯದ ಶಿಷ್ಯ ವೃಂದದಿಂದ ‘ರಂಗ ಕವನ’ ಪ್ರಾಯೋಗಿಕ ರಂಗ ಪ್ರಸ್ತುತಗೊಂಡಿತು.