ಬೆಳ್ತಂಗಡಿ : ಧರ್ಮಸ್ಥಳದ ನಿಡ್ಲೆ ಗ್ರಾಮದಲ್ಲಿ 2000ನೇ ವರ್ಷದಿಂದ ನಡೆಯುತ್ತಿರುವ ‘ಕರುಂಬಿತ್ತಿಲ್ ಶಿಬಿರ’ವನ್ನು ದಿನಾಂಕ 20 ಮೇ 2025ರಿಂದ 25 ಮೇ 2025ರವರೆಗೆ ಅಯೋಜಿಸಲಾಗಿದೆ.
ವಿಶೇಷ ಕಛೇರಿಗಳು, ಶ್ರೇಷ್ಠ ಕಲಾವಿದರ ವಿಶೇಷ ಸಂದರ್ಶನಗಳು, ಪ್ರತಿ ಶಿಬಿರಾರ್ಥಿಗೂ ಮೃದಂಗ, ವಯೊಲಿನ್ ಜೊತೆ ಪ್ರದರ್ಶನ ನೀಡುವ ಅವಕಾಶ, ಸಂಗೀತ ಕ್ವಿಜ್, ಸಂಗೀತ ಪ್ರಾತ್ಯಕ್ಷಿಕೆ, ಯಕ್ಷಗಾನ ಹಾಗೂ ಇನ್ನಿತರ ನೂತನ ಚಟುವಟಿಕೆಗಳು ಈ ಸಲದ ಶಿಬಿರಾರ್ಥಿಗಳಿಗಾಗಿ ಕಾದಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಡಾ. ಎಂ. ಮೋಹನ್ ಆಳ್ವ, ಶಾಸಕ ಹರೀಶ್ ಪೂಂಜ, ಕ್ಲಿವ್ಲ್ಯಾಂಡ್ ವಿ.ವಿ. ಸುಂದರಂ, ವಿ.ವಿ. ರಮಣಮೂರ್ತಿ ಶಿಬಿರವನ್ನು ತಮ್ಮ ಗೌರವ ಉಪಸ್ಥಿತಿಯಿಂದ ಮೆರುಗು ಗೊಳಿಸಲಿದ್ದಾರೆ. ಶಿಬಿರದ ಕೊನೆಯ ದಿನ ಹೆಸರಾಂತ ವಿದ್ವಾಂಸರಾದ ವಿದ್ಯಾಭೂಷಣ ಇವರಿಂದ ಸಂಗೀತ ಕಛೇರಿ ನಡೆಯಲಿದೆ.
ಕರುಂಬಿತ್ತಿಲ್ ಎಂಬ ಪ್ರಶಾಂತ ವಾತಾವರಣದಲ್ಲಿ ಪ್ರತೀ ಮೇ ತಿಂಗಳಲ್ಲಿ ಸಂಗೀತ ಶಿಬಿರದ ಮೂಲಕ ಒಂದು ಪುಟ್ಟ ಸಂಗೀತ ಲೋಕವೇ ಸೃಷ್ಟಿಯಾಗುತ್ತದೆ. ಕರುಂಬಿತ್ತಿಲ್ ಕುಟುಂಬವೇ ಒಂದು ಸಂಪೂರ್ಣ ಸಂಗೀತಮಯವಾದ ಕುಟುಂಬ. ಪ್ರಖ್ಯಾತ ಪಿಟೀಲು ವಿದ್ವಾಂಸ ವಿಠ್ಠಲ ರಾಮಮೂರ್ತಿ ಚೆನ್ನೈ ಹಾಗೂ ಅವರ ಸಹೋದರಿಯರು ಸೇರಿ ಕುಟುಂಬ ಸಮಾರಂಭದಂತೆ ಆರಂಭಗೊಂಡ ಈ ಸಂಗೀತ ಶಿಬಿರವು ಇದೀಗ ಸರ್ವ ಸಂಗೀತ ವಿದ್ಯಾರ್ಥಿಗಳು ಕಾತರದಿಂದ ಕಾಯುವ, 200ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನೊಳಗಂಡ ಸಂಗೀತ ಶಿಬಿರವಾಗಿ ಮಾರ್ಪಟ್ಟಿದೆ.
ಶಿಬಿರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಇತರ ದೂರದೂರಿಂದಲೂ, ವಿದೇಶದಿಂದಲೂ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಒಮ್ಮೆ ಭಾಗವಹಿಸಿದ ಶಿಬಿರಾರ್ಥಿಯು ಮುಂಬರುವ ಶಿಬಿರಗಳಲ್ಲೂ ಭಾಗವಹಿಸಲು ಕಾತರದಿಂದ ಕಾಯುತ್ತಾನೆ. ಈ ವರ್ಷದ ಕರುಂಬಿತ್ತಿಲ್ ಶಿಬಿರದಲ್ಲಿ ಈ ಬಾರಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ವಿದುಷಿ ಆರ್.ಎನ್. ಶ್ರೀಲತಾ, ವಿದ್ವಾನ್ ನೈವೇಲಿ ಆರ್. ಸಂತಾನಗೋಪಾಲನ್, ವಿದ್ವಾನ್ ಹೊಸಹಳ್ಳಿ ವೆಂಕಟ್ರಾಮ್, ವಿದ್ವಾನ್ ಪ್ರೊ. ವಿ.ವಿ. ಸುಬ್ರಹ್ಮಣ್ಯಂ, ವಿದ್ವಾನ್ ನಾಗೈ ಮುರಳೀಧರನ್, ವಿದ್ವಾನ್ ಶ್ರೀಮುಷ್ಣಮ್ ವಿ. ರಾಜಾರಾವ್, ವಿದ್ವಾನ್ ಮಾರುತಿ ಪ್ರಸಾದ್, ವಿದ್ವಾನ್ ಡಿ. ಶ್ರೀನಿವಾಸ್, ವಿದ್ವಾನ್ ವಿದ್ಯಾಭೂಷಣ ಹಾಗೂ ಇನ್ನಿತರ ಕಲಾವಿದರು ಆಗಮಿಸಲಿದ್ದಾರೆ.