ಉರ್ವ : ಕೆನರಾ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕಿ ರಾಜೇಶ್ವರಿ ಕುಡುಪು ಇವರು ರಚಿಸಿದ ‘ಕಲಾಸಂಪದ’ ಚಿತ್ರಕಲಾ ಮಾರ್ಗದರ್ಶಿ ಪುಸ್ತಕ ಬಿಡುಗಡೆ ನಗರದ ಪತ್ರಿಕಾಭವನದಲ್ಲಿ ದಿನಾಂಕ 16 ಮೇ 2025ರಂದು ನಡೆಯಿತು.
ಪುಸ್ತಕ ಬಿಡುಗಡೆಗೊಳಿಸಿದ ಮಂಗಳೂರು ಉತ್ತರ ವಲಯದ ಜೇಮ್ಸ್ ಕುಟಿನ್ಹ ಮಾತನಾಡಿ, “ಕಲಾಶಿಕ್ಷಕಿಯಾಗಿ ರಾಜೇಶ್ವರಿಯವರ ಸೇವೆ ಮೆಚ್ಚುವಂತದ್ದು. ಉತ್ತರ ವಲಯದಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಚಿತ್ರಕಲಾ ಗ್ರೇಡಿಂಗ್ ಪರೀಕ್ಷೆಗೆ ಹಾಜರಾಗಲು ವಿಶೇಷ ಕ್ರಮ ವಹಿಸಲಾಗುವುದು, ‘ಕಲಾಸಂಪದ’ ಪುಸ್ತಕ ಚಿತ್ರಕಲಾ ವಿದ್ಯಾರ್ಥಿಗಳಿಗೆ ಉತ್ತಮ ಕೈಪಿಡಿಯಾಗಿದ್ದು, ಎಲ್ಲರೂ ಕೊಂಡು ಓದಬೇಕು” ಎಂದರು.
ಲೇಖಕಿ ರಾಜೇಶ್ವರಿ ಕುಡುಪು ಮಾತನಾಡಿ “ರಚನಾ ಕೌಶಲ, ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಈ ರೀತಿಯ ಕಲೆಯನ್ನು ಇನ್ನು ಹೆಚ್ಚು ವಿದ್ಯಾರ್ಥಿಗಳನ್ನು ತಲುಪಬೇಕು. ಈ ಉದ್ದೇಶದಿಂದ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ‘ಕಲಾಸಂಪಕ’ ಎಂಬ ಪುಸ್ತಕ ರಚನೆ ಮಾಡಿ ಎರಡನೇ ಆವೃತ್ತಿಯನ್ನು ಕನ್ನಡ, ಆಂಗ್ಲ ಮಾಧ್ಯಮದೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಈ ಪುಸ್ತಕ ಎಂಟನೇ ತರಗತಿ ಮಕ್ಕಳಿಗೆ ಮಾರ್ಗದರ್ಶನವಾಗಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಗ್ರೇಡ್ ಪರೀಕ್ಷೆಗೆ ಹಾಜರಿರುವ ಮಕ್ಕಳಿಗೂ ಇದು ಉಪಯುಕ್ತವಾಗಿದೆ. ಇದನ್ನು ಶಿಕ್ಷಣ ಇಲಾಖೆಯ ಚಿತ್ರಕಲಾ ಶಿಕ್ಷಕರ ಕೈಪಿಡಿ, ಚಿತ್ರಕಲಾ ಸಿಂಚನ ಇವೆಲ್ಲದರ ಮಾರ್ಗದರ್ಶನದಲ್ಲಿ ಹಾಗೂ ಅದೇ ಮಾದರಿಯಲ್ಲಿ ರಚಿಸಲಾಗಿದೆ” ಎಂದು ತಿಳಿಸಿದರು.
ಕೆನರಾ ಹೈಸ್ಕೂಲ್ ಸಂಚಾಲಕಿ ಅಶ್ವಿನಿ ಕಾಮತ್, ಡೊಂಗರಕೇರಿ ಕೆನರಾ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಅರುಣಾಕುಮಾರಿ ಸಿ., ಹಿರಿಯ ಕಲಾವಿದರಾದ ಪೆರ್ಮುದೆ ಮೋಹನ್ ಕುಮಾರ್. ವಸಂತ ಕೇದಿಗೆ, ರಾಜೇಂದ್ರ ಕೇದಿಗೆ ಉಪಸ್ಥಿತರಿದ್ದರು.