ಕುಂದಾಪುರ : ಖ್ಯಾತ ವಾಗ್ಮಿಗಳೂ ಸಾಹಿತಿಗಳೂ ಆದ ಕುಂದಾಪುರದ ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಇವರ ಮನೆ ‘ನುಡಿ’ಯಲ್ಲಿ ದಿನಾಂಕ 22 ಮೇ 2025ರಂದು ಸರಳವಾಗಿ ನಡೆದ ಸಮಾರಂಭದಲ್ಲಿ ‘ಮಲೆಯಾಳದ ಆಧುನಿಕ ಸಣ್ಣ ಕಥೆಗಳು’ ಕೃತಿಯು ಲೋಕಾರ್ಪಣೆಗೊಂಡಿತು.
ಈ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಲೇಖಕಿ ವಿಮಲಾ ನಾವಡ “ಜಾಗತೀಕರಣಗೊಂಡ ಇಂದಿನ ಜಗತ್ತಿನಲ್ಲಿ ದೇಶ-ದೇಶಗಳ ನಡುವೆ ಮತ್ತು ಭಾಷೆ-ಭಾಷೆಗಳ ನಡುವಿನ ಸಂಪರ್ಕ ಹೆಚ್ಚಾಗಿದೆ. ಆದ್ದರಿಂದ ಅನುವಾದದ ಮಹತ್ವವು ಹೆಚ್ಚಾಗಿದೆ. ಇವತ್ತು ಮಲೆಯಾಳ ಎನೂ ಗೊತ್ತಿಲ್ಲದೆ ಮಲೆಯಾಳದ ಮಹತ್ವದ ಸಾಹಿತ್ಯ ಕೃತಿಗಳು ನಮಗೆ ಸವಿಯಲು ಸಿಗುತ್ತಿವೆ ಎಂದಾದರೆ ಅದಕ್ಕೆ ಕಾರಣ ನಮ್ಮ ಅನುವಾದಕರೇ ಆಗಿದ್ದಾರೆ” ಎಂದು ಹೇಳಿದರು.
ಎ.ಎಸ್.ಎನ್. ಹೆಬ್ಬಾರ್ ಶುಭಾಶಂಸನೆ ಗೈದರು. ಕೃತಿಯ ಲೇಖಕಿ ಪಾರ್ವತಿ ಜಿ. ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಧಾ ಹೆಬ್ಬಾರ್ ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ-ಮಲೆಯಾಳ ಅನುವಾದಕಿ ಜೆಸ್ಸಿ ಎಲಿಜಬೆತ್ ಜೋಸೆಫ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.