11 ಏಪ್ರಿಲ್ 2023, ಕಾಸರಗೋಡು: ರಂಗ ಚೇತನ (ರಿ) ಕಾಸರಗೋಡು ಇದರ ನೇತೃತ್ವದಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕೇಂದ್ರ ಸಮಿತಿಯ ಸಹಬಾಗಿತ್ವದಲ್ಲಿ 3 ದಿನಗಳ ‘ಚಿತ್ತಾರ’ ರಂಗದ ರಂಗೋಲಿ ಸಹವಾಸ ಶಿಬಿರ ದಿನಾಂಕ 10-04-2023ರಂದು ಪೆರ್ಮುದೆ ಶಾಲೆಯಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಾಲನಟಿ ಪೆನ್ಸಿಲ್ ಬಾಕ್ಸ್ ಚಲನಚಿತ್ರದಲ್ಲಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿರುವ ಕು. ದೀಕ್ಷಾ ರೈ ಪುತ್ತೂರು ದೀಪ ಬೆಳಗಿಸಿ, ಚೆಂಡೆ ಬಡಿಯುವುದರ ಮೂಲಕ ನೆರವೇರಿಸಿದರು. ರಂಗ ಚೇತನದ ಗೌರವಾಧ್ಯಕ್ಷರಾದ ಯತೀಶ್ ಕುಮಾರ್ ರೈ ಮುಳ್ಳೇರಿಯ ಇವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಬ್ಬಣ್ಣ ಆಳ್ವ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕೇಂದ್ರ ಸಮಿತಿಯ ಕೋಶಾಧಿಕಾರಿ ಶ್ರೀಮತಿ ಪದ್ಮಾವತಿ ಟೀಚರ್, ಪೈವಳಿಕೆ ಗ್ರಾಮ ಪಂಚಾಯತ್ ನ ವಾರ್ಡ್ ಸದಸ್ಯೆ ಇರ್ಶಾನ ಇಸ್ಮಾಯಿಲ್, ಸಾಹಿತಿ ರಂಗ ನಟ ದಿವಾಕರ ಬಲ್ಲಾಳ್ ಉಪಸ್ಥಿತರಿದ್ದರು. ರಂಗ ಚೇತನ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ, ಸದಸ್ಯರಾದ ಶಿವರಾಮ್ ಮಾಸ್ಟರ್ ಕಾಟುಕುಕ್ಕೆ ವಂದಿಸಿದರು. ರಂಗ ಚೇತನ ಕಾಸರಗೋಡು ಇದರ ಜತೆ ಕಾರ್ಯದರ್ಶಿ ಸದಾಶಿವ ಬಾಲಮಿತ್ರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಖ್ಯಾತ ಯುವ ರಂಗಕರ್ಮಿ ಶಶಿ ಕುಳೂರುರವರಿಂದ “ಕರಗಲಿ ಮಂಜು” ಎಂಬ ವಿಷಯದಡಿಯಲ್ಲಿ ತರಗತಿ ನಡೆಸಿದರು. ಮಧ್ಯಾಹ್ನದ ಊಟದ ವಿರಾಮದ ಬಳಿಕ ರಾಜ್ಯ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ ರಂಗಕರ್ಮಿ ನಿರ್ಮಲ ಕುಮಾರ್ ಕಾರಡ್ಕರವರಿಂದ ವಿವಿಧ ರಂಗದ ಮಜಲನ್ನು ಪರಿಚಯಿಸುವ “ರಂಗಾಟಗಳು” ರಂಗದ ರಂಗೋಲಿ, ಮಕ್ಕಳ ವ್ಯಕ್ತಿತ್ವ ವಿಕಸನ ಮಾಡುವ ವಿವಿಧ ಚಟುವಟಿಕೆಗಳು ಜರಗಿತು. ಸಂಜೆ ಚಾ ವಿರಾಮದ ಬಳಿಕ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿರುವ ಕೆ.ಯಂ. ಬಲ್ಲಾಳ್ ರವರು ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳಾದ ತಾಲೀಮು, ಗೊಳಿಯಾಟ, ಕಲ್ಲಾಟ, ಕುಟ್ಟಿ ದೊಣ್ಣೆ, ಕಣ್ಣಾ ಮುಚ್ಚಾಲೆ ಮೊದಲಾದ ಗ್ರಾಮೀಣ ಆಟಗಳನ್ನು ಮಕ್ಕಳಿಂದ ಆಡಿಸಿ ಪುನರುಜ್ಜೀವನ ನೀಡಿ ಪರಿಚಯಿಸಿದರು. ತದನಂತರ ಪೆನ್ಸಿಲ್ ಬಾಕ್ಸ್ ಚಲನಚಿತ್ರ ಪ್ರದರ್ಶನ ಜರಗಿತು. ಈ ಸಂದರ್ಭದಲ್ಲಿ ಈ ಚಲನಚಿತ್ರದಲ್ಲಿ ಅಭಿನಯಿಸಿ ಉತ್ತಮ ಬಾಲನಟಿ ಪ್ರಶಸ್ತಿಯನ್ನು ಮುಡಿಗೇರಿಸಿದ ಕು. ದೀಕ್ಷಾ ಪುತ್ತೂರು ಹಾಗೂ ನಿರ್ದೇಶಕರಾದ ರಝಕ್ ಪುತ್ತೂರುರವನ್ನು ರಂಗ ಚೇತನ (ರಿ) ಕಾಸರಗೋಡು ವತಿಯಿಂದ ಅಭಿನಂದಿಸಲಾಯಿತು. ನಂತರ ಮಕ್ಕಳ ವಿವಿಧ ವಿನೋದಾವಳಿಗಳು ಜರಗಿತು. ಶಿಬಿರಕ್ಕೆ ಗೋಪಾಲ ಮಾಸ್ಟರ್ ಕಾಟುಕುಕ್ಕೆ, ವಸಂತ ಮಾಸ್ಟರ್ ಮೂಡಂಬೈಲ್, ಪ್ರಸಾದ್ ಮುಗು, ಮೆಲ್ವಿನ್ ಪೆರ್ಮುದೆ, ಜಯಪ್ರಸಾದ್ ಮಾಸ್ಟರ್ ಪೆರ್ಮುದೆ, ಮೊಹಮ್ಮದಾಲಿ ಮಾಣಿ ಹಾಗೂ SDPHSS ಧರ್ಮತಡ್ಕ ಶಾಲಾ NSS ಘಟಕದ ವಿದ್ಯಾರ್ಥಿಗಳು ಮೊದಲಾದವರು ಸಹಕರಿಸಿದರು.