ನೀಲೇಶ್ವರಂ : ಕಲ್ಯಾಶೇರಿ ಕೃಷ್ಣನ್ ನಂಬ್ಯಾರ್ ಭಾಗವತರ್ ಸ್ಮಾರಕ ಸಂಗೀತ ಸಭೆಯ ಪ್ರಥಮ ‘ಸಂಗೀತ ಜ್ಯೋತಿಶ್ರೀ ಪ್ರಶಸ್ತಿ’ಯನ್ನು ಪ್ರಸಿದ್ಧ ಸಂಗೀತಜ್ಞ ಯೋಗೀಶ ಶರ್ಮಾ ಬಳ್ಳಪದವು ಇವರಿಗೆ ದಿನಾಂಕ 04 ಮೇ 2025ರಂದು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ಸಮರ್ಪಣೆಯು ಸಂಘದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿಶೇಷ ಸಮಾರಂಭದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಬೇಕಲ್ ಗೋಕುಲಂ ಗೋಶಾಲಾ ಟ್ರಸ್ಟಿನ ವಿಷ್ಣು ಪ್ರಸಾದ್ ಹೆಬ್ಬಾರ್ ಇವರು ಉದ್ಘಾಟಿಸಿ, ಪ್ರಶಸ್ತಿಯನ್ನು ಯೋಗೀಶ ಶರ್ಮಾರವರಿಗೆ ಪ್ರದಾನಿಸಿದರು. ಸಭೆಯ ಅಧ್ಯಕ್ಷತೆಯನ್ನು ನರೇಂದ್ರನ್ ಕರಿಂಗಾಟ್ ವಹಿಸಿದ್ದರು ಹಾಗೂ ಪ್ರೊ. ಕೆ.ಪಿ. ಜಯರಾಜನ್ ಅವರು ಮುಖ್ಯ ಪ್ರಭಾಷಣ ನೀಡಿದರು.
ಯೋಗೀಶ ಶರ್ಮಾ ಬಳ್ಳಪದವು ಇವರ ಸಾಧನೆಗಳ ಪರಿಚಯವನ್ನು ಶ್ರೀಮತಿ ನಿರಂಜಿನಿ ಜಯರಾಜ್ ನೀಡಿದರು. ಸಂಗೀತ ಕ್ಷೇತ್ರದಲ್ಲಿ ಸುದೀರ್ಘ ಕಾಲದ ನಿಷ್ಠೆಯಿಂದ ಮಾಡಿದ ಕೆಲಸಗಳು, ವೈಶಿಷ್ಟ್ಯಪೂರ್ಣ ಕಲಾಪ್ರದರ್ಶನ ಮತ್ತು ಗುರುವಾಗಿ ನೀಡಿದ ಕೊಡುಗೆಗಳಿಗೆ ಯೋಗೀಶ ಶರ್ಮಾರವರಿಗೆ ಈ ಪ್ರಶಸ್ತಿ ಲಭಿಸಿದೆ. ಎಂ.ಕೆ. ಗೋಪಕುಮಾರ್, ಕೆ.ಎಂ. ಗೋಪಾಲಕೃಷ್ಣನ್ ಮುಂತಾದ ಗಣ್ಯರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಕೆ.ಎಸ್. ಕುಮಾರ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಎಂ.ಕೆ. ಬಾಬುರಾಜ್ ಧನ್ಯವಾದವಿತ್ತರು. ಕಾರ್ಯಕ್ರಮದ ಭಾಗವಾಗಿ ನಡೆದ ಪಂಚರತ್ನ ಕೀರ್ತನೆ ಗಾಯನದಲ್ಲಿ ಹಲವಾರು ಕಲಾವಿದರು ಪಾಲ್ಗೊಂಡರು. ಅಂತಿಮವಾಗಿ ಯೋಗೀಶ ಶರ್ಮಾ ಬಳ್ಳಪದವು ಇವರ ಸಂಗೀತ ಕಚೇರಿ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆಯಿತು.