ಕಾಸರಗೋಡು : “ಭಜನೆಯಿಂದ ಮನಶಾಂತಿ ಮತ್ತು ಏಕಾಗ್ರತೆಯನ್ನು ಗಳಿಸಬಹುದು. ಕೋಟಿ ಹಣವಿದ್ದರೂ ಒಂದು ಕ್ಷಣದ ಆಯುಷ್ಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಆಯುಷ್ಯವನ್ನು ನಿರರ್ಥಕವಾಗಿ ಕಳೆಯುವುದರಿಂದ ಏನೇನೂ ಲಾಭವಿಲ್ಲ. ಮಾತೆಯವರು ಮಾತ್ರವೇ ಮುಂದಿನ ಜನಾಂಗಕ್ಕೆ ಸಂಸ್ಕಾರ ಕಲಿಸುವ ಶಕ್ತಿ” ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾಸರಗೋಡು ಜಿಲ್ಲಾ ಸಂಘ ಚಾಲಕ್ ಶ್ರೀ ಪ್ರಭಾಕರ್ ಜೀ ಅವರು ಹೇಳಿದರು.
ಅವರು ಕಾಸರಗೋಡಿನ ಸಾಹಿತ್ಯಿಕ ಸಾಂಸ್ಕೃತಿಕ ಸಂಸ್ಥೆಯವರ ನೇತ್ರತ್ವದಲ್ಲಿ ಕಾಸರಗೋಡಿನ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ‘ಸಂಕೀರ್ತನಾ’ ಸಭಾಂಗಣದಲ್ಲಿ ದಿನಾಂಕ 17 ಮೇ 2025ರಂದು ಜರಗಿದ ‘ಭಜನಾ ಸಂಪದ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಖ್ಯಾತ ವೈದ್ಯರೂ, ಧಾರ್ಮಿಕ ಮುಂದಾಳುಗಳು ಆಗಿದ್ದ ಡಾ. ಅನಂತ ಕಾಮತ್ ರವರು ಮಾತನಾಡಿ “ಅಂತರಂಗ ಶುದ್ಧಿ, ಆತ್ಮ ಶುದ್ಧಿ ಮಾಡಲು, ಜತೆಗೆ ದೇವರ ಪ್ರೀತಿಗೆ ಪಾತ್ರಾರಾಗಲು ಭಜನೆಯೇ ಸರಿಯಾದ ಆಯುಧ” ಎಂದರು.
ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಪುರೋಹಿತರಾದ ವೇದಮೂರ್ತಿ ವೇದವ್ಯಾಸರವರು “ರಂಗಚಿನ್ನಾರಿ ಏರ್ಪಡಿಸಿದ ಈ ಐತಿಹಾಸಿಕ ಕಾರ್ಯಕ್ರಮ ಉಳಿದವರಿಗೆ ಮಾದರಿ” ಎಂದರು. ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಶ್ರೀ ರಾಘವೇಂದ್ರ ಮಠ ಮಂತ್ರಾಲಯದ ಪರವಾಗಿ ಹರಿ ಕೀರ್ತನಕಾರಿ ಮಂಜುಳಾ ಇರಾ, ನಾರಿ ಚಿನ್ನಾರಿಯ ಅಧ್ಯಕ್ಷೆ ಶ್ರೀಮತಿ ಸವಿತಾ ಟೀಚರ್, ‘ಭಜನಾ ಸಂಪದ’ ಕಾರ್ಯಕ್ರಮದ ಭಜನಾ ಗುರುಗಳಾದ ಶ್ರೀಮತಿ ಪ್ರೇಮಾ ಗೋಕುಲದಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
“ಒಂದು ತಂಡ ಒಂದು ಭಜನೆ’ ಯೋಜನೆಯಂತೆ ಸುಮಾರು 350ಕ್ಕಿಂತಲೂ ಅಧಿಕ ಭಜನಾರ್ಥಿಗಳು ಈ ‘ಭಜನಾ ಸಂಪದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾರ್ಮೋನಿಯಂನಲ್ಲಿ ಖ್ಯಾತ ಕಲಾವಿದರಾದ ಸತ್ಯ ನಾರಾಯಣ ಐಲ ಹಾಗೂ ಲವ ಕುಮಾರ್ ಐಲ, ತಬಲಾದಲ್ಲಿ ಜಗದೀಶ್ ಉಪ್ಪಳ ಹಾಗೂ ತೇಜಸ್ ಸಹಕರಿಸಿದರು.
ಪ್ರಾರ್ಥನೆಯನ್ನು ಕುಮಾರಿಯರಾದ ಆದಿರಾ ಉಣ್ಣಿ, ಆದಿತ್ಯಾ ಉಣ್ಣಿ, ಅನತಿ ಶಶಿಧರನ್ ಹಾಡಿದರು. ರಂಗ ಚಿನ್ನಾರಿಯ ನಿರ್ದೇಶಕರೂ, ‘ಭಜನಾ ಸಂಪದ’ದ ಸಂಚಾಲಕರೂ ಆದ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿ ‘ರಂಗಚಿನ್ನಾರಿ’ ಸಂಸ್ಥೆಯ ಬೆಳವಣಿಗೆ ಬಗ್ಗೆ ತಿಳಿಸಿ ಸ್ವಾಗತಿಸಿದರು. ಅಧ್ಯಾಪಕರಾದ ಕಿರಣ್ ಪ್ರಸಾದ್ ಕೂಡ್ಲು ಕಾರ್ಯಕ್ರಮವನ್ನು ನಿರ್ವಹಿಸಿದರು. ಸಮಾಜಮುಖಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿರುವ ಉದ್ಯಮಿ ಜೀವಾನಂದ ಪ್ರಭು, ಕೃಷ್ಣಾನಂದ ಮಲ್ಯ, ಕೀರ್ತನೆಕಾರರಾದ ಶಶಿಕುಮಾರ್ ನಾರಾಯಣ ದಾಸ್, ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸ್ವರ ಚಿನ್ನಾರಿಯ ಅಧ್ಯಕ್ಷರಾದ ಪುರುಷೋತ್ತಮ ಕೊಪ್ಪಲ್, ಗಾಯಕಿ ಬಬಿತಾ ಆಚಾರ್ಯ, ನಿವೃತ್ತ ಅಧ್ಯಾಪಿಕೆ ಉಷಾ ಟೀಚರ್, ರಂಗಚಿನ್ನಾರಿ ನಿರ್ದೇಶಕರಾದ ಸತ್ಯನಾರಾಯಣ, ಕಲಾವಿದ ಉದಯ್ ಕುಮಾರ್ ಮನ್ನಿಪ್ಪಾಡಿ, ಕಲಾ ನಿರ್ದೇಶಕ ಜನಾರ್ದನ ಅಣಂಗೂರು, ಎ.ಎನ್. ಅಶೋಕ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.