ಮಂಗಳೂರು : ಸರಯೂ ಬಾಲಯಕ್ಷ ವೃಂದ ಮಕ್ಕಳ ಮೇಳ ಸಂಸ್ಥೆಯ ರಜತ ಮಹೋತ್ಸವ ಸಂಭ್ರಮದ 2025ನೇ ಸಾಲಿನ ‘ಯಕ್ಷ ಪಕ್ಷ’ ರಜತ ಸಂಭ್ರಮ ಅಷ್ಟಾಹ ಸಪ್ತಾಹವು ದಿನಾಂಕ 16 ಮೇ 2025ರಂದು ಕೊಂಚಾಡಿಯ ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದ ತೋಟ ಮನೆಯಲ್ಲಿ ಉದ್ಘಾಟನೆಗೊಂಡಿತು. ಇದೇ ಸಂದರ್ಭದಲ್ಲಿ ರವಿ ಅಲೆವೂರಾಯರು ವಿರಚಿತ ‘ಯಕ್ಷಾರ್ಯ’ ಅರ್ಥ ಸಹಿತ ಪ್ರಸಂಗಗಳ ಕೃತಿ ಲೋಕಾರ್ಪಣೆಗೊಂಡಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಮಂತ್ರಿಗಳೂ ದೇವಳದ ಅಧ್ಯಕ್ಷರೂ ಆದ ಬಿ. ನಾಗರಾಜ ಶೆಟ್ಟರು “ಶ್ರೀದೇವಳದಲ್ಲಿ ಯಕ್ಷಗಾನದಂತಹಾ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಸರಯೂ ಸಂಸ್ಥೆಯ ಈ ಯಕ್ಷ ಪಕ್ಷವನ್ನು ನಡೆಸುತ್ತಿರುವುದು ಸಂತಸದ ವಿಷಯ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದು, ಸರಯೂ ರಜತ ಸಂಭ್ರಮವನ್ನು ಚೆನ್ನಾಗಿ ನಡೆಸಲಿ” ಎಂದರು.
ಸಭಾ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಯಕ್ಷಾಗಾನಕ್ಕೆ ದಾಖಲೀಕರಣದ ಅಗತ್ಯವಿದೆ. ಎಳೆಯ ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಗೆ, ಹವ್ಯಾಸಿಗಳಿಗೆ ಸುಲಭಸಾಧ್ಯವಾಗಿ ಗ್ರಹಿಸಿ ಸಂಭಾಷಣೆಗೆ ಅನುಕೂಲವಾದ ಸಾಹಿತ್ಯಗಳನ್ನು ಬರೆದು ಅವರನ್ನೂ ಉತ್ತಮ ಕಲಾವಿದರನ್ನಾಗಿ ರೂಪಿಸುವಲ್ಲಿ ಇಂದು ಅನೇಕ ಪುಸ್ತಕಗಳನ್ನು ರವಿ ಅಲೆವೂರಾಯರು ಹೊರತಂದಿದ್ದಾರೆ. ಇಂದು ‘ಯಕ್ಷಾರ್ಯ’ ಎಂಬ ಈ ಗ್ರಂಥವೂ ಅದೇ ರೀತಿ ಯಕ್ಷ ಪ್ರಪಂಚಕ್ಕೆ ಉಪಯುಕ್ತವಾಗಲಿ” ಎಂದು ಹೇಳಿದರು.
ದೇವಳದ ಕೋಶಾಧಿಕಾರಿಗಳಾದ ಶ್ರೀ ರಮಾನ೦ದ ಭಂಡಾರಿಯವರು ಮಾತನಾಡಿ “ಸರಯೂ ಇದರ ಕಾರ್ಯಕ್ರಮಕ್ಕೆ ಯಶಸ್ಸನ್ನು ಕೋರುತ್ತೇನೆ ಮತ್ತು ಇದಕ್ಕೆ ದೇವಳದ ಕಡೆಯಿಂದ ಸಂಪೂರ್ಣ ಸಹಕಾರವಿದೆ” ಎಂದರು. ಮುಖ್ಯ ಅತಿಥಿಗಳಾಗಿ ಯಕ್ಷಮಂಜುಳಾದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್, ಆನಂದ ಶೆಟ್ಟಿ, ಶ್ರೀ ದಯಾನಂದ್, ವಿಪ್ರಸಮಾಗಮದ ಕಾರ್ಯದರ್ಶಿ ಪೂರ್ಣಿಮಾ ಶಾಸ್ತ್ರಿ, ಗೌತಮ್ ಭಂಢಾರಿ, ಮಧುಸೂದನ ಅಲೆವೂರಾಯ, ದೇವಳದ ಪ್ರಬಂಧಕ ಯೋಗೀಶ್ ಕುಮಾರ್ ಉಪಸ್ಥಿತರಿದ್ದರು. ಶ್ರೀ ಸುಧಾಕರ ರಾವ್ ಪೇಜಾವರರು ಕಾರ್ಯಕ್ರಮ ನಿರ್ವಹಿಸಿ, ರಮ್ಯಾ ರಾಘವೇಂದ್ರ ಧನ್ಯವಾದವಿತ್ತರು. ಸಭಾ ಕಾರ್ಯಕ್ರಮದ ಬಳಿಕ ಸರಯೂ ಮಕ್ಕಳ ಮೇಳದಿಂದ ‘ವರಾಹ – ನರಸಿಂಹ’ ಬಯಲಾಟ ನಡೆಯಿತು.
ದಿನಾಂಕ 26 ಮೇ 2025ರಿಂದ 01 ಜೂನ್ 2025ರವರೆಗೆ ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಪ್ತಾಹ ನಡೆಯಲಿದ್ದು, ಸಪ್ತಾಹದ ಉದ್ಘಾಟನೆ ಮತ್ತು ಯಕ್ಷ ರಜತ ನೆನಪಿನ ಸಂಚಿಕೆಯನ್ನು ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಬಿಡುಗಡೆಗೊಳಿಸಲಿದ್ದಾರೆ. ನಂತರ ಏಳು ದಿನಗಳ ಕಾಲ ಜಿಲ್ಲೆಯ ಖ್ಯಾತ ಕಲಾವಿದರ ಒಗ್ಗೂಡುವಿಕೆಯಿಂದ ಬಹ್ಮಕಪಾಲ, ರಾವಣೋದ್ಭವ- ಮಂಡೋದರಿ ಪರಿಣಯ, ಶಶಿಪ್ರಭಾ ಪರಿಣಯ, ಚೂಡಾಮಣಿ, ಅಭಿಮನ್ಯು ಕಾಳಗ, ಶ್ರೀದೇವಿ ಮಹಾತ್ಮೆ ಮತ್ತು ಶ್ರೀನಿವಾಸ ಕಲ್ಯಾಣ ಪ್ರಸಂಗಗಳು ಜರುಗಲಿವೆ.
ಸಾಧಕರಾದ ಚಂದ್ರಶೇಖರ ಧರ್ಮಸ್ಥಳ, ಅಕ್ಷಯ ರಾವ್ ವಿಟ್ಲ, ಅಕ್ಷಯ ಕುಮಾರ್ ಮಾರ್ನಾಡ್, ವಸಂತ ದೇವಾಡಿಗ, ಸುಧಾ ವಿ. ರಾವ್, ಜೆ.ವಿ. ಶೆಟ್ಟಿ, ಜಯರಾಮ ಪದಕಣ್ಣಾಯ, ರಕ್ಷಿತ್ ಶೆಟ್ಟಿ ಪಡ್ರೆ, ರತ್ನಾಕರ ಮಯ್ಯ ಕುಳಾಯಿ ಇವರನ್ನು ಸನ್ಮಾನಿಸಲಾಗುವುದು. ದಿನಾಂಕ 01 ಜೂನ್ 2025ರಂದು ದಿನಪೂರ್ತಿ ಮಹಿಳಾ ಯಕ್ಷಗಾನ ಸಂಭ್ರಮ ನಡೆಯಲಿದೆ. ಸಂಜೆ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಹಿಳಾ ಯಕ್ಷಗಾನ ವಿಚಾರಗೋಷ್ಠಿ ನಡೆಯಲಿದೆ.